ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕ ಕೇಂದ್ರ ನಿರ್ಮಾಣಕ್ಕೆ ಪಾರಂಪರಿಕ ಜಾಗ ಬೇಡ

ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹ
Last Updated 6 ಜುಲೈ 2021, 11:59 IST
ಅಕ್ಷರ ಗಾತ್ರ

ಧಾರವಾಡ: ‘ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1881ರಲ್ಲಿ ಮೈಸೂರು ಮಹಾರಾಜರು ಆರಂಭಿಸಿದ್ದ ಸರ್ಕಾರಿ ಕನ್ನಡ ಬಾಲಕಿಯರ ಶಾಲೆಯ ಜಾಗವನ್ನು ಸ್ವಾಮಿ ವಿವೇಕಾನಂದ ಸ್ಮಾರಕ ಮತ್ತು ಸಾಂಸ್ಕೃತಿಕ ಯುವ ಕೇಂದ್ರ ನಿರ್ಮಾಣಕ್ಕೆ ನೀಡಬಾರದು’ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹಿಸಿದರು.

‘ಚಾಮರಾಜೇಂದ್ರ ಒಡೆಯರ್‌ ಅವರ ಪತ್ನಿ ಕೆಂಪನಂಜಮ್ಮಣಿ ಅವರು ಅನಕ್ಷರಸ್ಥರಾಗಿದ್ದು, ಅವರಿಗೆ ಪಂಡಿತರು ಅರಮನೆಗೆ ಬಂದು ಅಕ್ಷರಾಭ್ಯಾಸ ಮಾಡಿಸುತ್ತಿದ್ದರು. ಕೆಂಪನಂಜಮ್ಮಣಿ ಅವರು ಇತರ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಕುರಿತು ಚಿಂತಿಸಿ ಹೊಸ ಮಾದರಿ ಶಾಲೆ ಆರಂಭಕ್ಕೆ ಕಾರಣರಾದರು. ಆದರೆ ಇಂಥ ಪಾರಂಪರಿಕ ಕಟ್ಟಡವನ್ನುಸ್ವಾಮಿ ವಿವೇಕಾನಂದ ಸ್ಮಾರಕ ಮತ್ತು ಸಾಂಸ್ಕೃತಿಕ ಯುವ ಕೇಂದ್ರ ಸ್ಥಾಪನೆಗಾಗಿ ಕೊಲ್ಕತ್ತಾದ ಬೇಲೂರು ಮಠದಲ್ಲಿರುವ ರಾಮಕೃಷ್ಣ ಮಠ ಮತ್ತು ಮಿಷನ್‌ ಸಂಸ್ಥೆಗೆ ಉಚಿತವಾಗಿ ಹಸ್ತಾಂತರಿಸುವ ಸರ್ಕಾರದ ಕ್ರಮ ಖಂಡನೀಯ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಈ ಜಾಗವನ್ನು ಮಂಜೂರು ಮಾಡುವಂತೆ 2012ರಲ್ಲಿ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. 2013ರಲ್ಲಿ ಮಂತ್ರಿಮಂಡಲದಲ್ಲಿ ಇದನ್ನು ಪರಿಗಣಿಸಿ ಈ ಶಾಲೆ ಕಟ್ಟಡ ಮತ್ತು ಜಾಗ ಹಾಗೂ ಟಿಆರ್‌ಸಿ ಕಟ್ಟಡದ 36,591 ಚದರಡಿ ವಿಸ್ತೀರ್ಣವನ್ನು ರಾಮಕೃಷ್ಣ ಆಶ್ರಮಕ್ಕೆ ನೀಡಲು ತೀರ್ಮಾನಿಸಲಾಗಿತ್ತು. 2020ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆ ಉಳಿಸುವಂತೆ ಹೋರಾಟ ಮಾಡುತ್ತಿದ್ದವರನ್ನು ಭೇಟಿ ಮಾಡಿ, ಹೊಸ ಮಾದರಿ ಶಾಲೆಯನ್ನು ಹಾಗೇ ಉಳಿಸುವ ಭರವಸೆ ನೀಡಿದರು. ಆದರೆ ಪಕ್ಕದಲ್ಲಿದ್ದ ಜಾಗವನ್ನು ಮಠಕ್ಕೆ ನೀಡಲು ಅನುಕೂಲವಾಗುವಂತೆ ಪ್ರಸ್ತಾವನೆ ಸಲ್ಲಿಸಿಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಆದರೆ ಇಂತ ಐತಿಹಾಸಿಕ ಜಾಗವನ್ನು ಯಾವುದೇ ಕಾರಣಕ್ಕೂ ಬೇರೆ ಸಂಸ್ಥಗಳಿಗೆ ಪರಭಾರೆ ಮಾಡಬಾರದು. ಜತೆಗೆ ಅಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೂ ಅವಕಾಶ ನೀಡಬಾರದು’ ಎಂದು ಹಿರೇಮಠ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT