ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಎಚ್‌ ಬೆಂಗಳೂರು– 2040 ಶೃಂಗ’ ಇಂದು: ಭವಿತವ್ಯದ ಸವಾಲು: ‘ಚಿಂತನ– ಮಂಥನ’

ಭವಿತವ್ಯದ ಸವಾಲು: ‘ಚಿಂತನ– ಮಂಥನ’ಕ್ಕೆ ಕಡೆಗೋಲು
Last Updated 10 ಮಾರ್ಚ್ 2022, 21:46 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಭವಿತವ್ಯದ ರೂಪರೇಷೆಗಳನ್ನು ಆಳವಾದ ವಿಶ್ಲೇಷಿಸುವ ಕಳಕಳಿಯೊಂದಿಗೆ, ‘ಪ್ರಜಾವಾಣಿ’ಯ ಸೋದರ ಪತ್ರಿಕೆಯಾದ ಡೆಕ್ಕನ್‌ ಹೆರಾಲ್ಡ್‌ ‘ಡಿಎಚ್‌ ಬೆಂಗಳೂರು 2040 ಶೃಂಗ’ವನ್ನು ಇದೇ ಶುಕ್ರವಾರ (ಮಾರ್ಚ್‌ 11) ಹಮ್ಮಿಕೊಂಡಿದೆ. ದೇಶ ಅತ್ಯಂತ ಪ್ರಭಾವಿ ನೀತಿ ನಿರೂಪಕರು, ಕಾರ್ಪೊರೇಟ್‌ ವಲಯದ ದಿಗ್ಗಜರು, ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಖ್ಯಾತನಾಮರನ್ನೆಲ್ಲ ಒಂದೇ ವೇದಿಕೆಯಲ್ಲಿ ತರುವ ಅಪೂರ್ವ ಕಾರ್ಯಕ್ರಮವಿದು.

‘ಭಾರತದ ಸಿಲಿಕಾನ್‌ ಕಣಿವೆ’ಯ ಮುನ್ನಡೆಗೆ ಸಧೃಢ, ಸುಸ್ಥಿರ ವಿಧಾನವನ್ನು ಕಂಡುಕೊಳ್ಳುವ ಸಲುವಾಗಿ ಏರ್ಪಡಿಸಿರುವ ಈ ಶೃಂಗವು ಡೆಕ್ಕನ್ ಹೆರಾಲ್ಡ್‌ನ ‘ಒಳಿತು ಮಾಡುವ ಶಕ್ತಿ’ ಮತ್ತು ‘ನಗರದ ಚಿಂತನಾಶೀಲತೆಯ ಶಕ್ತಿ’ಗಳ ಸೃಜನಶೀಲ ಬೆಸುಗೆ. ಈ ಧ್ಯೇಯಕ್ಕೆ ಬದ್ಧವಾಗಿರುವ ಆಹ್ವಾನಿತರಷ್ಟೇ ಭಾಗವಹಿಸಬಹುದಾದ ಈ ಕಾರ್ಯಕ್ರಮವು, ನಗರದ ಅಸಂಖ್ಯಾತ ಸವಾಲುಗಳನ್ನು ನಿಭಾಯಿಸುವಂತಹ ಸಮರ್ಥ ಪರಿಹಾರೊಪಾಯಗಳ ಮಂಥನಕ್ಕೆ ಶ್ರೇಷ್ಠ ಚಿಂತಕರಿಗೆ ಕಡೆಗೋಲಾಗಲಿದೆ.

ಘಟಾನುಘಟಿಗಳ ಚಿಂತನಾ ಲಹರಿಯಲ್ಲಿ ತೇಲುವ ಅಪೂರ್ವ ಅವಕಾಶವನ್ನು ಈ ಕಾರ್ಯಕ್ರಮವು ಒದಗಿಸಲಿದೆ. ಇನ್ಫೊಸಿಸ್‌ನ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಆಪ್ತ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿ ಭವಿಷ್ಯದ ಸಂಭಾವ್ಯ ಚಾಂಪಿಯನ್‌ಗಳನ್ನು ರೂಪಿಸುವ ಬಗೆ ಹೇಗೆ ಎಂಬ ಕುರಿತು ಕ್ರಿಕೆಟಿಗ ವಿ.ವಿ.ಎಸ್‌ ಲಕ್ಷ್ಮಣ್‌ ಮತ್ತು ಅಥ್ಲೀಟ್‌ ಅಶ್ವಿನಿ ನಾಚಪ್ಪ ಚರ್ಚಿಸಲಿದ್ದಾರೆ. ಯುವನಾಯಕರಾದ ತೇಜಸ್ವಿ ಸೂರ್ಯ ಹಾಗೂ ರಿಜ್ವಾನ್‌ ಅರ್ಷದ್‌ ಅವರು ನಗರದ ಕುರಿತ ತಮ್ಮ ಕನಸುಗಳನ್ನು ಬಿಚ್ಚಿಡಲಿದ್ದಾರೆ. ಸದ್ಗುರು ಜಗ್ಗಿ ವಾಸುದೇವ ಅವರು ಈ ಮಹಾನಗರದ ಸಮಸ್ಯೆಗಳನ್ನು ನಿಭಾಯಿಸುವುದಕ್ಕೆ ‘ಯೋಗಿ’ಯ ಮಾರ್ಗೋಪಾಯಗಳನ್ನು ಹಂಚಿಕೊಳ್ಳಲಿದ್ದಾರೆ.

ಬಿಗಡಾಯಿಸಲಿರುವ ಸಂಚಾರ ಸಮಸ್ಯೆಯನ್ನು ನಿಭಾಯಿಸುವುದರಿಂದ ಹಿಡಿದು ಕುಡಿಯುವ ನೀರಿನ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸುವವರೆಗೆ, ನಗರದಿಂದ ಚದುರಿ ಹೋದ ಹಕ್ಕಿಗಳನ್ನು ಮರಳಿ ಗೂಡಿಗೆ ತರುವ ಮಾರ್ಗೊಪಾಯದಿಂದ ಹಿಡಿದು ಬೆಂಗಳೂರಿನ ಪಾತಕ ಲೋಕವನ್ನು ಕಟ್ಟಿಹಾಕುವ ತಂತ್ರಗಾರಿಕೆವರೆಗೆ2040ರ ಒಳಗೆ ಸಾಧಿಸಬೇಕಾದ ಹತ್ತು ಹಲವು ಸವಾಲುಗಳ ಕುರಿತ ಸಂವಾದವನ್ನು ಅಚ್ಚುಕಟ್ಟಾದ ಗೋಷ್ಠಿಗಳ ಮೂಲಕ ಕಟ್ಟಿಕೊಡುವುದೇ ಈ ಕಾರ್ಯಕ್ರಮದ ಪ್ರಮುಖ ಕಾರ್ಯಸೂಚಿ.

‘ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಹಸ್ತಕ್ಷೇಪ’ದ ಕುರಿತ ದಿಕ್ಸೂಚಿ ಭಾಷಣದ ಮೂಲಕ ‘ನಾರಾಯಣ ಹೆಲ್ತ್’ನ ಮುಖ್ಯಸ್ಥ ಡಾ.ದೇವಿ ಶೆಟ್ಟಿ ಅವರು ಚಿಂತನ ಮಂಥನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘2040ರತ್ತ ದಾಪುಗಾಲು’ ಕುರಿತು ಮಾತನಾಡಲಿದ್ದಾರೆ. ಡೆಕ್ಕನ್‌ ಹೆರಾಲ್ಡ್‌ ಓದುಗರೂ ಒಳಗೊಂಡಂತೆನಗರದ200 ಕುಶಾಗ್ರಮತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಂವಾದಗಳಷ್ಟೇ ಇರುವುದಲ್ಲ. ನಗರದ ಕಲಾಲೋಕ, ಸಂಸ್ಕೃತಿ ಹಾಗೂ ಪರಂಪರೆ ಕುರಿತು ಫ್ಲ್ಯಾಷ್‌ ಫಿಲ್ಮ್‌ ಫೆಸ್ಟಿವಲ್‌ನ ವಿಜೇತರು ರೂಪಿಸಿರುವ ಕಿರು ಚಿತ್ರಗಳು ಸಿನಿಮೀಯ ವಿಹಾರಕ್ಕೂ ಅವಕಾಶ ಕಲ್ಪಿಸಲಿವೆ. ಅಷ್ಟೇ ಅಲ್ಲ, ನೀರಿನ ಸಂರಕ್ಷಣೆ, ದೈನಂದಿನ ಸಂಚಾರ ಸಮಸ್ಯೆಗಳಿಗೆ ಬೆಂಗಳೂರು ಹ್ಯಾಕ್ ಸ್ಟಾರ್‌ ಹ್ಯಾಕಥಾನ್‌ನಲ್ಲಿ ಕಂಡುಕೊಂಡ ಪರಿಹಾರೋಪಾಯಗಳನ್ನೂ ಕಾಣಬಹುದು. ನಗರದ ಭವಿಷ್ಯದ ಮಹತ್ವಾಕಾಂಕ್ಷೆಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳೂ ಇರಲಿವೆ.

ನಗರದ ಆರೋಗ್ಯ ವ್ಯವಸ್ಥೆಯ ಕರಾಳರೂಪವನ್ನು ಕೋವಿಡ್‌ ಬಿಚ್ಚಿಟ್ಟಿದೆ. ಕೋವಿಡೋತ್ತರ ಭವಿಷ್ಯವನ್ನು ಕಟ್ಟಿಕೊಳ್ಳುವುದಕ್ಕೆ ಸಜ್ಜಾಗಬೇಕಾದ ಅನಿವಾರ್ಯದ ಕುರಿತು ಪ್ರಮುಖ ಗೋಷ್ಠಿಯೊಂದರಲ್ಲಿ ಮಣಿಪಾಲ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ.ಎಚ್‌.ಸುದರ್ಶನ ಬಲ್ಲಾಳ್‌, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ನಿಮ್ಹಾನ್ಸ್‌ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಅವರು ಗಹನವಾದ ಚರ್ಚೆ ನಡೆಸಿಕೊಡಲಿದ್ದಾರೆ.

ಪುರವಂಕರ ಪ್ರಸ್ತುತಪಡಿಸುತ್ತಿರುವ ಹಾಗೂ ಮಣಿಪಾಲ ಆಸ್ಪತ್ರೆ ಪ್ರಾಯೋಜಿತವಾದ ಈ ಶೃಂಗವು ಮರ್ಸಿಡಿಸ್ ಬೆಂಜ್‌, ಯಮ್ಮೀಝ್‌, ಆ್ಯಡ್‌ಫ್ಯಾಕ್ಟರ್ಸ್‌ ಮತ್ತು ಪ್ರಾಮಿಸ್‌ ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT