ಶುಕ್ರವಾರ, ಜೂನ್ 18, 2021
28 °C
ಆನ್‌ಲೈನ್‌ನಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ವಂಚನೆ

ಬೆಂಗಳೂರು ಗಲಭೆ | ಫೋಟೊ ಲೈಕ್‌ನಿಂದ ಸಿಕ್ಕಿಬಿದ್ದ ಆರೋಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಫೇಸ್‌ಬುಕ್ ಹಾಗೂ ಡೇಟಿಂಗ್ ಜಾಲತಾಣಗಳಲ್ಲಿ ಯುವತಿಯರನ್ನು ‍ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿ ವಂಚನೆ ಮಾಡುತ್ತಿದ್ದ ಆರೋಪದಡಿ ಸುಹಾಸ್ ಹರಿಪ್ರಸಾದ್ (34) ಎಂಬಾತನನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಉತ್ತರಹಳ್ಳಿ ಗೌಡನಪಾಳ್ಯದ ಅಂಕಪ್ಪ ಲೇಔಟ್‌ ನಿವಾಸಿ ಸುಹಾಸ್ ವಿರುದ್ಧ ನೊಂದ ಯುವತಿ ದೂರು ನೀಡಿದ್ದರು. ಅದರನ್ವಯ ಆರೋಪಿಯನ್ನು ಬಂಧಿಸಲಾಗಿದೆ. ಆತ ಮತ್ತಷ್ಟು ಯುವತಿಯರಿಗೆ ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಫೇಸ್‌ಬುಕ್ ಹಾಗೂ ಡೇಟಿಂಗ್ ಆ್ಯಪ್‌ನಲ್ಲಿ ಖಾತೆ ತೆರೆದಿದ್ದ ಆರೋಪಿ, ತಾನೊಬ್ಬ ಆಟೋಮೊಬೈಲ್ ಉದ್ಯಮಿ ಎಂದು ಹೇಳಿಕೊಂಡು ಪರಿಚಯ ಮಾಡಿಕೊಳ್ಳುತ್ತಿದ್ದ. ಕೆಲ ತಿಂಗಳ ಹಿಂದೆ ದೂರುದಾರ ಯುವತಿಯನ್ನು ಪರಿಚಯಿಸಿಕೊಂಡು ಮೊಬೈಲ್ ನಂಬರ್ ಪಡೆದು ಚಾಟಿಂಗ್ ಮಾಡಲಾರಂಭಿಸಿದ್ದ. ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಪ್ರೀತಿಸಿ ಮದುವೆಯಾಗುವುದಾಗಿ ಹೇಳಿದ್ದ ಆರೋಪಿ, ಕಾರು ಕೊಳ್ಳಬೇಕೆಂದು ಹೇಳಿ ಯುವತಿಯಿಂದ ₹ 12 ಲಕ್ಷ ಪಡದಿದ್ದ’ ಎಂದರು.

ಲೈಕ್‌ನಿಂದ ಸಿಕ್ಕಿಬಿದ್ದ; ‘ಇತ್ತೀಚೆಗೆ ಆರೋಪಿ ವರ್ತನೆಯಿಂದ ಅನುಮಾನಗೊಂಡಿದ್ದ ಯುವತಿ, ಆತನ ಫೇಸ್‌ಬುಕ್‌ ಖಾತೆಯಲ್ಲಿದ್ದ ಫೋಟೊಗಳನ್ನು ಪರಿಶೀಲಿಸಿದ್ದರು. ಆತನ ಎಲ್ಲ ಫೋಟೊಗಳಿಗೆ ಯುವತಿಯೊಬ್ಬರು ಲೈಕ್‌ ಮಾಡಿದ್ದು ಕಂಡಿತ್ತು. ಆ ಯುವತಿಯನ್ನು ಸಂಪರ್ಕಿಸಿದ್ದ ದೂರುದಾರ ಯುವತಿ, ಸುಹಾಸ್ ಬಗ್ಗೆ ವಿಚಾರಿಸಿದ್ದರು. ಯುವತಿಗೂ ಆರೋಪಿ ವಂಚಿಸಿದ್ದು ಗೊತ್ತಾಗಿತ್ತು. ನಂತರ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಯುವತಿಯರ ಖಾಸಗಿ ಫೋಟೊಗಳನ್ನೂ ಆರೋಪಿ ತೆಗೆದಿಟ್ಟುಕೊಳ್ಳುತ್ತಿದ್ದ. ಪಡೆದ ಹಣವನ್ನು ವಾಪಸು ಕೇಳಿದಾಗ ಫೋಟೊವನ್ನೇ ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಹೇಳಿ ಬ್ಲ್ಯಾಕ್‌ಮೇಲ್ ಸಹ ಮಾಡುತ್ತಿದ್ದ’ ಎಂದೂ ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು