ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಮಠಕ್ಕೆ ನೂತನ ಪೀಠಾಧ್ಯಕ್ಷ ನೇಮಕ ವಿಚಾರ: ಕೋರ್ಟ್‌ ಮೊರೆಗೆ ತೀರ್ಮಾನ

Last Updated 3 ಡಿಸೆಂಬರ್ 2022, 19:02 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಮಠಕ್ಕೆ ನೂತನ ಪೀಠಾಧ್ಯಕ್ಷ ಅಥವಾ ಆಡಳಿತಾಧಿಕಾರಿ ನೇಮಕ ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಮುಂದುವರಿಸಿದರೆ ನ್ಯಾಯಾಲಯದ ಮೆಟ್ಟಿಲೇರಲು ವೀರಶೈವ ಲಿಂಗಾಯತ ಸಮಾಜದ ಸಭೆ ಶನಿವಾರ ಒಮ್ಮತದ ನಿರ್ಣಯ ಕೈಗೊಂಡಿತು.

ತಾಲ್ಲೂಕಿನ ಸೀಬಾರದಲ್ಲಿರುವ ಎಸ್‌. ನಿಜಲಿಂಗಪ್ಪ ಸ್ಮಾರಕದಲ್ಲಿಮಾಜಿ ಸಚಿವ ಎಚ್‌. ಏಕಾಂತಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಮೂರು ನಿರ್ಣಯಗಳನ್ನು ಅನುಮೋದಿಸಿತು. ಸಭೆಯ ತೀರ್ಮಾನದ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆಯಲು ನಿರ್ಧರಿಸಲಾಯಿತು.

‘ಶಿವಮೂರ್ತಿ ಶರಣರ ಬಂಧನದ ಬಳಿಕ ಮುರುಘಾ ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದಲ್ಲಿರುವ ವಿಷಮ ಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ನೂತನ ಪೀಠಾಧ್ಯಕ್ಷರು ಅಥವಾ ಆಡಳಿತಾಧಿಕಾರಿ ನೇಮಕ ಮಾಡುವಂತೆ ಅಕ್ಟೋಬರ್‌ 14ರಂದು ಕೋರಲಾಗಿತ್ತು. ಸರ್ಕಾರ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಒಂದು ವಾರ ಕಾದುನೋಡಿ ಮುಂದಿನ ಹೆಜ್ಜೆ ಇಡಲಾಗುವುದು’ ಎಂದು ಏಕಾಂತಯ್ಯ ಮಾಹಿತಿ ನೀಡಿದರು.

‘ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳದಿದ್ದರೆಅಥವಾ ನಕಾರಾತ್ಮಕ ನಿರ್ಧಾರ ಪ್ರಕಟಿಸಿದರೆ ಕಾನೂನು ಹೋರಾಟಕ್ಕೆ ಸಮುದಾಯ ಸಿದ್ಧವಿದೆ. ಇದಕ್ಕೆ ಸಮಿತಿಯೊಂದನ್ನು ರಚಿಸಲು ಹಾಗೂ ತೀರ್ಮಾನ ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನುಅದಕ್ಕೆ ನೀಡಲು ನಿರ್ಧರಿಸಲಾಗಿದೆ. ಮುರುಘಾ ಮಠದ ಪೀಠಾಧ್ಯಕ್ಷ ಸ್ಥಾನ ಒಂದು ವೇಳೆ ತೆರವಾದರೆ ಮಠದ ಪರಂಪರೆ ಮತ್ತು ಸಂಪ್ರದಾಯದ ಪ್ರಕಾರ ನೂತನ ಪೀಠಾಧ್ಯಕ್ಷರನ್ನು ನೇಮಕ ಮಾಡಲು ಮತ್ತೊಂದು ಸಮಿತಿ ರಚಿಸಲಾಗುವುದು’ ಎಂದು ವಿವರಿಸಿದರು.

ಭೂಮಿ ನೀಡಿರುವುದಕ್ಕೆ ಆಕ್ಷೇಪ

ಹಿಂದುಳಿದ ಹಾಗೂ ದಲಿತ ಸಮುದಾಯದ ಜಾತಿಗಳಿಗೆ ಪ್ರತ್ಯೇಕ ಮಠ ಸ್ಥಾಪಿಸಿ ಐದು ಎಕರೆ ಭೂಮಿ ನೀಡಿದ ಶಿವಮೂರ್ತಿ ಶರಣರ ನಡೆಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.

‘ಶಿವಮೂರ್ತಿ ಶರಣರು ಬಸವತತ್ವಕ್ಕೆ ಅನುಗುಣವಾಗಿ ನಡೆದುಕೊಂಡಿಲ್ಲ. ಮಠದ ಆಸ್ತಿಯನ್ನು ಒಡೆದು ಎಲ್ಲ ಜಾತಿಯ ಮಠಗಳಿಗೆ ಹಂಚಿದ್ದು ತಪ್ಪು’ ಎಂದು ಬೆಂಗಳೂರಿನ ಸುನೀತಾ ಆರೋಪಿಸಿದರು.

ಇದಕ್ಕೆ ಕೆಲವರು ತಕರಾರು ವ್ಯಕ್ತಪಡಿಸಿ, ‘ಜಾತಿಗೊಂದು ಮಠ ಸ್ಥಾಪಿಸಿದ್ದಕ್ಕೆ ವಿರೋಧವಿಲ್ಲ. ಮಠದ ಆಸ್ತಿ ಹಂಚಿರುವುದಕ್ಕೆ ಆಕ್ಷೇಪವಿದೆ’ ಎಂದು ಸ್ಪಷ್ಟಪಡಿಸಿದರು.

---

ಚಿತ್ರದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಲು ನಮ್ಮ ವಿರೋಧವಿಲ್ಲ. ಲಿಂಗಾಯತ ಪರಂಪರೆ, ಶರಣ ತತ್ವ ಅರಿತವರನ್ನೇ ನೇಮಿಸಬೇಕು

- ಶಿವಾನಂದ ಎಂ. ಜಾಮದಾರ, ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾ ‍ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT