ಗುರುವಾರ , ಸೆಪ್ಟೆಂಬರ್ 23, 2021
25 °C

ಶಾ ಹೇಳಿಕೆಯಿಂದ ಬಿಜೆಪಿಯಲ್ಲಿ ಅತೃ‍‍ಪ್ತಿಯ ಹೊಗೆ: ಬಿಎಸ್‌ವೈ–ಶೆಟ್ಟರ್ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲಿದ್ದು, ಅವರ ನೇತೃತ್ವದಲ್ಲೇ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬಿಜೆಪಿಯಲ್ಲಿ ಅತೃಪ್ತಿಯ ಹೊಗೆ ಎಬ್ಬಿಸಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಬಿಜೆ‍ಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಶನಿವಾರ ಭೇಟಿಯಾದ ಮತ್ತೊಬ್ಬ ನಾಯಕ ಜಗದೀಶ ಶೆಟ್ಟರ್ ಅವರು, ಸುಮಾರು ಅರ್ಧತಾಸಿಗೂ ಹೆಚ್ಚಿನ ಹೊತ್ತು ಸಮಾಲೋಚನೆ ನಡೆಸಿದ್ದಾರೆ.

ಇದನ್ನೂ ಓದಿ: 

ಹೊರಗಿನಿಂದ ಬಂದವರಿಗೆ ಏಕಾಏಕಿ ಮುಖ್ಯಮಂತ್ರಿ ಹುದ್ದೆಯಂತಹ ಪರಮೋಚ್ಛ ಹುದ್ದೆ ನೀಡಿರುವುದನ್ನು ಪಕ್ಷದ ವಿವಿಧ ಹಂತಗಳ ನಾಯಕರು, ಕಾರ್ಯಕರ್ತರು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದರ ಬಗ್ಗೆ ದೊಡ್ಡ ಅಸಮಾಧಾನ ಸೃಷ್ಟಿಯಾಗಿತ್ತು. ಅದು ಶಮನವಾಗುವ ಹೊತ್ತಿಗೆ, ಅಮಿತ್ ಶಾ ಅವರು ಮುಂದಿನ ಚುನಾವಣೆಗೂ ಬೊಮ್ಮಾಯಿಯವರದೇ ನಾಯಕತ್ವ ಎಂಬ ಹೇಳಿಕೆ ನೀಡಿರುವುದು ಕಾರ್ಯಕರ್ತರು, ನಾಯಕರ ಬಗ್ಗೆ ಸಿಟ್ಟಿಗೆ ಕಾರಣವಾಗಿದೆ. ಯಡಿಯೂರಪ್ಪ ಮತ್ತು ಶೆಟ್ಟರ್ ಮಧ್ಯೆ ನಡೆದ ಚರ್ಚೆಯಲ್ಲಿ ಈ ಅಂಶವೇ ಪ್ರಮುಖವಾಗಿತ್ತು ಎಂದು ಮೂಲಗಳು ಹೇಳಿವೆ.

ಚುನಾವಣೆಗೆ ಇನ್ನೂ ಬಹಳ ಸಮಯವಿದೆ. ಈ ಹೊತ್ತಿನಲ್ಲಿ ಇಂತಹ ಘೋಷಣೆ ಮಾಡುವ ಅವಶ್ಯಕತೆ ಪಕ್ಷದ ಕಾರ್ಯಕರ್ತರ ಭರವಸೆ ಕುಂದಿಸಿ, ವಿಶ್ವಾಸವನ್ನು ಧೃತಿಗೆಡಸಲಿದೆ ಎಂದು ಇಬ್ಬರು ನಾಯಕರು ಚರ್ಚೆ ನಡೆಸಿದರು. ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿರುವುದು ತಪ್ಪಲ್ಲ ಎಂದು ಒಪ್ಪಿಕೊಳ್ಳಬಹುದು. ಮುಂದಿನ ಚುನಾವಣೆಗೂ ಅವರದ್ದೇ ನಾಯಕತ್ವ ಎನ್ನುವುದಾದರೆ ಪಕ್ಷದ ಸಿದ್ಧಾಂತ, ಹಿಂದುತ್ವದ ಪ್ರತಿಪಾದನೆ ಮಾಡಿಕೊಂಡು ಸಂಘಟನೆಯನ್ನು ಬಲಪಡಿಸಿದವರು ಸುಮ್ಮನೇ ಕೂರಬೇಕೆ? ಈ ಕ್ರಮ ಸರಿಯಲ್ಲ ಎಂದು ಶೆಟ್ಟರ್‌ ಪ್ರತಿಪಾದಿಸಿದರು ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ಶಾ ಹೇಳಿಕೆಗೆ ಬೆಂಬಲ–ತಕರಾರು

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಯಡಿಯೂರಪ್ಪ, ದಿಢೀರ್ ಈ ಹೇಳಿಕೆಗೆ ಕಾರಣವೇನು ಎಂಬುದು ಗೊತ್ತಾಗುತ್ತಿಲ್ಲ. ಆದರೆ, ಚುನಾವಣೆ ಇನ್ನೂ ಬಹಳ ದೂರ ಇರುವಾಗ ಈ ಘೋಷಣೆ ಮಾಡಿದ್ದು ಸರಿಯಲ್ಲ. ಹಾಗೊಂದು ವೇಳೆ ಘೋಷಣೆ ಮಾಡಲೇಬೇಕೆಂದಿದ್ದರೆ ಅಮಿತ್ ಶಾ ಅವರು ಪಕ್ಷದ ರಾಜ್ಯ ಮಟ್ಟದ ನಾಯಕರ ಜತೆ ಸಮಾಲೋಚನೆ ನಡೆಸಿದ ಬಳಿಕವಷ್ಟೇ ಪ್ರಕಟಿಸಬಹುದಿತ್ತು ಎಂದು ಹೇಳಿದ್ದಾಗಿ ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು