ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರಿಗೆ ತುರ್ತು ಸ್ಪಂದನ ಸಹಾಯ: ಬೀದರ್‌ ಸೇರಿ 3 ಜಿಲ್ಲೆಗಳು ಮುಂಚೂಣಿಯಲ್ಲಿ

Last Updated 6 ಜೂನ್ 2022, 19:31 IST
ಅಕ್ಷರ ಗಾತ್ರ

ಬೀದರ್‌: ಅಪಘಾತ, ದರೋಡೆ, ಲೂಟಿ, ಅಪಹರಣ ಸೇರಿ ಜನರು ರಕ್ಷಣೆ ಕೋರಿ ತುರ್ತು ಸ್ಪಂದನೆ ಸಹಾಯವಾಣಿ (ಇಆರ್‌ಎಸ್‌ಎಸ್‌) 112 ಸಂಖ್ಯೆಗೆ ಕರೆ ಮಾಡಿದ ಸರಾಸರಿ 20 ನಿಮಿಷಗಳಲ್ಲೇ ಸೇವೆ ನೀಡುವಲ್ಲಿ ಬೀದರ್‌ ಸೇರಿ ರಾಜ್ಯದ ಮೂರು ಜಿಲ್ಲೆಗಳು ಮುಂಚೂಣಿಯಲ್ಲಿವೆ.

ಸಾರ್ವಜನಿಕರು ಕರೆ ಮಾಡಿದ ಸರಾಸರಿ 18.20 ನಿಮಿಷಗಳಲ್ಲಿ ಸೇವೆ ನೀಡಿ ಚಾಮರಾಜನಗರ ಮೊದಲ ಸ್ಥಾನದಲ್ಲಿದೆ. 18.27 ನಿಮಿಷಗಳಲ್ಲಿ ಸೇವೆ ನೀಡುವ ರಾಯಚೂರು ಎರಡನೇ ಮತ್ತು 21.23 ನಿಮಿಷಗಳಲ್ಲಿ ಸೇವೆ ಕೊಡುವ ಬೀದರ್ ಮೂರನೇ ಸ್ಥಾನದಲ್ಲಿದೆ. 53.05 ನಿಮಿಷಗಳು ನಂತರ ಸೇವೆಗೆ ಬರುವ ದಾವಣಗೆರೆ ಕೊನೆಯ ಸ್ಥಾನದಲ್ಲಿದೆ.

ರಾಜ್ಯದ ಆರು ಕಮಿಷನರೇಟ್‌ ವ್ಯಾಪ್ತಿಯ ಆರು ಮಹಾನಗರಗಳಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದರೆ, ಮೈಸೂರು ಮತ್ತು ಹುಬ್ಬಳ್ಳಿ–ಧಾರವಾಡ ನಗರಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

ಬೀದರ್‌ ಜಿಲ್ಲೆಗೆ 2021ರ ಜನವರಿ 26ರಂದು ಒಟ್ಟು 17 ತುರ್ತು ಸ್ಪಂದನೆ ಸಹಾಯವಾಣಿ ವಾಹನಗಳನ್ನು ಕೊಡಲಾಗಿತ್ತು. ಇದರಲ್ಲಿ 10 ಹೊಸ ಹಾಗೂ 5 ಹಳೆಯ ವಾಹನಗಳಿವೆ. ಪೊಲೀಸ್‌ ಇಲಾಖೆ ಸೇವೆ ಆರಂಭಿಸಿದ ಮೊದಲ ತಿಂಗಳಲ್ಲೇ 633 ಕರೆಗಳು ಬಂದಿದ್ದವು. ಈಗ ಕರೆಗಳ ಸಂಖ್ಯೆ ತಿಂಗಳಿಗೆ ಒಂದು ಸಾವಿರ ದಾಟಿದೆ.

‘ದಾಯಾದಿ ಕಲಹ, ಅಪಘಾತ, ಜೂಜಾಟ, ಧ್ವನಿವರ್ಧಕ ಬಳಕೆ, ಕಳ್ಳನನ್ನು ಹಿಡಿದು ಒಪ್ಪಿಸಲು ಕರೆ ಮಾಡಿದವರೇ ಅಧಿಕ. ಅಪಘಾತದಲ್ಲಿ ಗಾಯಗೊಂಡವರಿಗೆ ನೆರವು ಕಲ್ಪಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದೇವೆ’ ಎಂದು ಇಆರ್‌ಎಸ್‌ಎಸ್‌ ಸಿಬ್ಬಂದಿ ಹೇಳಿದರು.

‘ಬೀದರ್ ಜಿಲ್ಲೆಯಲ್ಲಿ 112ಕ್ಕೆ ಜನವರಿಯಲ್ಲಿ 633, ಫೆಬ್ರುವರಿ 688, ಮಾರ್ಚ್‌ನಲ್ಲಿ 852, ಏಪ್ರಿಲ್‌ನಲ್ಲಿ 878 ಮತ್ತು ಮೇನಲ್ಲಿ 1,018 ಕರೆಗಳು ಸೇರಿ ಈವರೆಗೆ 4,069 ಕರೆಗಳು ಬಂದಿವೆ. ಕರೆ ಮಾಡಿದ 21 ನಿಮಿಷಗಳಲ್ಲೇ ಇಆರ್‌ಎಸ್‌ಎಸ್‌ ಸ್ಥಳಕ್ಕೆ ತಲುಪುವ ಕಾರಣ ಜನರಲ್ಲಿ ವಿಶ್ವಾಸ ಹೆಚ್ಚಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರ್ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಗಳಿಗೆ ಹೊಂದಿಕೊಂಡಿರುವ ಕಾರಣ ಬೀದರ್‌ ಜಿಲ್ಲೆಯ ಗಡಿಗಳಲ್ಲೇ ನಾಲ್ಕು ವಾಹನಗಳನ್ನು ನಿಯೋಜಿಸಲಾಗಿದೆ. ವಾಹನಗಳು ಗಸ್ತು ಹಾಕುವ ಕಾರಣ ಅ‍‍‍‍‍‍ಪರಾಧ ಸಂಖ್ಯೆ ಇಳಿದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT