ಭಾನುವಾರ, ಜೂನ್ 13, 2021
21 °C
ಎಸ್ಸೆಸ್ಸೆಲ್ಸಿ: ಸರ್ಕಾರಿ ಪ್ರೌಢಶಾಲೆಗಳ ಮಟ್ಟದಲ್ಲಿ ಎರಡನೇ ಸ್ಥಾನ

ಕೂಲಿ ಮಾಡುವ ಪೋಷಕರ ಪುತ್ರಿಯ ಸಾಧನೆ

ಸಿ.ಎಸ್. ನಿರ್ವಾಣಸಿದ್ದಯ್ಯ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ಕಾಕೋಳು ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ವಿ. ರಕ್ಷಿತಾ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 547 ಅಂಕಗಳನ್ನು ಗಳಿಸುವ ಮೂಲಕ, ಯಲಹಂಕ ಕ್ಷೇತ್ರದ ಸರ್ಕಾರಿ ಪ್ರೌಢಶಾಲೆಗಳ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದ್ದಾಳೆ. 

‘ನಮ್ಮದು ಬಡ ಕುಟುಂಬ. ಅಪ್ಪ ಅಮ್ಮ ಇಬ್ಬರೂ ದಿನವೂ ದುಡಿದು ಬಂದರೆ ಮಾತ್ರ ನಮ್ಮ ಹೊಟ್ಟೆ ತುಂಬುತ್ತದೆ. ಬಡತನದ ಬವಣೆಯೇ ನನ್ನ ಓದಿಗೆ ಮೂಲ ಪ್ರೇರಣೆ. ಬಡತನದಲ್ಲೂ ಏನಾದರೂ ಸಾಧಿಸುವ ಛಲ ನನ್ನಲ್ಲಿದೆ’ ಎನ್ನುತ್ತಾಳೆ ಈ ವಿದ್ಯಾರ್ಥಿನಿ. 

‘ಶಾಲೆಯ ಶಿಕ್ಷಕರು ಉತ್ತಮವಾಗಿ ಮಾರ್ಗದರ್ಶನ ನೀಡಿದರು. ಎಷ್ಟೇ ಬಾರಿ ಪ್ರಶ್ನೆ ಕೇಳಿದರೂ, ಪ್ರೀತಿಯಿಂದ ವಿಷಯ ಮನದಟ್ಟು ಮಾಡಿಸುತ್ತಿದ್ದರು. ಶಿಕ್ಷಕ ವರ್ಗ ತುಂಬಿದ ಆತ್ಮವಿಶ್ವಾಸವೇ ಹೆಚ್ಚು ಅಂಕಗಳು ಬರಲು ಕಾರಣ’ ಎಂದು ಹೇಳುತ್ತಾಳೆ ರಕ್ಷಿತಾ. 

‘ಪಾಂಚಜನ್ಯ ಸಂಸ್ಥೆಯವರು ನುರಿತ ಶಿಕ್ಷಕರನ್ನು ಕರೆಯಿಸಿ ಪಾಠ ಹೇಳಿ ಕೊಡುವ ವ್ಯವಸ್ಥೆ ಮಾಡಿದ್ದರು. ಸಂಸ್ಥೆಯವರು ನೀಡಿದ ಸೋಲಾರ್ ದೀಪವು ವಿದ್ಯುತ್ ಕೈ ಕೊಟ್ಟಾಗ ನಮಗೆ ನೆರವಾಯಿತು. ಸ್ಮಾರ್ಟ್ ಕ್ಲಾಸ್‍ಗಳಿಂದ ಹೆಚ್ಚು ವಿಷಯ ತಿಳಿದುಕೊಂಡೆ’ ಎಂದು ಹೇಳಿದಳು. 

‘ಕಾಕೋಳು ಗ್ರಾಮ ಸೀಲ್‌ಡೌನ್‌ ಆಗಿದ್ದಾಗ ನನಗೂ ಚಿಂತೆಯಾಗಿತ್ತು. ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎಂಬ ಆತಂಕವಿತ್ತು. ಸ್ವಲ್ಪ ದಿನ ಓದಲಿಲ್ಲ. ಇಲ್ಲದಿದ್ದರೆ, ಇನ್ನೂ ಹೆಚ್ಚು ಅಂಕಗಳಿಸಬಹುದಿತ್ತು’ ಎಂದು ಹೇಳಿದಳು. 

‘ಮಗಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂಬ ಆಸೆ ಇದೆ. ಆದರೆ, ಹಣಕಾಸಿನ ತೊಂದರೆ ಇದೆ. ನೆರವು ನೀಡಿದರೆ ಅನುಕೂಲವಾಗುತ್ತದೆ’ ಎಂದು ವಿದ್ಯಾರ್ಥಿನಿ ತಾಯಿ ಶಾರದಮ್ಮ ಮನವಿ ಮಾಡಿಕೊಂಡರು. 

ನೆರವು ನೀಡಲು ಬಯಸುವವರು, ಮುಖ್ಯಶಿಕ್ಷಕರ ದೂರವಾಣಿ ಸಂಖ್ಯೆ– 99451–47820 ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು