ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ‘ಪಾರ್ಟ್ ಟೈಮ್‌ ಜಾಬ್‌’ ವಂಚನೆ ಜಾಲದ ಮೇಲೆ ಇಡಿ ದಾಳಿ: ₹5.85 ಕೋಟಿ ವಶ

Last Updated 3 ಅಕ್ಟೋಬರ್ 2022, 13:20 IST
ಅಕ್ಷರ ಗಾತ್ರ

‌ಬೆಂಗಳೂರು: ಪಾರ್ಟ್‌ ಟೈಮ್‌ ಜಾಬ್‌ (ಅರೆಕಾಲಿಕ ಉದ್ಯೋಗ) ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಬೆಂಗಳೂರಿನ 12 ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ಸೋಮವಾರ ದಾಳಿ ಮಾಡಿದೆ.

ದಾಳಿ ವೇಳೆ ₹5.85 ಕೋಟಿ ವಶಕ್ಕೆ ಪಡೆಯಲಾಗಿದ್ದು, ಅಕ್ರಮ ಹಣ ವರ್ಗಾವಣೆ ಕಾಯ್ದೆ – 2002ರ ಅಡಿಯಲ್ಲಿ ಪ್ರಕರಣದ ದಾಖಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಪಾರ್ಟ್‌ ಟೈಮ್‌ ಉದ್ಯೋಗ ವಂಚನೆಗೆ ಸಂಬಂಧಿಸದಂತೆ ಬೆಂಗಳೂರು ದಕ್ಷಿಣ ವಿಭಾಗದ ಠಾಣೆಯೊಂದರಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿಕೊಂಡಿತ್ತು. ಈ ಪ್ರಕರಣದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇ.ಡಿ ತನಿಖೆ ನಡೆಸುತ್ತಿದೆ.

‘ಕೀಪ್‌ಶೇರ್’ ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ ಪಾರ್ಟ್‌ಟೈಮ್‌ ಉದ್ಯೋಗದ ಆಮಿಷವೊಡ್ಡಿ ಚೀನಾ ಮೂಲದ ವಂಚಕರು ಸಾರ್ವಜನಿಕರನ್ನು, ಅದರಲ್ಲೂ ಯುವಕರನ್ನು ಆಕರ್ಷಿಸುತ್ತಿದ್ದರು. ಇದಕ್ಕಾಗಿ ಸಾರ್ವಜನಿಕರಿಂದಲೇ ಹಣ ಸಂಗ್ರಹಿಸಲಾಗುತ್ತಿತ್ತು. ವಂಚಕರು ಭಾರತದಲ್ಲಿ ಕಂಪನಿಗಳನ್ನು ಆರಂಭಿಸಿದ್ದು, ಅನೇಕ ಭಾರತೀಯರನ್ನು ಕಂಪನಿಗಳಿಗೆ ನಿರ್ದೇಶಕರು, ಅನುವಾದಕರು (ಮ್ಯಾಂಡರಿನ್ ಅನ್ನು ಇಂಗ್ಲಿಷ್‌ಗೆ), ಎಚ್‌ಆರ್‌ ಮ್ಯಾನೇಜರ್ ಮತ್ತು ಟೆಲಿ ಕಾಲರ್‌ಗಳಾಗಿ ನೇಮಕ ಮಾಡಿಕೊಂಡಿದ್ದರು. ಇವರ ದಾಖಲೆಗಳ ಮೂಲಕ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದರು ಎಂದು ಇ.ಡಿ ಹೇಳಿದೆ.

‘ಕೀಪ್‌ಶೇರ್‌‘ ಅನ್ನು ಹೂಡಿಕೆ ಅಪ್ಲಿಕೇಶನ್‌ನೊಂದಿಗೆ ಲಿಂಕ್ ಮಾಡಲಾಗಿತ್ತು. ಈ ಆ್ಯಪ್‌ನಲ್ಲಿ ನೋಂದಣಿಗಾಗಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಲಾಗುತ್ತಿತ್ತು. ಹೂಡಿಕೆಯ ಹೆಸರಿನಲ್ಲೇ ಹಣವನ್ನು ಸಂಗ್ರಹಿಸಲಾಗುತ್ತಿತ್ತು ಎನ್ನಲಾಗಿದೆ. ಸೆಲೆಬ್ರಿಟಿಗಳ ವಿಡಿಯೋಗಳನ್ನು ಲೈಕ್ ಮಾಡುವ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳನ್ನು ಅಪ್ಲೋಡ್ ಮಾಡುವ ಕೆಲಸವನ್ನು ನೋಂದಣಿದಾರರಿಗೆ ನೀಡಲಾಗುತ್ತಿತ್ತು. ಪ್ರತಿ ವಿಡಿಯೊಗೆ ₹20 ಪಾವತಿಸಲಾಗುತ್ತಿತ್ತು. ಹಣ ‘ಕೀಪ್‌ಶೇರ್’ ವ್ಯಾಲೆಟ್‌ಗೆ ಜಮೆಯಾಗುತ್ತಿತ್ತು ಎನ್ನಲಾಗಿದೆ.

ಸ್ವಲ್ಪ ಸಮಯದವರೆಗೆ ವ್ಯಾಲೆಟ್‌ಗೆ ಹಣ ಜಮೆಯಾಗುತ್ತಿತ್ತು. ನಂತರ, ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿತ್ತು. ಹೀಗಾಗಿ, ನೋಂದಣಿದಾರರು ತಮ್ಮ ಕೋಟ್ಯಂತರ ಮೊತ್ತದ ಹೂಡಿಕೆ ಮತ್ತು ಸಂಭಾವನೆಗಳನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಮೂಲದ ಕಂಪನಿಗಳ ಬ್ಯಾಂಕ್ ಖಾತೆಗಳಿಂದ ಸಂಗ್ರಹಿಸಿದ ಹಣವನ್ನು ನಂತರ ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸಿ, ಚೀನಾ ಮೂಲದ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಿಗೆ ವರ್ಗಾಯಿಸಲಾಗಿದೆ. ಚೀನಾದ ವ್ಯಕ್ತಿಗಳ ನಿಯಂತ್ರಣದ ಫೋನ್ ಮತ್ತು ವಾಟ್ಸಾಪ್ ಗ್ರೂಪ್‌ಗಳ ಮೂಲಕ ಎಲ್ಲಾ ವಹಿವಾಟುಗಳು ನಡೆದಿವೆ . ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್ ಪ್ರಕಾರ, 92 ಆರೋಪಿಗಳ ಪೈಕಿ ಆರು ಜನರು ಚೀನಾ ಮತ್ತು ತೈವಾನ್‌ನ ಮೂಲದವರಾಗಿದ್ದಾರೆ. ಈ ವ್ಯಕ್ತಿಗಳೇ ಸಂಪೂರ್ಣ ಹಗರಣವನ್ನು ನಿಯಂತ್ರಿಸಿದ್ದಾರೆ ಎಂದು ಇಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT