ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಕಾಂಗಳ ಪೋರ್ಟಲ್‌ ಸಮಸ್ಯೆ: ಗ್ರಾಹಕರ ಪರದಾಟ   

‘ಆರ್‌-ಎಪಿಡಿಆರ್‌ಪಿ’ ವೆಬ್‌ ಅಪ್ಲಿಕೇಷನ್‌ನಿಂದ ಹಲವು ಕಾರ್ಯಗಳು ವಿಳಂಬ: ಕ್ರಮಕ್ಕೆ ಹಿಂದೇಟು
Last Updated 30 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವಿದ್ಯುತ್‌ ಸಂಪರ್ಕಕ್ಕೆ ನೋಂದಣಿ,ಖಾತೆ ಹೆಸರು ಬದಲಾವಣೆ, ಕಡತಗಳ ನಿರ್ವಹಣೆ ಇತ್ಯಾದಿ ಕಾರ್ಯಗಳಿಗೆ ರೂಪಿಸಿದ್ದ ‘ಆರ್‌–ಎಪಿಡಿಆರ್‌ಪಿ’ ವೆಬ್‌ ಅಪ್ಲಿಕೇಷನ್‌ ಸಮಸ್ಯೆಯಿಂದಾಗಿ ಗ್ರಾಹಕರು ಪರದಾಡುವಂತಾಗಿದೆ.

ಗ್ರಾಹಕರಿಗೆ ಸಕಾಲದಲ್ಲಿ ಸೇವೆಗಳು ಲಭ್ಯವಾಗುತ್ತಿಲ್ಲ. ಒಂದೆರಡು ಗಂಟೆಗಳಲ್ಲಿ ನಡೆಯುತ್ತಿದ್ದ ಕಾರ್ಯ ಈಗ ಹತ್ತಾರು ದಿನಗಳಷ್ಟು ಸಮಯಾವಕಾಶವನ್ನು ತೆಗೆದುಕೊಳ್ಳುತ್ತಿದೆ. ಹಲವು ಬಾರಿ ಸರ್ವರ್‌ ಗಂಟೆಗಟ್ಟಲೇ ಕೈಕೊಡುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ.

ರಾಜ್ಯದ ಎಲ್ಲ ಎಸ್ಕಾಂಗಳು ‘ಆರ್‌–ಎಪಿಡಿಆರ್‌ಪಿ’ (ಪುನರ್‌ ರಚಿಸಿದ ವೇಗವರ್ಧಿತ ವಿದ್ಯುತ್ ಅಭಿವೃದ್ಧಿ ಮತ್ತು ಸುಧಾರಣಾ ಕಾರ್ಯಕ್ರಮ) ಅಳವಡಿಸಿಕೊಂಡಿವೆ.

’ಈ ವೆಬ್‌ ಅಪ್ಲಿಕೇಷನ್‌ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದು ಏರಿಳಿತವಿಲ್ಲದೇ ಕೆಲಸ ಮಾಡದ ಕಾರಣ ಎಸ್ಕಾಂ ಗ್ರಾಹಕರಿಗೆ ತೊಂದರೆಯಾಗುತ್ತಿದೆ‘ ಎಂದು ಬೆಸ್ಕಾಂ ಪ್ರಧಾನ ವ್ಯವಸ್ಥಾಪಕರು ಎಲ್ಲ ಎಸ್ಕಾಂಗಳಿಗೂ ಆಗಸ್ಟ್‌ನಲ್ಲೇ ಪತ್ರ ಬರೆದಿದ್ದರು.

’ನಿರಂತರವಾಗಿ ನಿಗಾವಹಿಸಿ ಸಮಸ್ಯೆ ಇತ್ಯರ್ಥಪಡಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಶಾಶ್ವತವಾದ ಪರಿಹಾರ ದೊರೆತಿಲ್ಲ. ಇದರಿಂದ, ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತಿದೆ‘ ಎಂದು ಅವರು ವಿವರಿಸಿದ್ದರು.

ಹೀಗಾಗಿ, ಯಾವುದೇ ಅಡಚಣೆಗಳಿಲ್ಲದೆಯೇ ಗ್ರಾಹಕರಿಗೆ ಸುಗಮವಾಗಿ ಸೇವೆ ಒದಗಿಸುವ ನಿಟ್ಟಿನಲ್ಲಿ ಬೆಸ್ಕಾಂ ಮತ್ತು ಇತರ ಎಸ್ಕಾಂಗಳಿಗೆ ಈ ಪೋರ್ಟಲ್‌ ಬಳಕೆಗೆ ವಿವಿಧ ಸಮಯವನ್ನು ಪ್ರಧಾನ ವ್ಯವಸ್ಥಾಪಕರೇ ನಿಗದಿಪಡಿಸಿದ್ದರು.

ಬೆಸ್ಕಾಂ ವ್ಯಾಪ್ತಿಯಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಸೆಸ್ಕಾಂ, ಗೆಸ್ಕಾಂ, ಹೆಸ್ಕಾಂ ಮತ್ತು ಮೆಸ್ಕಾಂಗಳಿಗೆ ಮಧ್ಯಾಹ್ನ 1.30ರಿಂದ ಸಂಜೆ 7ರವರೆಗೆ ಸಮಯ ನಿಗದಿಪಡಿಸಲಾಗಿತ್ತು.

ನಾಲ್ಕು ತಿಂಗಳಿಂದ ಆರಂಭವಾಗಿರುವ ಈ ಸಮಸ್ಯೆ ಇದುವರೆಗೂ ಬಗೆಹರಿದಿಲ್ಲ. ಕೆಲವೆಡೆ ಬಿಲ್‌ ಪಾವತಿಸಲು ಸಹ ಸಾಧ್ಯವಾಗುತ್ತಿಲ್ಲ.

’ಇನ್‌ಫೈನೈಟ್‌ ಕಂಪ್ಯೂಟರ್‌ ಸೊಲ್ಯುಷನ್ಸ್‌‘ ಕಂಪನಿ ಈ ಪೋರ್ಟಲ್‌ ನಿರ್ವಹಿಸುತ್ತಿದೆ.ಈ ಪೋರ್ಟಲ್‌ ಮೂಲಕ ನೀಡುತ್ತಿರುವ ಬಹುತೇಕ ಸೇವೆಗಳು ಸಕಾಲದ ವ್ಯಾಪ್ತಿಯಲ್ಲಿವೆ. ಆದರೆ, ಸರ್ವರ್‌ ಸಮಸ್ಯೆಯಿಂದ ಸಕಾಲ ಕಾಯ್ದೆಗೆ ನಿಗದಿಪಡಿಸಿರುವ ಅವಧಿಗಿಂತ ವಿಳಂಬವಾಗಿ ಸೇವೆ ನೀಡಲಾಗುತ್ತಿದೆ. ಇದರಿಂದ, ಗ್ರಾಹಕರಿಗೆ ನಷ್ಟವಾಗುತ್ತಿದೆ. ಶುಲ್ಕ ಪಾವತಿಸಲು ವಿಳಂಬ ಮಾಡಿದರೆ ಗ್ರಾಹಕರಿಗೆ ದಂಡ ವಿಧಿಸಲು ಮುಂದಾಗುವ ಎಸ್ಕಾಂಗಳು ಸೇವೆ ನೀಡುವಲ್ಲಿ ವಿಫಲವಾದಾಗ ನಷ್ಟ ತುಂಬಿ ಕೊಡುತ್ತಿಲ್ಲ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಕೆ:

’ಆರ್‌–ಎಪಿಡಿಆರ್‌ಪಿ’ ಗುತ್ತಿಗೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆರೋಪಿಸಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರಿಗೆ ಪಕ್ಷವು ದೂರು ಸಲ್ಲಿಸಿದೆ.

ಕಾರ್ಯಕ್ಷಮತೆ ಇಲ್ಲದ ಕಂಪನಿಯನ್ನು ಆಯ್ಕೆ ಮಾಡಿದ್ದರಿಂದ ಈ ಸಾಫ್ಟ್‌ವೇರ್‌ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗುತ್ತಿಗೆ ನೀಡುವಲ್ಲಿ ಯಾವ ರೀತಿಯ ಭ್ರಷ್ಟಾಚಾರ ನಡೆದಿದೆ ಎನ್ನುವ ಬಗ್ಗೆ ತನಿಖೆ ನಡೆಸಲು ಲೋಕಾಯುಕ್ತಕ್ಕೆ ವಹಿಸಬೇಕು ಎಂದು ಕೆಆರ್‌ಎಸ್‌ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ರಘುಪತಿ ಭಟ್‌ ಒತ್ತಾಯಿಸಿದ್ದಾರೆ.

ಗ್ರಾಹಕರಿಗೆ ತೊಂದರೆಯಾಗುತ್ತಿದ್ದರೂ ಗುತ್ತಿಗೆ ಪಡೆದಿರುವ ಕಂಪನಿ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಅಧಿಕಾರಿಗಳು ಎಸಗಿರುವ ತಪ್ಪನ್ನು ಹಾಗೂ ಗುತ್ತಿಗೆ ಪಡೆದಿರುವ ಕಂಪನಿಯನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಈ ರೀತಿಯ ಕಳಪೆ ಸೇವೆಗೆ ಎಷ್ಟು ದಂಡ ವಿಧಿಸಲಾಗಿದೆ ಎನ್ನುವ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಬೇಕು ಮತ್ತು ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಗೆಹರಿಯದ ಸಮಸ್ಯೆ: ಆಗಸ್ಟ್‌ ತಿಂಗಳಿಂದ ಸಮಸ್ಯೆಯಾಗುತ್ತಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಸಮಯ ನಿಗದಿಪಡಿಸಲಾಗಿದೆ. ಆದರೆ, ನೌಕರರು ಕಚೇರಿಗೆ ಬರುವುದೇ 10ಗಂಟೆ ನಂತರ. ಇದರಿಂದ, ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆಯಲು ಮತ್ತು ಹೊಸ ಸಂಪರ್ಕ ಪಡೆಯುವವರಿಗೆ ತೊಂದರೆಯಾಗುತ್ತಿದೆ. 2-3 ದಿನಗಳಲ್ಲಾಗುವ ಕೆಲಸಕ್ಕೆ 15 ದಿನಗಳಷ್ಟು ತೆಗೆದುಕೊಳ್ಳಲಾಗುತ್ತಿದೆ. ಅಧಿಕಾರಿಗಳ ಗಮನಕ್ಕೆ ಈ ಸಮಸ್ಯೆ ತಂದಿದ್ದರೂ ಬಗೆಹರಿದಿಲ್ಲ ಎಂದು ವಿದ್ಯುತ್‌ ಗುತ್ತಿಗೆದಾರಆರ್‌. ಮಂಜುನಾಥ್‌ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT