ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಹೃದಯಕ್ಕೆ ಹಾನಿ, ಮಧುಮೇಹಕ್ಕೆ ಆಹ್ವಾನ- ವೈದ್ಯರ ವಿಶ್ಲೇಷಣೆ

ಪ್ರಮುಖ ಆಸ್ಪತ್ರೆಗಳ ವೈದ್ಯಕೀಯ ವಿಶ್ಲೇಷಣೆಗಳಿಂದ ದೃಢ * ಆಸ್ಪತ್ರೆ ದಾಖಲಾತಿಯೂ ಹೆಚ್ಚಳ
Last Updated 1 ಫೆಬ್ರುವರಿ 2022, 3:12 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ನಿಂದ ಚೇತರಿಸಿಕೊಂಡ ಕೆಲವರಿಗೆಹೃದಯ ನಾಳಗಳಲ್ಲಿ ರಕ್ತವು ಹೆಪ್ಪುಗಟ್ಟಿ, ಹೃದಯ ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸಿದೆ. ಕೊರೊನಾ ವೈರಾಣುಗಳು ಕೆಲವರ ದೇಹದಲ್ಲಿನ ಮೆದೋಜೀರಕಗ್ರಂಥಿಯ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಿ, ಮಧುಮೇಹಕ್ಕೂ ಕಾರಣವಾಗುತ್ತಿವೆ.

ರಾಜ್ಯದ ಪ್ರಮುಖ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯರು ಈ ಬಗ್ಗೆ ವೈದ್ಯಕೀಯ ವಿಶ್ಲೇಷಣೆ ನಡೆಸಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಸೋಂಕು ಹೆಚ್ಚಿನ ಅಪಾಯ ಉಂಟುಮಾಡಲಿದೆ ಎನ್ನುವುದನ್ನು ವೈದ್ಯಕೀಯ ಸಂಶೋಧನೆಗಳು ಹೇಳಿವೆ. ಸೋಂಕಿನಿಂದ ಚೇತರಿಸಿಕೊಂಡ ಬಳಿಕವೂ ಕೆಲವರ ಆರೋಗ್ಯದ ಮೇಲೆ ವೈರಾಣು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದೆ.

ಮೊದಲ ಅಲೆಯಲ್ಲಿ 9.41 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್ ಪೀಡಿತರಾಗಿದ್ದರು. ಸೋಂಕಿನ ತೀವ್ರತೆ ಕಡಿಮೆಯಿದ್ದರೂ 12 ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಎರಡನೇ ಅಲೆಯಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರಾಗಿ, 25 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಎರಡನೇ ಅಲೆಯಲ್ಲಿ ಕೋವಿಡ್ ಪೀಡಿತರಾದವರ ಪೈಕಿ ಶೇ 5ರಷ್ಟು ಮಂದಿಯಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ಮೃತಪಟ್ಟವರಲ್ಲಿ ಬಹುತೇಕರು ಹೃದಯಾಘಾತಕ್ಕೆ ಒಳಗಾಗಿದ್ದರು.

ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಕಾಣಿಸಿಕೊಳ್ಳುವ ಹೃದಯ ಸಮಸ್ಯೆ ಬಗ್ಗೆಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಅಧ್ಯಯನ ನಡೆಸಿತ್ತು. ಅಧ್ಯಯನಕ್ಕೆ ಒಳಪಟ್ಟ 26 ಮಂದಿಯಲ್ಲಿನಾಲ್ಕು ಮಂದಿಗೆ ಮಾತ್ರ ಈ ಮೊದಲೇ ಹೃದಯ ಸಂಬಂಧಿ ಸಮಸ್ಯೆಗಳು ಇದ್ದವು. ಉಳಿದವರಿಗೆ ಕೋವಿಡ್‌ನಿಂದ ಚೇತರಿಸಿಕೊಂಡಮೂರರಿಂದ ನಾಲ್ಕು ವಾರಗಳ ಬಳಿಕ ಹೃದಯಾಘಾತ ಸಮಸ್ಯೆ ಕಾಣಿಸಿಕೊಂಡಿತ್ತು. 26 ಮಂದಿಯಲ್ಲಿ 10 ಜನರಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಯಾವುದೇ ಕೋವಿಡೇತರ ಸಮಸ್ಯೆ ಇರಲಿಲ್ಲ. ಆದರೂ ಹೃದಯಾಘಾತ ಸಂಭವಿಸಿತ್ತು.

ಕೋವಿಡ್ ಎರಡನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ತಗ್ಗಿದ ಬಳಿಕಮಣಿಪಾಲ್, ನಾರಾಯಣ ಹೆಲ್ತ್, ಅಪೋಲೊ, ಫೋರ್ಟಿಸ್, ವಿಕ್ರಮ್, ಆಸ್ಟರ್ ಸೇರಿದಂತೆ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿಹೃದಯ ಹಾಗೂ ಮಧುಮೇಹ ಸಮಸ್ಯೆಯ ತಪಾಸಣೆಗೆ ಆದ್ಯತೆ ನೀಡಲಾಗಿತ್ತು. ಈ ಸಮಸ್ಯೆಗಳಿಗಾಗಿ ಚಿಕಿತ್ಸೆಗೆ ಬರುವವರ ಸಂಖ್ಯೆ ಆಗ ಶೇ 15 ರಿಂದ ಶೇ 20ರವರೆಗೆ ಹೆಚ್ಚಳವಾಗಿತ್ತು.

ಮಧುಮೇಹ ಹೆಚ್ಚಳ:ಆರೋಗ್ಯ ಇಲಾಖೆಯು ರಾಷ್ಟ್ರೀಯ ಮಧುಮೇಹ ನಿಯಂತ್ರಣ ಕಾರ್ಯಕ್ರಮದಡಿ 30 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರಿಗೂ ಎನ್‌ಸಿಡಿ ಕ್ಲಿನಿಕ್‌ಗಳಲ್ಲಿ (ಸಾಂಕ್ರಾಮಿಕವಲ್ಲದ ರೋಗಗಳ ಕ್ಲಿನಿಕ್‌) ತಪಾಸಣೆ ನಡೆಸುತ್ತಿದೆ.ರಾಜ್ಯದಲ್ಲಿ ಜಿಲ್ಲಾ ಹಂತದ 30 ಎನ್‌ಸಿಡಿ ಕ್ಲಿನಿಕ್‌ಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ 347 ಸಿ.ಎಚ್‌.ಸಿ–ಎನ್‌.ಸಿ.ಡಿ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ.

ಈ ಕ್ಲಿನಿಕ್‌ಗಳಿಗೆ 2019–20ನೇ ಸಾಲಿನಲ್ಲಿ36.07 ಲಕ್ಷ ಮಂದಿ ಭೇಟಿ ನೀಡಿ, ತಪಾಸಣೆ ಮಾಡಿಸಿಕೊಂಡಿದ್ದರು. ಅವರಲ್ಲಿ96,989 ಮಂದಿಯಲ್ಲಿ ಹೊಸದಾಗಿ ಮಧುಮೇಹ ಪತ್ತೆಯಾಗಿತ್ತು. ಅದೇ ರೀತಿ,2020–21ನೇ ಸಾಲಿನಲ್ಲಿ ತಪಾಸಣೆಗೆ ಒಳಪಟ್ಟ 20.94 ಲಕ್ಷ ಜನರಲ್ಲಿ 49,392 ಮಂದಿಯಲ್ಲಿ ಮಧುಮೇಹ ದೃಢಪಟ್ಟಿದೆ.

ಮಧ್ಯ ವಯಸ್ಕರಷ್ಟೇ ಅಲ್ಲದೆ ಮಕ್ಕಳು ಕೂಡ ಮಧುಮೇಹಕ್ಕೆ ಗುರಿಯಾಗುತ್ತಿದ್ದಾರೆ. ಕೋವಿಡ್‌ನಿಂದ ಚೇತರಿಸಿಕೊಂಡ 30 ದಿನಗಳ ನಂತರ ಮಕ್ಕಳಲ್ಲಿ ಮಧುಮೇಹದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಸಾಮಾನ್ಯ ಮಕ್ಕಳಿಗಿಂತಲೂ ಕೋವಿಡ್‌ ಗುಣಮುಖ ಮಕ್ಕಳು ಮೊದಲ ಅಥವಾ ಎರಡನೇ ಹಂತದ ಮಧುಮೇಹಕ್ಕೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿಪಿ) ಜನವರಿ ಮೊದಲ ವಾರದಲ್ಲಿ ಬಿಡುಗಡೆಗೊಳಿಸಿದ್ದ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

‘ಇನ್ಸುಲಿನ್‌ ಉತ್ಪತ್ತಿಮಾಡುವ ಕೋಶ ನಾಶ’

‘ಮೆದೋಜೀರಕ ಗ್ರಂಥಿಯು ದೇಹಕ್ಕೆ ಅಗತ್ಯವಿರುವ ಇನ್ಸುಲಿನ್‌ ಉತ್ಪತ್ತಿ ಮಾಡಲು ನೆರವಾಗುತ್ತದೆ. ಇನ್ಸುಲಿನ್‌ ಪ್ರಮಾಣ ಹೆಚ್ಚಿರುವವರಿಗೆ ಮಧುಮೇಹ ಬಾಧಿಸುವುದಿಲ್ಲ. ಈ ಗ್ರಂಥಿಯ ಮೇಲೆ ಕೊರೊನಾ ವೈರಾಣುಗಳು ದಾಳಿ ನಡೆಸುತ್ತವೆ. ಅವು ಇನ್ಸುಲಿನ್‌ ಉತ್ಪತ್ತಿಮಾಡುವ ಕೋಶಗಳನ್ನೆಲ್ಲಾ ನಾಶಪಡಿಸುತ್ತವೆ. ಆಗ ಸಹಜವಾಗಿಯೇ ಇನ್ಸುಲಿನ್‌ ಉತ್ಪತ್ತಿ ಕುಂಠಿತಗೊಳ್ಳುತ್ತದೆ. ಅಂತಹ ರೋಗಿಗಳು ಮಧುಮೇಹದ ಸಮಸ್ಯೆಗೆ ಒಳಗಾಗುತ್ತಾರೆ’ ಎಂದು ಬೆಳಗಾವಿಯಕೆಎಲ್‌ಇ ಆಸ್ಪತ್ರೆಯಮಧುಮೇಹ ತಜ್ಞ ಡಾ.ಸಂಜಯ್ ಕಂಬಾರ ಹೇಳಿದರು.

‘ಕೋವಿಡ್‌ ಎರಡನೇ ಅಲೆ ವೇಳೆ ಬಹಳಷ್ಟು ಮಂದಿ ಸೋಂಕಿನಿಂದ ಮುಕ್ತರಾಗಲು ಸ್ಟಿರಾಯ್ಡ್‌ಯುಕ್ತ ಮಾತ್ರೆಗಳ ಮೊರೆ ಹೋಗಿದ್ದರು. ಅವುಗಳ ಅವೈಜ್ಞಾನಿಕ ಬಳಕೆಯಿಂದಾಗಿಯೂ ಬಹುಪಾಲು ಮಂದಿ ಮಧುಮೇಹಕ್ಕೆ ತುತ್ತಾಗಿದ್ದಾರೆ. ಶೇ 5ರಷ್ಟು ಯುವಕರು ಇದರಲ್ಲಿ ಸೇರಿದ್ದಾರೆ’ ಎಂದು ತಿಳಿಸಿದರು.

ರಕ್ತ ಹೆಪ್ಪುಗಟ್ಟುವಿಕೆಯಿಂದ ಸಮಸ್ಯೆ

‘ಕೊರೊನಾ ಸೋಂಕು ತೀವ್ರವಾಗಿ ದಾಳಿ ಮಾಡಿದರೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಹೃದಯ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದರೆ ಹೃದಯ ಸಮಸ್ಯೆ, ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದರೆ ಪಾರ್ಶ್ವವಾಯು ಹಾಗೂ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿದರೆ ಗ್ಯಾಂಗ್ರೀನ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ’ ಎಂದು ಹೃದ್ರೋಗ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

‘ಕೋವಿಡ್‌ ಪೀಡಿತರಿಗೆ ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟಿ, ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ವೈರಾಣುಗಳು ದೇಹದ ಮೇಲೆ ನಡೆಸುವ ದಾಳಿಯಿಂದ ಹೃದಯದ ಮಾಂಸಖಂಡಗಳಲ್ಲಿ ಉರಿ ಊತ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ಹೃದಯದ ಕ್ಷಮತೆ ಕಡಿಮೆ ಆಗಲಿದೆ. ಎರಡನೇ ಅಲೆಯಲ್ಲಿ ಈ ಸಮಸ್ಯೆ ಹೆಚ್ಚಿನವರಲ್ಲಿ ಕಾಣಿಸಿಕೊಂಡಿತ್ತು. ಈಗ ವೈರಾಣುವಿನ ತೀವ್ರತೆ ಕಡಿಮೆಯಾಗಿದೆ. ಹೀಗಾಗಿ, ಹೃದಯ ಸಮಸ್ಯೆ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ’ ಎಂದು ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಕಾರ್ತಿಕ್ ವಾಸುದೇವನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT