ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆ ಹಗರಣ: ವರದಿ ಸಲ್ಲಿಕೆಗೆ ಪಿಎಸಿ ಸೂಚನೆ

Last Updated 5 ಆಗಸ್ಟ್ 2021, 20:27 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾತೃಪೂರ್ಣ’ ಯೋಜನೆಯಡಿ ಏಕ ಟೆಂಡರ್ ಮೂಲಕ ಕೋಳಿ ಮೊಟ್ಟೆ ಖರೀದಿಗೆ ಮುಂದಾಗಿದ್ದು ಶಂಕೆ ಮೂಡಿಸಿದೆ. ಆದ್ದರಿಂದ, ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾಗದ ಪತ್ರಗಳನ್ನು ಒಳಗೊಂಡ ಸಮಗ್ರ ವರದಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಿಧಾನಮಂಡಲದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸೂಚನೆ ನೀಡಿದೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಸಮಿತಿಯ ಅಧ್ಯಕ್ಷ ರಾಮಲಿಂಗಾರೆಡ್ಡಿ ಅವರು, ಕೋಳಿ ಮೊಟ್ಟೆ ಹಗರಣದ ಬಗ್ಗೆ ಸಮಿತಿಯ ಸಭೆಯಲ್ಲಿ ಪ್ರಸ್ತಾಪಿಸಿ ಇಲಾಖೆ ಅಧಿಕಾರಿಗಳಿಂದ ವಿವರ ಕೇಳಲಾಯಿತು ಎಂದು ಹೇಳಿದರು.

ಶಶಿಕಲಾ ಜೊಲ್ಲೆ ಇಲಾಖೆಯ ಸಚಿವೆಯಾಗಿದ್ದಾಗ ಕೋಳಿ ಮೊಟ್ಟೆ ಖರೀದಿ ಟೆಂಡರ್‌ನಲ್ಲಿ ಕಮಿಷನ್‌ ಕೇಳಿದ್ದರೆನ್ನಲಾದ ಕುಟುಕು ಕಾರ್ಯಾಚರಣೆಯ ವಿಡಿಯೊ ಬಹಿರಂಗವಾಗಿತ್ತು. ಏಕ ಟೆಂಡರ್‌ಗೆ ಸಚಿವ ಸಂಪುಟದಲ್ಲಿ ಪ್ರಸ್ತಾವವನ್ನೂ ಇಟ್ಟಿದ್ದರು. ಆದರೆ, ವಿಡಿಯೊ ಬಹಿರಂಗಗೊಂಡ ಬಳಿಕ ಸಂಪುಟಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯಲಾಯಿತು. ಆ ಬಳಿಕ ಅವರು ಸ್ಥಳೀಯ ಮಟ್ಟದಲ್ಲೇ ಖರೀದಿಗೆ ನಿರ್ಧರಿಸಿದರು ಎಂದು ತಿಳಿಸಿದರು.

ಆದ್ದರಿಂದ ಈ ಎಲ್ಲ ವಿಚಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಒದಗಿಸಬೇಕು ಎಂದು ಸಭೆಯಲ್ಲಿ ಇಲಾಖಾ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದೇವೆ ಎಂದರು.

ನಿಯಮದ ಪ್ರಕಾರ ‘ಸೃಷ್ಟಿ’ ಮತ್ತು ‘ಮಾತೃಪೂರ್ಣ’ ಯೋಜನೆಗಳಡಿ ಅಂಗನವಾಡಿ ಕೇಂದ್ರಗಳ ಮೂಲಕ ನೀಡಲಾಗುವ ಕೋಳಿ ಮೊಟ್ಟೆಯನ್ನು ಅಂಗನವಾಡಿ ಕಾರ್ಯಕರ್ತೆಯರೇ ಸ್ಥಳೀಯವಾಗಿ ಖರೀದಿಸಿ ಫಲಾನುಭವಿಗಳಿಗೆ ಒದಗಿಸಬೇಕು. ಖರೀದಿಸಲಾದ ಮೊಟ್ಟೆಯ ಹಣವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬಾಲ ವಿಕಾಸ ಸಮಿತಿಯ ಜಂಟಿ ಖಾತೆಗೆ ಜಮೆ ಮಾಡುತ್ತಾರೆ.

ಆದರೆ, ಸಚಿವರು ಈ ನಿಯಮವನ್ನು ಉಲ್ಲಂಘಿಸಿ ಕೋಳಿ ಮೊಟ್ಟೆ ಪೂರೈಕೆಗೆ ಏಕ ಟೆಂಡರ್‌ ಕರೆದಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT