ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನತಾ ಜಲಧಾರೆ’ ಅಧಿಕೃತ ಚುನಾವಣಾ ಪ್ರಚಾರ

ವಾಹನಕ್ಕೆ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ
Last Updated 12 ಏಪ್ರಿಲ್ 2022, 19:33 IST
ಅಕ್ಷರ ಗಾತ್ರ

ಮೈಸೂರು: ‘ಜನತಾ ಜಲಧಾರೆ’ ಯಾತ್ರೆ ಮೂಲಕ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಯಾತ್ರೆಯ ವಾಹನಕ್ಕೆ ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ವಿಶೇಷ ಪೂಜೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶೋಗಾಗಿ ನಡೆಸಿದ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಗೆ ಇದು ಪರ್ಯಾಯವಲ್ಲ. ಅವರು ಅದನ್ನು ರಾಜಕೀಯ ಯಾತ್ರೆ ಎಂದು ಹೇಳಲಿಲ್ಲ ಅಷ್ಟೆ. ನಮ್ಮದು ಜನರ ಮುಂದೆ ಸಮಸ್ಯೆ ಬಿಚ್ಚಿಡುವ ಯಾತ್ರೆ’ ಎಂದರು.

‘ಕೇವಲ 30– 40 ಸ್ಥಾನಕ್ಕಾಗಿ ನಡೆಸುವ ಹೋರಾಟವಲ್ಲ. ಧರ್ಮಗಳ ನಡುವೆ ಬೆಂಕಿ ಇಟ್ಟು ಮತ ಕೇಳುತ್ತಿಲ್ಲ. ಈ ಬಾರಿ ಕನ್ನಡಿಗರ ಬಹುಮತದ ಸರ್ಕಾರ ಬೇಕು. ಯಾರೊಂದಿಗೂ ಹೊಂದಾಣಿಕೆ ಇಲ್ಲ. ಬಹುಮತ ಕೊಟ್ಟರೆ ರಾಜ್ಯದಲ್ಲಿ ಹಲವು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಸಾಧ್ಯವಾಗದಿದ್ದರೆ ಪಕ್ಷವನ್ನು ವಿಸರ್ಜಿಸುವೆ’ ಎಂದರು.

‘ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ಕೊಡಲಾಗುವುದು. ಯಾರೇ ಬಂದರೂ ಸ್ವಾಗತ. ಅಧಿಕಾರಕ್ಕಾಗಿ ಬಂದವರಿಗೆ ಅವಕಾಶವಿಲ್ಲ. ಈ‌ ಮಾತು ಜಿ.ಟಿ.ದೇವೇಗೌಡರಿಗೂ ಅನ್ವಯ’ ಎಂದರು.

‘ಹಾಸನ ಜಿಲ್ಲೆಯ ಯಾವ ಜಾತ್ರೆಯಲ್ಲೂ ಮುಸ್ಲಿಮ್ ವ್ಯಾಪಾರಿಗಳ ನಿರ್ಬಂಧಕ್ಕೆ ಅವಕಾಶ ಕೊಡುವುದಿಲ್ಲ. ಚನ್ನಕೇಶವ ಜಾತ್ರೆಯಲ್ಲಿ ಆಗಿರುವ ಸಮಸ್ಯೆಯನ್ನು ಬಗೆಹರಿಸುವಂತೆಎಚ್.ಡಿ.ರೇವಣ್ಣ ಅವರಿಗೆ ಹೇಳಿರುವೆ. ಎಲ್ಲಾ ಜಿಲ್ಲೆಗಳಲ್ಲೂ ನಿರ್ಬಂಧ ತೆರವಿಗೆ ಹೋರಾಡುವೆ’ ಎಂದರು.

‘ಕಲ್ಲಂಗಡಿ ಒಡೆದಾಗ ತೋರಿದ ಅನುಕಂಪ ತಲೆ ಒಡೆದಾಗಲೂ ತೋರಿ ಎಂಬ ಸಿ.ಟಿ.ರವಿ ಮಾತಿನ ಅರ್ಥ ಏನು? ರಾಜ್ಯದಲ್ಲಿ ತಲೆ ಒಡೆಯುತ್ತಾ ಇರುತ್ತೇವೆ ಅಂತಾನಾ? ನೀವು ತಲೆ ಒಡೆಯುತ್ತೀರಿ, ನಾವು ಸಾಂತ್ವನ ಹೇಳಬೇಕು ಅನ್ನೋದಾ’ ಎಂದೂ‌ ಪ್ರಶ್ನಿಸಿದರು.

‘ರಾಯಚೂರಿನಲ್ಲಿ ತಲವಾರ್ ಹಂಚಿದ್ದು ಏಕೆ, ಅವರನ್ನು ಏಕಿನ್ನೂ ಬಂಧಿಸಿಲ್ಲ ಎಂಬ ಪ್ರಶ್ನೆಗಳಿಗೆ ಮೌನಿ‌ ಬಸವರಾಜ ಬೊಮ್ಮಾಯಿ ಅವರೇ ಉತ್ತರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT