ಶುಕ್ರವಾರ, ಅಕ್ಟೋಬರ್ 2, 2020
21 °C

ಜಮಖಂಡಿಯ ದೇವೇಗೌಡ ಬ್ಯಾರೇಜ್ ಜಲಾವೃತ

ಆರ್.ಎಸ್.ಹೊನಗೌಡ Updated:

ಅಕ್ಷರ ಗಾತ್ರ : | |

Prajavani

ಜಮಖಂಡಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣೆ ಮೈದುಂಬಿದ್ದಾಳೆ. ಸ್ಥಳೀಯರ ಸಂತಸ ಇಮ್ಮಡಿಯಾಗಿದೆ. ಜೊತೆಗೆ ದಿನೇ ದಿನೇ ನದಿಯಲ್ಲಿ ಹೆಚ್ಚುತ್ತಿರುವ ನೀರಿನಮಟ್ಟ ತಾಲ್ಲೂಕಿನ ಕೆಲ ಭಾಗದಲ್ಲಿ ಪ್ರವಾಹ ಭೀತಿ ಸೃಷ್ಟಿಸಿದೆ.

ಸಮೀಪದ ಹಿಪ್ಪರಗಿ ಜಲಶಯದ ಗರಿಷ್ಠ ನೀರಿನ ಮಟ್ಟ 523.25 ಮೀಟರ್ ಇದೆ. ಒಟ್ಟು 2.67 ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಈಗಾಗಲೇ ಜಲಾಶಯದಲ್ಲಿ 1.75 ಲಕ್ಷ ಕ್ಯೂಸೆಕ್ ಒಳಹರಿವು, ಅಷ್ಟೇ ಪ್ರಮಾಣದ ನೀರನ್ನು ಹೊರಬಿಡುತ್ತಿದ್ದಾರೆ.

ತಾಲ್ಲೂಕಿನ ಜಂಬಗಿ ಕ್ರಾಸ್‌ನಿಂದ ಶೂರ್ಪಾಲಿ ರಸ್ತೆಯ ಮಧ್ಯದಲ್ಲಿ ಇರುವ ದೇವೇಗೌಡ ಬ್ಯಾರೇಜ್ ಸಂಪೂರ್ಣ ಜಲಾವೃತ್ತವಾಗಿ ಸಂಪರ್ಕ ಕಡಿತವಾಗಿದೆ.

ಬಾರದ ನೋಡಲ್ ಅಧಿಕಾರಿಗಳು: ಪ್ರವಾಹ ಪೀಡಿತ 21  ಗ್ರಾಮಗಳಿಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಸೂಕ್ಷ್ಮ ಸ್ಥಳಗಳಿಗೆ ಹೋಗಿ ಬಂದರೂ ನೋಡಲ್ ಅಧಿಕಾರಿಗಳು ಇತ್ತ ಸುಳಿದಿಲ್ಲ. ನೋಡಲ್ ಅಧಿಕಾರಿಗಳು ಯಾರಿದ್ದಾರೆ ಎಂಬುದೇ ಗ್ರಾಮಸ್ಥರಿಗೆ ಇನ್ನೂ ಗೊತ್ತಿಲ್ಲ.

ಪರಿಹಾರ ಸಿಗದ ಸ್ಥಳ: ಆಲಮಟ್ಟಿ ಜಲಾಶಯದ ಎತ್ತರ 519 ಮೀಟರ್‌ಗೆ ಹೆಚ್ಚಿಸಿದಾಗ ಮುಳುಗಡೆಯಾದ ಮುತ್ತೂರು ನಡುಗಡ್ಡೆಯ ಸುಮಾರು 150 ಎಕರೆ ಜಮೀನಿಗೆ ಸರ್ಕಾರದಿಂದ ಇನ್ನೂ ಪರಿಹಾರ ನೀಡಿಲ್ಲ. ಅಧಿಕಾರಿ ಗಳು ಅವೈಜ್ಞಾನಿಕವಾಗಿ ಸಮೀಕ್ಷೆ ಮಾಡಿದ ಕಾರಣ ಈ ಸಮಸ್ಯೆ ಎದುರಾಗಿ ದೆ ಎಂದು ಸ್ಥಳೀಯರು ಹೇಳುತ್ತಾರೆ. 

‘ಮಹಾರಾಷ್ಟ್ರದಿಂದ ಮಳೆಯ ನೀರು ರಭಸವಾಗಿ ಹರಿದು ಬರುತ್ತಿದೆ. ಮಣ್ಣಿನಿಂದ ಕೂಡಿದೆ. ಈ ಕಲುಷಿತ ನೀರನ್ನು ಬಳಸುವ ನದಿ ತೀರದ ಜನರು ಕಾಯಿಸಿ, ಸೋಸಿ ಕುಡಿಯಬೇಕು. ಮಿತವಾಗಿ ಬಳಕೆ ಮಾಡಬೇಕು. ನೀರಿನ ರಭಸ ಜೋರಾಗಿರುವುದರಿಂದ ಸಾರ್ವಜನಿಕರು ನದಿಗೆ ಇಳಿಯಬಾರದು ಎಂದು ಸುತ್ತಲಿನ ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ’ ಎಂದು ಸಿಪಿಐ ಡಿ.ಕೆ.ಪಾಟೀಲ ತಿಳಿಸಿದರು. ಯಾವ ಸಮಯದಲ್ಲಿ ಪ್ರವಾಹ ಬಂದರೂ ಅದನ್ನು ಎದುರಿಸಲು ತಾಲ್ಲೂಕು ಆಡಳಿತ ಸನ್ನದ್ಧವಾಗಿದೆ.

‘ಈಗಾಗಲೇ ಮುತ್ತೂರು, ಕಂಕಣವಾಡಿ ನಡುಗಡ್ಡೆಗಳಿಗೆ ತೆರಳಿ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಪ್ರವಾಹ ಪೀಡಿತ ಗ್ರಾಮಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ’ ಎಂದು ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು