ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸುಂಕ ಇಳಿಕೆ: ಪರಿಸ್ಥಿತಿ ಆಧರಿಸಿ ನಿರ್ಧಾರ– ಸಿಎಂ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
Last Updated 10 ಅಕ್ಟೋಬರ್ 2021, 19:38 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಹಣಕಾಸು ಪರಿಸ್ಥಿತಿ ಆಧರಿಸಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಇಳಿಕೆ ಕುರಿತು ತೀರ್ಮಾನಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ‘ರಾಜ್ಯದಲ್ಲಿ ಡೀಸೆಲ್‌ ದರ ಪ್ರತಿ ಲೀಟರ್‌ಗೆ ₹ 100 ತಲುಪಿರುವುದರಿಂದ ರಾಜ್ಯ ಸರ್ಕಾರ ತನ್ನ ಪಾಲಿನ ಅಬಕಾರಿ ಸುಂಕ ಕಡಿಮೆ ಮಾಡಲಿದೆಯೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗಲೇ ಏನನ್ನೂ ಹೇಳಲಾಗದು. ಹಣಕಾಸು ಪರಿಸ್ಥಿತಿ ಹಾಗೂ ವರಮಾನ ಸಂಗ್ರಹದ ಕುರಿತು ಪರಿಶೀಲಿಸಿದ ಬಳಿಕ ನಿರ್ಧಾರಕ್ಕೆ ಬರಲಾಗುವುದು’ ಎಂದರು.

ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿನ ಕಲ್ಲಿದ್ದಲು ಕೊರತೆ ನಿವಾರಣೆಗೆ ಪ‍್ರಯತ್ನ ನಡೆದಿದೆ. ರಾಜ್ಯಕ್ಕೆ ಹಂಚಿಕೆಯಾಗಿರುವ ಮಹಾರಾಷ್ಟ್ರದ ಚಂದ್ರಾಪುರ ಮತ್ತು ಒಡಿಶಾದ ಮಹಾನಂದಿ ಗಣಿಗಳಿಂದ ಕಲ್ಲಿದ್ದಲು ತರಲು ಪ್ರಯತ್ನಿಸಲಾಗುತ್ತಿದೆ. ಚಂದ್ರಾಪುರ ಗಣಿಯಲ್ಲಿ ಕಲ್ಲಿದ್ದಲು ತೆಗೆಯುವ ಮುನ್ನ ಮಹಾರಾಷ್ಟ್ರ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಿದೆ. ಈ ಸಂಬಂಧ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್‌ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಮಹಾನಂದಿ ಗಣಿಯಲ್ಲಿ ಕಲ್ಲಿದ್ದಲು ತೆಗೆಯಲು ಈಗಾಗಲೇ ಎಲ್ಲ ಅನುಮತಿಗಳನ್ನೂ ಪಡೆಯಲಾಗಿದೆ. ಹೊಸದಾಗಿ ಅನುಮತಿ ಅಗತ್ಯವಿಲ್ಲ. ಚಂದ್ರಾಪುರ ಗಣಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಂದ ನಿರಾಕ್ಷೇಪಣಾ ಪತ್ರ ದೊರೆತ ತಕ್ಷಣ ಕೆಲಸ ಆರಂಭಿಸಲಾಗುವುದು ಎಂದರು.

ಮಹಾರಾಷ್ಟ್ರದಿಂದ ಕಲ್ಲಿದ್ದಲು ತಂದರೆ ವೆಚ್ಚ ಕಡಿಮೆ ಆಗಲಿದೆ. ಎರಡೂ ಗಣಿಗಳಲ್ಲಿ ಉತ್ಪಾದನೆ ಆರಂಭವಾದರೆ ಪರಿಸ್ಥಿತಿ ಸುಧಾರಿಸಲಿದೆ. ತಕ್ಷಣದಲ್ಲಿ ಪೂರೈಕೆ ಹೆಚ್ಚಿಸುವಂತೆ ಮನವಿ ಮಾಡಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಅಧಿಕಾರಿಗಳಿಗೆ ಪೂರಕವಾಗಿ ಸೂಚನೆ ನೀಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ದಸರಾ ಬಳಿಕ ನಿರ್ಧಾರ: ಪ್ರಾಥಮಿಕ ಶಾಲೆಗಳ ತರಗತಿ ಆರಂಭದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ದಸರಾ ಬಳಿಕ ತಜ್ಞರ ಸಮಿತಿ ಸಭೆ ಸೇರಲಿದೆ. ಸಮಿತಿಯ ಶಿಫಾರಸು ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT