ಬುಧವಾರ, ಮೇ 25, 2022
27 °C

ಕೋವಿಡ್‌ ನಿರ್ಲಕ್ಷ್ಯ ಬೇಡ: ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಂತದಲ್ಲಿ ಸರ್ಕಾರವು ನಿರ್ಲಕ್ಷ್ಯ ತೋರಬಾರದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಮಂಗಳವಾರ 41,000 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಇದು ಎಚ್ಚರಿಕೆಯ ಗಂಟೆ. ಸೋಂಕಿನ ಪ್ರಮಾಣವನ್ನು ತಡೆಯಲೇಬೇಕು. ಜನರ ಪರಿಸ್ಥಿತಿ ಮತ್ತು ಅವರ ಜೀವನ ಗಮನದಲ್ಲಿಟ್ಟುಕೊಂಡು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು.

ವಾರಾಂತ್ಯದ ಕರ್ಫ್ಯೂ, ರಾತ್ರಿ ಕರ್ಫ್ಯೂ ಕುರಿತು ಸರ್ಕಾರದಲ್ಲಿರುವವರಲ್ಲೇ ಸಹಮತ ಇಲ್ಲ. ಅವರೇ ಗೊಂದಲದಲ್ಲಿದ್ದರೆ ಪರಿಸ್ಥಿತಿ ಹೇಗೆ ನಿಭಾಯಿಸುತ್ತಾರೆ? ತಜ್ಞರ ವರದಿ, ಜನರ ಅಭಿಪ್ರಾಯ ಎಲ್ಲವನ್ನೂ ಪರಿಶೀಲಿಸಿ ಸರ್ಕಾರ ತೀರ್ಮಾನ ಮಾಡಬೇಕು ಎಂದು ಹೇಳಿದರು.

ಸೋಂಕು ನಿಯಂತ್ರಿಸುವುದರ ಜತೆಯಲ್ಲೇ ಬಿಗಿಯಾದ ನಿರ್ಬಂಧಗಳಿಂದ ಸಂಕಷ್ಟಕ್ಕೆ ಸಿಲುಕುವ ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಮತ್ತು ರೈತರಿಗೆ ನೆರವು ನೀಡಬೇಕು. ನಿತ್ಯವೂ ಕೆಲಸ ಮಾಡಿ ಜೀವನ ನಡೆಸುವವರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ದಾರಿ ತಪ್ಪಿಸುವ ಕೆಲಸ: ‘ದೇಶದಲ್ಲಿ ಹಸಿವಿನಿಂದ ಯಾರೂ ಮೃತಪಟ್ಟಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಜನರು ಎಷ್ಟು ಕಷ್ಟದಲ್ಲಿದ್ದಾರೆ ಎನ್ನುವುದನ್ನು ಸರ್ಕಾರ ನೋಡಬೇಕು. ಎರಡು ಹೊತ್ತಿನ ಊಟಕ್ಕಿಲ್ಲದೆ ಸಾಯುವವರು ಇದ್ದಾರೆ. ನಿಜ ಸ್ಥಿತಿ ಹೀಗಿರುವಾಗ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡಿದೆ’ ಎಂದು ದೂರಿದರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು