ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ– ಪಿಯುಗೆ ಒಂದೇ ಮಂಡಳಿ

‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ’ ರಚಿಸಲು ನಿರ್ಧಾರ
Last Updated 17 ಸೆಪ್ಟೆಂಬರ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿರುವ ಪರೀಕ್ಷಾ ಶಾಖೆಯನ್ನು ವಿಲೀನಗೊಳಿಸಿ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ’ ಎಂಬಒಂದೇ ಪರೀಕ್ಷಾ ಮಂಡಳಿ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಉದ್ದೇಶದಿಂದ ‘ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ–1966’ ತಿದ್ದುಪಡಿಗೆ ಮಸೂದೆ ಸಿದ್ಧವಾಗಿದೆ. ಈಗ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಸರ್ಕಾರ ತೀರ್ಮಾನಿಸಿದೆ.

ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ (ಎನ್‌ಇಪಿ)–2020 ಅನ್ವಯ ‘ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ’ಯ ಹೆಸರನ್ನು ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ’ ಎಂದು ಮರು ನಾಮಕರಣ ಮಾಡಬೇಕಾಗಿದೆ ಎಂದೂ ಮಸೂದೆ ಪ್ರತಿಪಾದಿಸಿದೆ.‌ ಪ್ರಸ್ತಾವಿತ ತಿದ್ದುಪಡಿ ಪ್ರಕಾರ ಈಗಿರುವ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ‌ ಹೊಸ ಸ್ವರೂಪ ಪಡೆಯಲಿದ್ದು, ಇದರಿಂದ ವಾರ್ಷಿಕ ಸುಮಾರು ₹ 2 ಲಕ್ಷವಷ್ಟೆ ಹೆಚ್ಚುವರಿಯಾಗಿ ವೆಚ್ಚ ತಗಲಲಿದೆ.

‘ಮಂಡಳಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪಿಯು ಶಿಕ್ಷಣ ಇಲಾಖೆಯಿಂದ ಜಂಟಿ ನಿರ್ದೇಶಕ ಶ್ರೇಣಿಗಿಂತ ಕೆಳಗಿನವರಲ್ಲದ, ತಲಾ ಒಬ್ಬರಂತೆ ನಿರ್ದೇಶಕರು ಮತ್ತು ಕಾರ್ಯದರ್ಶಿಗಳು ಇರಲಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಇತರ ಪರೀಕ್ಷೆಗಳು ಹಾಗೂ ಪಿಯು ಪರೀಕ್ಷೆಗಳಿಗೆ ಪ್ರತ್ಯೇಕ ನಿರ್ದೇಶಕರು, ಉಪಾಧ್ಯಕ್ಷರು ಇರಲಿದ್ದಾರೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು, ವಿತರಣೆ, ರಹಸ್ಯ ಕಾಪಾಡುವುದು ಸಂಬಂಧಿಸಿದಂತೆ ಆಯಾ ಪರೀಕ್ಷೆಯ ನಿರ್ದೇಶಕರಿಗೆ (ಕಾರ್ಯದರ್ಶಿ) ವಿಶೇಷಾಧಿಕಾರ ನೀಡಲಾಗಿದೆ. ಈ ವಿಷಯದಲ್ಲಿ ಮಂಡಳಿಯ ಸದಸ್ಯರಿಗಾಗಲಿ, ಇತರ ಅಧಿಕಾರಿಗಳಿಗಾಗಲಿ ಮಧ್ಯಪ್ರವೇಶಿಸಲು ಅವಕಾಶ ಇಲ್ಲ’ ಎಂದು ಶಾಲಾ ಶಿಕ್ಷಣ ಇಲಾಖೆಯ ಮೂಲಗಳು ಹೇಳಿವೆ.

‘ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ನೇತೃತ್ವದಲ್ಲಿ ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮತ್ತು ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಒಂದೇ ಪರೀಕ್ಷಾ ಮಂಡಳಿ ರಚಿಸುವ ಮತ್ತು ಅದರ ಸ್ವರೂಪದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಮಂಡಳಿಗೆ ಐಎಎಸ್ ಅಧಿಕಾರಿ ಅಧ್ಯಕ್ಷ

‘ಹೊಸ ಮಂಡಳಿಯು ಪಿಯುಸಿ, ಎಸ್ಸೆಸ್ಸೆಲ್ಸಿ, ಶಾಲಾಪೂರ್ವ ಶಿಕ್ಷಣದಲ್ಲಿ ಡಿಪ್ಲೊಮಾ ಮತ್ತು ಇತರ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸಲಿದೆ. ಸಾಕ್ಷರತಾ ಇಲಾಖೆ ನಿರ್ದೇಶಕ ಹುದ್ದೆಯನ್ನು ಮಂಡಳಿಯ ಅಧ್ಯಕ್ಷ ಹುದ್ದೆಯಾಗಿ ಮರು ನಿಗದಿಪಡಿಸಲಾಗುವುದು. ಅಲ್ಲದೆ, ಐಎಎಸ್‌ (ಆಯ್ಕೆ ಶ್ರೇಣಿ ಅಥವಾ ಕಿರಿಯ ಆಡಳಿತಾತ್ಮಕ ಶ್ರೇಣಿ) ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಮಂಡಳಿಯ ವಿಶೇಷ ಆಹ್ವಾನಿತರಾಗಲಿದ್ದಾರೆ’ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT