ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ: ತಿಂಗಳಿಗೆ ₹100 ದೇಣಿಗೆ

ಪೋಷಕರ ಹೆಗಲಿಗೆ ಖರ್ಚುವೆಚ್ಚಗಳ ನಿರ್ವಹಣೆಯ ಹೊಣೆ
Last Updated 20 ಅಕ್ಟೋಬರ್ 2022, 21:36 IST
ಅಕ್ಷರ ಗಾತ್ರ

ಬೆಂಗಳೂರು: ವರ್ಗಾವಣೆ‍ಪ್ರಮಾಣ ಪತ್ರ ಪಡೆಯುವಾಗ, ವಿಶೇಷ ಸಂದರ್ಭಗಳಲ್ಲಿ ಒಂದಷ್ಟು ವಂತಿಗೆ ಪಡೆಯುತ್ತಿದ್ದ ಸರ್ಕಾರಿ ಶಾಲೆಗಳು ಇನ್ನು ಮುಂದೆ ನಿತ್ಯದ ವೆಚ್ಚಗಳಿಗೂ ಮಕ್ಕಳ ಪೋಷಕರಿಂದ ಹಣ ಸಂಗ್ರಹಿಸಲು ಸರ್ಕಾರವೇ ಅಧಿಕೃತ ಸಮ್ಮತಿ ನೀಡಿದೆ.

ರಾಜ್ಯದ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅಗತ್ಯವಿರುವ ಖರ್ಚುವೆಚ್ಚಗಳಿಗಾಗಿ ಮಕ್ಕಳ ಪೋಷಕರಿಂದ ದೇಣಿಗೆ ರೂಪದಲ್ಲಿ ಪ್ರತಿ ತಿಂಗಳು ₹ 100 ಸಂಗ್ರಹಿಸಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) ಅನುಮತಿ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರದ ಈ ನಡೆ ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆ, ಕಡ್ಡಾಯ ಶಿಕ್ಷಣ ಹಕ್ಕು ಮೊಟಕುಗೊಳಿಸುವ ಹುನ್ನಾರ ಎಂದು ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಶಾಲಾ ನಿರ್ವಹಣೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಸರ್ಕಾರದ ಮಂಜೂರಾತಿ ಇಲ್ಲವಾದಾಗ, ಅನುದಾನದ ಕೊರತೆ ಎದುರಾದಾಗ ಸ್ಥಳೀಯವಾಗಿ ಸುಗಮ ನಿರ್ವಹಣೆ ಸಾಧ್ಯವಾಗಿಸಲು ಸರ್ಕಾರ ‘ನಮ್ಮ ಶಾಲೆ–ನನ್ನ ಕೊಡುಗೆ’ ಯೋಜನೆ ರೂಪಿಸಿದೆ. ಈ ಯೋಜನೆ ಅನ್ವಯ ಸಾರ್ವಜನಿಕರಿಂದ ಆರ್ಥಿಕ ಸಹಾಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೂ, ಪೋಷಕರಲ್ಲಿ ಶಾಲಾ ಚಟುಚಟಿಕೆ, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡುವಂತೆ ಮಾಡಲು ಮಕ್ಕಳ ಪೋಷಕರು, ತಂದೆ, ತಾಯಿಯರ ಮನವೊಲಿಸಿ ಪ್ರತಿ ತಿಂಗಳು ಹಣವನ್ನು ಪಡೆಯಬೇಕು. ಹಣಕ್ಕಾಗಿಬಲವಂತ ಮಾಡಬಾರದು. ಸಂಗ್ರಹಿಸಿದ ಹಣವನ್ನು ಎಸ್‌ಡಿಎಂಸಿ ಖಾತೆಗೆ ಜಮೆ ಮಾಡಬೇಕು’ ಎಂದು ಸೂಚಿಸಲಾಗಿದೆ.

ಸಂಗ್ರಹಿಸಿದ ಅನುದಾನ ಯಾವಯಾವ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಬೇಕು ಎನ್ನುವ ಕುರಿತು ಆದ್ಯತಾ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ರಸೀದಿ ನೀಡುವ, ಪ್ರತ್ಯೇಕ ಲೆಕ್ಕಪತ್ರ ಇಡುವ, ಹಣಕಾಸಿನ ನಿರ್ವಹಣೆಯ ಹೊಣೆಗಾರಿಕೆಯನ್ನುಎಸ್‌ಡಿಎಂಸಿ ಸದಸ್ಯ ಕಾರ್ಯದರ್ಶಿಗೆ ನೀಡಲಾಗಿದೆ.

‘ಸಂವಿಧಾನದ 21 ಎ ವಿಧಿಯ ಪ್ರಕಾರ ಮಕ್ಕಳಿಗೆ ಶಿಕ್ಷಣ ನೀಡುವುದು ಆಯಾ ಸರ್ಕಾರಗಳ ಹೊಣೆ. ಆರ್‌ಟಿಇ ಸೆಕ್ಷನ್‌ 3ರ ಪ್ರಕಾರ 8ನೇ ತರಗತಿಯವರೆಗೆ ಯಾವುದೇ ಅಡ್ಡಿ ಆತಂಕ ಇಲ್ಲದೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು.ಸರ್ಕಾರ ಒಳ್ಳೆಯ ಉದ್ದೇಶ ಇಟ್ಟುಕೊಂಡು ಸುತ್ತೋಲೆ ಹೊರಡಿಸಿರುವುದಾಗಿ ಸಮರ್ಥಿಸಿ
ಕೊಂಡರೂ, ಬಲವಂತ ಇಲ್ಲದೇ ನೈತಿಕ ಜವಾಬ್ದಾರಿಯ ಆಧಾರದಲ್ಲಿ ಹಣ ನೀಡುವ ಅನಿವಾರ್ಯಕ್ಕೆ ಮಕ್ಕಳ ಪೋಷಕರು ಒಳಗಾಗಲಿದ್ದಾರೆ’ ಎಂದು ಸರ್ಕಾರದ ಸುತ್ತೋಲೆಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ ಅಭಿವೃದ್ಧಿ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ.

‘ಬಹುತೇಕ ಸರ್ಕಾರಿ ಶಾಲೆಗಳು ಈಗಾಗಲೇ ಮಕ್ಕಳಿಲ್ಲದೆ ಮುಚ್ಚುವ ಹಂತ ತಲುಪಿವೆ. ಪರಿಶಿಷ್ಟರು, ಕೂಲಿ ಕಾರ್ಮಿಕರು, ಬಡವರ ಮಕ್ಕಳಷ್ಟೆ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಮಕ್ಕಳ ಅನುಪಾತ ಆಧರಿಸಿ ಸರ್ಕಾರವೇ ಅಂತಹ ವೆಚ್ಚಗಳ ಭರ್ತಿಗೆ ಅನುದಾನ ಒದಗಿಸಬೇಕು. ಸ್ವಇಚ್ಛೆಯ ಹೆಸರಲ್ಲಿ ಪೋಷಕರನ್ನು ಕಾನೂನಾ
ತ್ಮಕವಾಗಿ ಅಥವಾ ನೈತಿಕವಾಗಿ ಹೊಣೆಗಾರರನ್ನಾಗಿ ಮಾಡಬಾರದು’ ಎನ್ನುತ್ತಾರೆ ಎಸ್‌ಡಿಎಂಸಿ ಮಾಜಿ ಅಧ್ಯಕ್ಷೆ ಪೂರ್ಣಿಮಾ ಚಂದ್ರಶೇಖರ್.

ಮೂರು ತಿಂಗಳಿಗೊಮ್ಮೆ ಪೋಷಕರ ಸಭೆ

‘ಪ್ರತಿ ಮೂರು ತಿಂಗಳಿಗೆ ಒಮ್ಮೆ ಪೋಷಕರು, ತಂದೆ, ತಾಯಂದಿರ ಸಭೆ ಕರೆಯಬೇಕು. ಅನುದಾನದ ಅಗತ್ಯ ಮತ್ತು ಪ್ರಗತಿಯ ಬಗ್ಗೆ ಮಾಹಿತಿ ನೀಡಬೇಕು. ಇತರೆ ಆದ್ಯತೆಗಳ ಬಗ್ಗೆ ಸಭೆಯಲ್ಲೇ ಚರ್ಚಿಸಿ ನಡಾವಳಿಗಳನ್ನು ದಾಖಲಿಸಬೇಕು. ನಂತರದ ಸಭೆಯಲ್ಲಿ ಅನುಪಾಲನಾ ವರದಿ ಮಂಡಿಸಬೇಕು’ ಎಂದೂ ಆಯುಕ್ತರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT