ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡ್ರಗ್ಸ್’ ವಿಲ್ಲಾ: ₹ 1 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಸಿಸಿಬಿ ಪೊಲೀಸರ ಕಾರ್ಯಾಚರಣೆ l ಇರಾನ್ ಪ್ರಜೆಗಳು ಸೇರಿ ನಾಲ್ವರ ಬಂಧನ
Last Updated 28 ಸೆಪ್ಟೆಂಬರ್ 2021, 18:59 IST
ಅಕ್ಷರ ಗಾತ್ರ

ಬೆಂಗಳೂರು: ಬಿಡದಿ ಬಳಿಯ ವಿಲ್ಲಾವೊಂದರಲ್ಲಿ ಹೈಡ್ರೊ ಗಾಂಜಾ ಗಿಡ ಬೆಳೆಸಿ ಮಾರುತ್ತಿದ್ದ ಪ್ರಕರಣದಲ್ಲಿ ಇರಾನ್‌ನ ಇಬ್ಬರು ಪ್ರಜೆಗಳು ಸೇರಿ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ₹ 1 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

‘ವಿಲ್ಲಾದಲ್ಲಿ ವ್ಯವಸ್ಥಿತವಾಗಿ ಗಿಡಗಳನ್ನು ಬೆಳೆಸಿ ಮಾರುತ್ತಿದ್ದ ಜಾಲವನ್ನು ಭೇದಿಸಲಾಗಿದೆ. 130 ಹೈಡ್ರೊ ಗಾಂಜಾ ಗಿಡಗಳು, ಎನ್‌ಎಸ್‌ಡಿ ಕಾಗದದ ಚೂರುಗಳು ಹಾಗೂ ಕಾರು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆಮುಂದುವರಿಸಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ದೇವರಜೀವನಹಳ್ಳಿ (ಡಿ.ಜೆ. ಹಳ್ಳಿ) ಠಾಣೆ ವ್ಯಾಪ್ತಿಯ ಕಾವೇರಿ ನಗರಕ್ಕೆ ಸೆ. 26ರಂದು ಕಾರಿನಲ್ಲಿ ಬಂದಿದ್ದ ನಾಲ್ವರು ಆರೋಪಿಗಳು, ಗಾಂಜಾ ಮಾರುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿಆರೋಪಿಗಳನ್ನು ಬಂಧಿಸಲಾಯಿತು. ಅವರ ವಿಚಾರಣೆಯಿಂದ, ವಿಲ್ಲಾದಲ್ಲಿ ಗಾಂಜಾ ಬೆಳೆಯುತ್ತಿದ್ದ ಮಾಹಿತಿ ಹೊರಬಿತ್ತು. ಬಳಿಕ ವಿಲ್ಲಾ ಮೇಲೆ ದಾಳಿ ಮಾಡಲಾಗಿತ್ತು’ ಎಂದೂ ಅವರು ತಿಳಿಸಿದರು.

ಡಾರ್ಕ್‌ನೆಟ್‌ನಲ್ಲಿ ಬೀಜ ಖರೀದಿ: ‘ಪ್ರಮುಖ ಆರೋಪಿ ಜಾವಿದ್ ರುಸ್ತುಂ ಪುರಿ (36) ಹಾಗೂ ಸ್ನೇಹಿತರು, ಬಿಡದಿ ಬಳಿಯ ವಿಲ್ಲಾದಲ್ಲಿ ನೆಲೆಸಿದ್ದರು. ಡ್ರಗ್ಸ್ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸಿ, ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದೂ ಅಧಿಕಾರಿ ಹೇಳಿದರು.

‘ಡಾರ್ಕ್‌ನೆಟ್‌ ಜಾಲತಾಣಗಳ ಮೂಲಕ ಹೈಡ್ರೊ ಗಾಂಜಾ ಬೀಜಗಳನ್ನು ಆರೋಪಿಗಳು ತರಿಸುತ್ತಿದ್ದರು. ವಿಲ್ಲಾದ ಚಾವಣಿ ಹಾಗೂ ಗ್ರೀನ್ ಹೌಸ್‌ನಲ್ಲಿ ಕುಂಡಗಳನ್ನು ಇಟ್ಟು, ಅದರಲ್ಲಿಗಾಂಜಾ ಬೀಜಗಳನ್ನು ಹಾಕುತ್ತಿದ್ದರು. ಗಿಡಗಳು ಬೆಳೆಯಲು ಅನುಕೂಲವಾಗಲೆಂದು ಎಲ್‌ಇಡಿ ಬಲ್ಬ್‌ಗಳ ಮೂಲಕ ಬೆಳಕಿನ ವ್ಯವಸ್ಥೆ ಮಾಡಿದ್ದರು. ಕೋಳಿ ಫಾರ್ಮ್ ಮಾದರಿಯಲ್ಲೇ ಗಿಡಗಳನ್ನು ಬೆಳೆಸುತ್ತಿದ್ದರು’ ಎಂದೂ ತಿಳಿಸಿದರು.

‘ಕುಂಡಗಳಲ್ಲಿ ಬೆಳೆದ ಗಾಂಜಾ ಗಿಡಗಳು ಕತ್ತರಿಸಿ ಒಣಗಿಸುತ್ತಿದ್ದರು. ನಂತರ, ಅದನ್ನೇ ‍ಪೊಟ್ಟಣಗಳಲ್ಲಿ ತುಂಬಿ ಮಾರುತ್ತಿದ್ದರು. ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿ ಉದ್ಯೋಗಿಳು ಆರೋಪಿಗಳ ಬಳಿ ಗಾಂಜಾ ಖರೀದಿಸುತ್ತಿದ್ದರು’ ಎಂದೂ ಅಧಿಕಾರಿ ವಿವರಿಸಿದರು.

ಎನ್‌ಸಿಬಿಯಲ್ಲೂ ಪ್ರಕರಣ: ‘ಆರೋಪಿ ಜಾವಿದ್ ರುಸ್ತುಂ, ಈ ಹಿಂದೆಯೂ ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ. ಆತನ ವಿರುದ್ಧ ಎನ್‌ಸಿಬಿ (ರಾಷ್ಟ್ರೀಯ ಮಾದಕ ವಸ್ತುನಿಯಂತ್ರಣ ಘಟಕ) ಬೆಂಗಳೂರು ವಲಯ ಹಾಗೂ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು’ ಎಂದೂ ಅಧಿಕಾರಿ ಹೇಳಿದರು.

‘ಪುಸ್ತಕ ಓದಿ ಕಲಿತಿದ್ದ’

‘ಕಮ್ಮನಹಳ್ಳಿಯಲ್ಲಿ ನೆಲೆಸಿದ್ದ ಆರೋಪಿ, ಆರಂಭದಲ್ಲಿ ಬೇರೊಬ್ಬರ ಬಳಿ ಗಾಂಜಾ ಖರೀದಿಸಿ ತಂದು ಮಾರುತ್ತಿದ್ದ. ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಕಮ್ಮನಹಳ್ಳಿ, ಬಾಣಸವಾಡಿ, ಹೆಣ್ಣೂರು ಬಳಿ ಕಾರ್ಯಾಚರಣೆ ನಡೆಸಿದ್ದರು. ಸಿಕ್ಕಿಬೀಳುವ ಭಯದಲ್ಲಿ ಆರೋಪಿ, ಕಮ್ಮನಹಳ್ಳಿ ತೊರೆದಿದ್ದ. ಬಿಡದಿ ಬಳಿ ವಿಲ್ಲಾ ಬಾಡಿಗೆ ಪಡೆದು ವಾಸವಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಹೈಡ್ರೊ ಗಾಂಜಾ ಗಿಡ ಬೆಳೆಸುವುದನ್ನು ಆರೋಪಿ, ಪುಸ್ತಕ ಓದಿ ಕಲಿತಿದ್ದ. ಪುಸ್ತಕವನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದ. ಪುಸ್ತಕವೂ ಆತನ ವಿಲ್ಲಾದಲ್ಲಿ ಸಿಕ್ಕಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT