ಬಂಗಾರದ ಕಿರೀಟ ಸರ್ಕಾರಕ್ಕೆ ಒಪ್ಪಿಸಿದ ಡಿಸಿಎಂ ಗೋವಿಂದ ಕಾರಜೋಳ

ಬೆಂಗಳೂರು: ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ ಕ್ಷೇತ್ರದ ಕಾರಜೋಳ ಗ್ರಾಮಸ್ಥರು ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ ಅವರಿಗೆ ಸಮರ್ಪಿಸಿದ್ದ ಬಂಗಾರದ ಕಿರೀಟವನ್ನು ವಿಧಾನಸೌಧದಲ್ಲಿ ಗುರುವಾರ ಮುಖ್ಯಕಾರ್ಯದರ್ಶಿ ಮೂಲಕ ಸರ್ಕಾರಕ್ಕೆ ಒಪ್ಪಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಮ್ಮ ಹುಟ್ಟೂರು ಕಾರಜೋಳ ಗ್ರಾಮದ ಇಡೀ ಗ್ರಾಮಸ್ಥರು ಅತ್ಯಂತ ಪ್ರೀತಿ ಅಭಿಮಾನದಿಂದ 140 ಗ್ರಾಂ ಬಂಗಾರದ ಕಿರೀಟವನ್ನು ಸಮರ್ಪಿಸಿದ್ದರು. ತಾವು ಈ ಗ್ರಾಮದ ಅಭಿವೃದ್ಧಿಗಾಗಿ ಸಲ್ಲಿಸಿದ ಗಣನೀಯ ಸೇವೆ, ಗ್ರಾಮದ ಅಭಿವೃದ್ಧಿಗಾಗಿ ಅತ್ತ್ಯುಮ ಯೋಜನೆಗಳ ಅನುಷ್ಠಾನ, ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ, ತಮ್ಮೂರಿನ ಮನೆಯ ಮಗ ಉಪಮುಖ್ಯಮಂತ್ರಿಯಾಗಿದ್ದಕ್ಕಾಗಿ ಪ್ರೀತಿ ಗೌರವದಿಂದ ಈ ಬಂಗಾರದ ಕಿರೀಟವನ್ನು ಸಮರ್ಪಿಸಿದ್ದರು.
ಕಳೆದ 6 ವರ್ಷಗಳಿಂದ ಸನ್ಮಾನ ಮಾಡಿ, ಸಮರ್ಪಿಸಲು ಪ್ರಯತ್ನಿಸಿದ್ದರು. ನವೆಂಬರ್ 23 ರಂದು ಈ ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ದಿ ಕಾರ್ಯಕ್ರಮದಲ್ಲಿ ಒತ್ತಾಯ ಪೂರ್ವಕವಾಗಿ ಅಭಿಮಾನ, ಪ್ರೀತಿ ವಿಶ್ವಾಸ, ಗೌರವದಿಂದ ಸನ್ಮಾನಿಸಿ, ಈ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದರು.
ತಾವು ಶಾಸಕ, ಮಂತ್ರಿಯಾಗಿ ಮಾಡಿದ ಸೇವೆಯನ್ನು ಪರಿಗಣಿಸಿ ಪೀತಿ, ಗೌರವದಿಂದ ಸನ್ಮಾನಿಸಿದ್ದು, ಈ ಸನ್ಮಾನವು ಸರ್ಕಾರಕ್ಕೆ ಸಲ್ಲುತ್ತದೆ. ಈ ಹಿನ್ನೆಲೆಯಲ್ಲಿ ಈ ಬಂಗಾರದ ಕಿರೀಟವನ್ನು ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಬಾಸ್ಕರ್ ಅವರ ಮೂಲಕ ಸರ್ಕಾರಕ್ಕೆ ಒಪ್ಪಿಸಿರುವುದಾಗಿ ತಿಳಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.