ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರು ಜಿಲ್ಲೆ ‘ಉಸ್ತುವಾರಿ’ ಆಸೆಗೆ ಸಿ.ಎಂ ತಣ್ಣೀರು?

Last Updated 28 ಮಾರ್ಚ್ 2021, 19:20 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಸಂಪುಟದ ಸಚಿವರಿಗೆ ವಹಿಸಿರುವ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಂಪೂರ್ಣ ಬದಲಾವಣೆ ಮಾಡಲು ತೀರ್ಮಾನಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯ ಪಟ್ಟಿ ಸಿದ್ಧವಾಗಿದೆ. ಈ ಸಂಬಂಧಿತ ಆದೇಶ ಒಂದೆರಡು ದಿನಗಳಲ್ಲಿ ಹೊರ
ಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಯಾವುದೇ ಜಿಲ್ಲೆಗೂ ಅದೇ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡುವುದಿಲ್ಲ. ಬೇರೆ ಜಿಲ್ಲೆಗಳಿಗೆ ಸೇರಿದವರನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

‘ಬಿಜೆಪಿ ವರಿಷ್ಠರ ಸೂಚನೆಯ ಮೇರೆಗೆ ಮಹತ್ವದ ಬದಲಾವಣೆ ಮಾಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೂ ವರಿಷ್ಠರು ಇಂತಹದ್ದೇ ಸೂಚನೆ ನೀಡಿದ್ದಾರೆ. ಆದ್ದರಿಂದ ನಮ್ಮ ರಾಜ್ಯದಲ್ಲೂ ಜಿಲ್ಲಾ ಉಸ್ತುವಾರಿಗಳ ಬದಲಾವಣೆ ನಡೆಯುತ್ತಿದೆ’ ಎಂದು ಮುಖ್ಯಮಂತ್ರಿಯವರ ಆಪ್ತ ವಲಯ ತಿಳಿಸಿದೆ.

ಬೆಂಗಳೂರು ನಗರ ಸೇರಿದಂತೆ ಎಲ್ಲ ಜಿಲ್ಲೆಗಳ ಉಸ್ತುವಾರಿಗಳು ಬದಲಾಗುವರು. ಉದಾಹರಣೆಗೆ ಬೆಂಗಳೂರು ನಗರ ಜಿಲ್ಲೆಯವರನ್ನು ಹಾಸನಕ್ಕೆ ಅಥವಾ ತುಮಕೂರಿಗೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಬಹುದು. ಕಲಬುರ್ಗಿ ಜಿಲ್ಲೆಯ ಸಚಿವರನ್ನು ಮಂಗಳೂರಿಗೆ ಉಸ್ತುವಾರಿ ಮಾಡಬಹುದು.

ಆಯಾ ಜಿಲ್ಲೆಗೆ ಸೇರಿದವರನ್ನು ಉಸ್ತುವಾರಿ ಮಾಡುವುದರಿಂದ ಹಲವು ಸಮಸ್ಯೆಗಳು ಉದ್ಭವವಾಗುತ್ತಿದೆ. ಜಿಲ್ಲೆಯಲ್ಲಿ ತಮ್ಮದೇ ಪ್ರಭಾವಳಿಯನ್ನು ಸೃಷ್ಟಿಸಿಕೊಂಡು ಪಕ್ಷದ ಇತರ ಶಾಸಕರನ್ನು ಮೂಲೆಗುಂಪು ಮಾಡುವ ಕೆಲಸ ನಡೆಯುತ್ತಿದೆ. ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ ಎಂಬುದಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಶಾಸಕರಿಂದ ವರಿಷ್ಠರಿಗೆ ಸಾಕಷ್ಟು ದೂರುಗಳು ತಲುಪಿವೆ ಎಂದು ಮೂಲಗಳು ಹೇಳಿವೆ.

‘ತಮ್ಮದಲ್ಲದ ಜಿಲ್ಲೆಯ ಸಚಿವರನ್ನು ಉಸ್ತುವಾರಿ ಮಾಡಿದರೆ ಆ ಜಿಲ್ಲೆಗಳ ಶಾಸಕರ ಅಸಮಾಧಾನಕ್ಕೂ ಕಾರಣವಾಗಬಹುದು ಎಂಬ ಮಾತು ಕೇಳಿಬಂದಿದೆ. ಆದರೆ, ಪಕ್ಷದ ವರಿಷ್ಠರ ಸೂಚನೆ ಇರುವುದರಿಂದ ಅದನ್ನು ಮುಖ್ಯಮಂತ್ರಿ ಪಾಲಿಸಬೇಕಾಗುತ್ತದೆ. ಇದನ್ನು ಬಿಜೆಪಿ ಆಡಳಿತದ ಎಲ್ಲ ರಾಜ್ಯಗಳಲ್ಲೂ ಜಾರಿ ಮಾಡಲಾಗುತ್ತಿದೆ ಎಂಬ ಸಮಜಾಯಿಷಿ ನೀಡಿ ಸಮಾಧಾನಪಡಿಸುತ್ತಾರೆ. ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಇದು ಸಹಾಯಕವಾಗುತ್ತದೆ’ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT