ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ವೈವಿಧ್ಯ ರಕ್ಷಣೆಗೆ ಪೂರಕವಾಗಿಲ್ಲ ಕಾಮಗಾರಿ:

ದೊಡ್ಡಕಲ್ಲಸಂದ್ರ ಕೆರೆ ಅಭಿವೃದ್ಧಿ ಕಾಮಗಾರಿ– ನ್ಯಾ.ಎನ್‌.ಕೆ.ಪಾಟೀಲ ವರದಿ ಶಿಫಾರಸು ಕಡೆಗಣನೆ
Last Updated 13 ಮಾರ್ಚ್ 2021, 21:38 IST
ಅಕ್ಷರ ಗಾತ್ರ

ಬೆಂಗಳೂರು: ದೊಡ್ಡಕಲ್ಲಸಂದ್ರ ಕೆರೆಯನ್ನು ಬಿಬಿಎಂಪಿ ಪುನರುಜ್ಜೀವನಗೊಳಿಸುತ್ತಿದ್ದು, ಈ ಕಾಮಗಾರಿಯು ನ್ಯಾಯಮೂರ್ತಿ ಎನ್‌.ಕೆ. ಪಾಟೀಲ ನೇತೃತ್ವದ ತಜ್ಞರ ಸಮಿತಿಯ ವರದಿಯ ಶಿಫಾರಸುಗಳಿಗೆ ಅನುಗುಣವಾಗಿಲ್ಲ. ಕೆರೆ ಪುನರುಜ್ಜೀವನದ ಸಂದರ್ಭದಲ್ಲಿ ಜೀವ ವೈವಿಧ್ಯ ಸಂರಕ್ಷಣೆಗೂ ಮಹತ್ವ ನೀಡುವ ಸಲುವಾಗಿ ಸಮಿತಿಯು ಕೆಲವೊಂದು ಮಾರ್ಗಸೂಚಿಗಳನ್ನು ನೀಡಿತ್ತು. ಅವುಗಳನ್ನೆಲ್ಲ ಕಾಮಗಾರಿ ಸಂದರ್ಭದಲ್ಲಿ ಕಡೆಗಣಿಸಲಾಗಿದೆ.

ಒಂದು ಕಾಲದಲ್ಲಿ ಸಮೃದ್ಧ ಜೀವವೈವಿಧ್ಯ ತಾಣವಾಗಿದ್ದ ಈ ಕೆರೆ ತ್ಯಾಜ್ಯ ನೀರು ಸೇರಿ ಕಲುಷಿತಗೊಂಡಿತ್ತು. ಸ್ಥಳೀಯ ನಿವಾಸಿಗಳು ಸೇರಿ ದೊಡ್ಡಕಲ್ಲಸಂದ್ರ ಕೆರೆ ಸಂರಕ್ಷಣಾ ಸಮಿತಿಯನ್ನು ರಚಿಸಿಕೊಂಡು ಇದರ ಪುನರುಜ್ಜೀವನಕ್ಕಾಗಿ ಹೋರಾಡಿದ್ದರು. ಇದರ ಫಲವಾಗಿ ಬಿಬಿಎಂಪಿ ಈ ಕೆರೆಯ ಪುನರುಜ್ಜೀವನ ಯೋಜನೆ ರೂಪಿಸಿತ್ತು.

ಹೈಕೋರ್ಟ್‌ ನೇಮಿಸಿದ್ದ ನ್ಯಾ.ಎನ್‌.ಕೆ.ಪಾಟೀಲ ನೇತೃತ್ವದ ತಜ್ಞರ ಸಮಿತಿ 2011ರಲ್ಲಿ ಸಲ್ಲಿಸಿದ್ದ ವರದಿಯಲ್ಲಿ ನಗರದ ಕೆರೆಗಳ ಸಂರಕ್ಷಣೆಗೆ ಅನೇಕ ಶಿಫಾರಸುಗಳನ್ನು ಮಾಡಿದೆ. ಪುನರುಜ್ಜೀವನದ ಸಂದರ್ಭದಲ್ಲಿ ಕೆರೆಯು ಬಟ್ಟಲ ಆಕಾರದಲ್ಲಿರುವಂತೆಯೇ ನೋಡಿಕೊಳ್ಳುವ ಪರಿಪಾಠ ಒಳ್ಳೆಯದಲ್ಲ. ಇದಕ್ಕೆ ವೆಚ್ಚ ಜಾಸ್ತಿಯಾಗುತ್ತದೆ. ಇದರ ದಂಡೆ ನಿರ್ಮಿಸುವುದಕ್ಕೂ ಹೆಚ್ಚು ಜಾಗ ಬೇಕು. ಕೆರೆಯಂಚಿನಲ್ಲಿ ಜೌಗು ಪ್ರದೇಶ ಸೃಷ್ಟಿಯಾಗುವುದಕ್ಕೆ ಹಾಗೂ ಕೆರೆಯನ್ನು ಸೇರುವ ಮಳೆನೀರು ಶೋಧಿಸುವಿಕೆಗೂ ಇದರಿಂದ ಧಕ್ಕೆ ಉಂಟಾಗುತ್ತದೆ. ಕೆರೆಯ ಜೀವಿಗಳ ದೃಷ್ಟಿಯಿಂದಲೂ ಈ ಮಾದರಿ ಸೂಕ್ತವಲ್ಲ ಎಂದು ತಜ್ಞರ ಸಮಿತಿಯ ಅಭಿಪ್ರಾಯಪಟ್ಟಿತ್ತು.

‘ಪುನರುಜ್ಜೀವನದ ವೇಳೆ ಕೆರೆಗೆ ಮಳೆಗಾಲದಲ್ಲಿ ಸಾಕಷ್ಟು ನೀರು ಹರಿದು ಬರುವಂತೆ ನೋಡಿಕೊಂಡು, ಅಗತ್ಯವಿರುವಲ್ಲಿ ಮಾತ್ರ ಕೆರೆಯ ಆಳ ಹೆಚ್ಚಿಸಬೇಕು. ಈ ಮಾರ್ಪಾಡು ಮಾಡುವಾಗ ಭೂಮಿಗೆ ನೀರಿಂಗಿಸುವುದಕ್ಕೆ ಹಾಗೂ ಪ್ರವಾಹ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು. ನೀರು ಒಳಗೆ ಹರಿದು ಬರುವಲ್ಲಿ ಕೆರೆಯ ಇಳಿಜಾರು ಹಾಗೂ ನೀರು ಸಂಗ್ರಹಗೊಳ್ಳುವಲ್ಲಿ ದಂಡೆ ಇರಬೇಕು. ದಂಡೆಯ ಬಳಿ ಆಳವಾಗಿ ಹೂಳೆತ್ತಿ, ಇಳಿಜಾರು ಇರುವಲ್ಲಿ ಕಡಿಮೆ ಆಳ ಇರುವಂತೆ ನೋಡಿಕೊಳ್ಳಬೇಕು’ ಎಂದೂ ಸಮಿತಿ ಹೇಳಿತ್ತು.

‘ಕೆರೆಯ ಇಳಿಜಾರಿನಲ್ಲಿ ನೀರು ನಿಲ್ಲುವಂತೆ ನೋಡಿಕೊಂಡರೆ ಅಲ್ಲಿ ಸಸ್ಯಗಳು ಬೇಗನೇ ಬೆಳೆಯುತ್ತವೆ. ಈ ನೈಸರ್ಗಿಕ ವ್ಯವಸ್ಥೆಯು ಕೆರೆಯ ನೀರು ಆವಿಯಾಗುವುದನ್ನೂ ತಡೆಯುತ್ತದೆ. ಭೂಮಿಗೆ ನೀರಿಂಗಿಸುತ್ತದೆ. ತೇವಾಂಶ ಭರಿತ ಮಣ್ಣಿನಲ್ಲಿರುವ ಹಾಗೂ ಇಲ್ಲಿನ ಸಸ್ಯಗಳನ್ನು ಅವಲಂಬಿಸಿರುವ ಕೀಟಗಳು ಹಕ್ಕಿಗಳ್ನು ಆಕರ್ಷಿಸುತ್ತವೆ. ಹಕ್ಕಿಗಳಿಗೆ ಮಕರಂದ, ಹಣ್ಣುಗಳು ಹಾಗೂ ನೀರಿನಲ್ಲಿ ಯಥೇಚ್ಚ ಆಹಾರ ಸಿಗುತ್ತದೆ’ ಎಂದು ಸಮಿತಿ ವಿವರಿಸಿತ್ತು.

2020ರ ಜುಲೈನಿಂದ ಈ ಕಾಮಗಾರಿಯೂ ನಡೆಯುತ್ತಿದೆ. ಕೆರೆ ಸಂರಕ್ಷಣಾ ಸಮಿತಿಯವರು ಬಿಬಿಎಂಪಿಯ ಕೆರೆ ವಿಭಾಗದ ಅಧಿಕಾರಿಗಳನ್ನು ಭೇಟಿಯಾಗಿ ನ್ಯಾ.ಎನ್‌.ಕೆ.ಪಾಟೀಲ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿಯೇ ಕಾಮಗಾರಿ ಅನುಷ್ಠಾನಗೊಳಿಸುವಂತೆ ಆರಂಭದಲ್ಲೇ ಕೋರಿದ್ದರು. ಆ್ಯಕ್ಷನ್‌ ಏಯ್ಡ್‌ ಸಂಸ್ಥೆಯು ಸ್ಥಳೀಯ ಪ್ರಮುಖರಾದ ಸೌಂದರಾಜನ್‌ ನೇತೃತ್ವದಲ್ಲಿ 10 ವಿದ್ಯಾರ್ಥಿ ಸ್ವಯಂಸೇವಕರ ನೆರವಿನಿಂದ ಈ ಕೆರೆಯ ಕಾಮಗಾರಿಯನ್ನು ಪರಿಶೀಲಿಸಿದೆ.

‘ಕೆರೆಯ ಅಂಚುಗಳಲ್ಲೂ 6– 8 ಅಡಿ ಆಳದಷ್ಟು ಹೂಳೆತ್ತಿದ್ದು, ಅಲ್ಲಿ ಸ್ತರ ವ್ಯವಸ್ಥೆ ಹೊಂದಿಲ್ಲ. ಹಾಗಾಗಿ ಈ ಕೆರೆಯನ್ನು ನೆಚ್ಚಿಕೊಂಡಿದ್ದ ಶೇ 70ರಷ್ಟು ಹಕ್ಕಿಗಳು ಮತ್ತೆ ಈ ಕೆರೆಗೆ ಮರಳುವುದು ಅನುಮಾನ. ಹೂಳೆತ್ತುವಾಗ ಇಳಿಜಾರನ್ನು ಸಮರ್ಪಕವಾಗಿ ಕಾಯ್ದುಕೊಂಡಿಲ್ಲ. ಕೆರೆಯ ಅಂಚುಗಳಲ್ಲಿ ಹಾಗೂ ದ್ವೀಪವಿರುವ ಕಡೆ ಹೆಚ್ಚೂ ಕಡಿಮೆ ಒಂದೇ ರೀತಿಯ ಆಳವನ್ನು ಕಾಯ್ದುಕೊಳ್ಳಲಾಗಿದೆ’ ಎಂದು ದೂರುತ್ತಾರೆ ಆ್ಯಕ್ಷನ್‌ ಏಯ್ಡ್‌ ಸಂಸ್ಥೆಯ ರಾಘವೇಂದ್ರ ಬಿ. ಪಚ್ಚಾಪುರ.

‘ದಶಕದ ಬಳಿಕವೂ ಜಾರಿಯಾಗುತ್ತಿಲ್ಲ ಶಿಫಾರಸು’
‘ನ್ಯಾ.ಎನ್‌.ಕೆ.ಪಾಟೀಲ ಸಮಿತಿಯ ವರದಿಯು ಕೆರೆ ಉಳಿಸುವ ಬಗ್ಗೆ ಕಾಳಜಿ ಇದ್ದ ಪರಿಸರವಾದಿಗಳ ಕಾನೂನು ಹೋರಾಟದ ಫಲಶ್ರುತಿ. ಪರಿಸರ ಸಂಬಂಧಿ ಅಂಶಗಳ ಹಾಗೂ ಜನರ ಆಶೋತ್ತರಗಳ ಸಮಪಾಕದಂತಿರುವ ಈ ವರದಿ. ಕೆರೆಯ ಪುನರುಜ್ಜೀವನವು ಜೀವವೈವಿಧ್ಯ ಸಂರಕ್ಷಣೆಗೆ ಪೂರಕವಾಗಿರಬೇಕು ಎಂಬ ಅಂಶಗಳಿಗೆ ಅಧಿಕಾರಿಗಳು ಈಗಲೂ ಮಹತ್ವನೀಡುತ್ತಿಲ್ಲ. ಕೆರೆಗಳು 2011ಕ್ಕಿಂತ ಮುಂಚೆಯೂ ಬಟ್ಟಲುಗಳ ಆಕಾರದಲ್ಲೇ ಇದ್ದವು. 2021ರಲ್ಲೂ ಅವುಗಳನ್ನು ಪುನರುಜ್ಜೀವನಗೊಳಿಸುವಾಗಲೂ ಅವುಗಳ ಆಕಾರವನ್ನು ಹಾಗೆಯೇ ಮುಂದುವರಿಸಲಾಗುತ್ತಿದೆ. ಎನ್‌.ಕೆ. ಪಾಟೀಲ ಸಮಿತಿಯ ಅಂಶಗಳನ್ನು ಪಾಲಿಸುವ ಡಿಪಿಆರ್‌ಗಳಿಗೆ ಮಾತ್ರ ಅನುಮೋದನೆ ಸಿಗುತ್ತದೆ. ಆದರೂ ಕಾಮಗಾರಿ ಅನುಷ್ಠಾನದ ಹಂತದಲ್ಲಿ ಬೇರೆಯೇ ನಡೆಯುತ್ತಿರುವುದು ಬೇಸರದ ವಿಷಯ’ ಎಂದು ರಾಘವೇಂದ್ರ ಬಿ.ಪಚ್ಚಾಪುರ ಬೇಸರ ವ್ಯಕ್ತಪಡಿಸಿದರು.

ಅಂಕಿ ಅಂಶ

21.16 ಎಕರೆ: ದೊಡ್ಡಕಲ್ಲಸಂದ್ರ ಕೆರೆ ವಿಸ್ತೀರ್ಣ

₹ 5.93 ಕೋಟಿ: ಕೆರೆ ಪುನರುಜ್ಜೀವನ ಕಾಮಗಾರಿಯ ಅಂದಾಜು ವೆಚ್ಚ

*42 ಪ್ರಭೇದಗಳ 354 ಮರಗಳು ಈ ಕೆರೆ ಪರಿಸರದಲ್ಲಿವೆ

*ಪ್ರಭೇದಗಳ ಚಿಟ್ಟೆಗಳು ಇಲ್ಲಿ ಕಂಡು ಬಂದಿವೆ

*ಪ್ರಭೇಧಗಳ ಹಕ್ಕಿಗಳನ್ನು ಈ ಪರಿಸರದಲ್ಲಿ ಗುರುತಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT