ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಇದ್ದಲ್ಲಿಯೇ ಸೌಲಭ್ಯ: ಕಂದಾಯ ಸಚಿವ ಆರ್. ಅಶೋಕ ಭರವಸೆ

ಕಂದಾಯ ಸಚಿವ ಆರ್. ಅಶೋಕ ಭರವಸೆ l ಹಿರಿಯನಾಗರಿಕರು, ಅಂಗವಿಕಲರಿಗೆ ಪ್ರಶಸ್ತಿ ಪ್ರದಾನ
Last Updated 11 ಫೆಬ್ರುವರಿ 2021, 16:13 IST
ಅಕ್ಷರ ಗಾತ್ರ

ಬೆಂಗಳೂರು: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಯೋಜನೆಯಡಿ ಅಂಗವಿಕಲರನ್ನೂ ಸೇರ್ಪಡೆ ಮಾಡಿ, ಅವರಿಗೆ ಬೇಕಾದ ದ್ವಿಚಕ್ರ ವಾಹನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸ್ಥಳದಲ್ಲೇ ಒದಗಿಸಲಾಗುವುದು. ಇದರಿಂದ ಅವರು ಕಚೇರಿಗಳಿಗೆ ಅಲೆದಾಟ ನಡೆಸುವುದು ಇನ್ನುಮುಂದೆ ತಪ್ಪಲಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ನಗರದಲ್ಲಿ ಗುರುವಾರ ಹಮ್ಮಿಕೊಂಡ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು.

‘ಇದೇ ತಿಂಗಳ ಮೂರನೇ ಶನಿವಾರದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಯೋಜನೆಗೆ ಚಾಲನೆ ಸಿಗಲಿದೆ. ವೃದ್ಧರು, ತುಳಿತಕ್ಕೆ ಒಳಗಾದವರು, ಸೌಲಭ್ಯ ವಂಚಿತರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ಜಿಲ್ಲಾಧಿಕಾರಿ ಒಳಗೊಂಡಂತೆ ವಿವಿಧ ಅಧಿಕಾರಿಗಳು ಪ್ರತಿ ತಿಂಗಳು ವಾರದಲ್ಲಿ ಒಂದು ದಿನ ಗ್ರಾಮವಾಸ್ತವ್ಯ ಹೂಡಿ, ಅಲ್ಲಿನ ಜನರ ಅಹವಾಲು ಸ್ವೀಕರಿಸುವ ಜತೆಗೆ ಸಮಸ್ಯೆಗಳನ್ನು ಇತ್ಯರ್ಥಪಡಿಸುತ್ತಾರೆ’ ಎಂದರು.

ವೃದ್ಧಾಶ್ರಮ ಪರಿಹಾರವಲ್ಲ

ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮಾತನಾಡಿ, ‘ 2007ರಲ್ಲಿ ಸರ್ಕಾರವು ಹಿರಿಯರ ರಕ್ಷಣೆಗಾಗಿ ಪ್ರತ್ಯೇಕ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ, ಅದು ಸರಿಯಾಗಿ ಜಾರಿಗೆ ಬಂದಿಲ್ಲ. ವೃದ್ಧಾಶ್ರಮ ಸಂಸ್ಕೃತಿಯನ್ನು ಹೋಗಲಾಡಿಸುವ ಉದ್ದೇಶದಿಂದಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ’ ಎಂದರು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಶಶಿಕಲಾ ಜೊಲ್ಲೆ, ‘ಕೈ–ಕಾಲುಗಳನ್ನು ಕಳೆದುಕೊಂಡವರು ಕೂಡ ಛಲ ಬಿಡದೆಯೇ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಮುಂಬರುವ ಬಜೆಟ್‌ನಲ್ಲಿ ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಇನ್ನಷ್ಟು ಸೌಲಭ್ಯ ಒದಗಿಸಲು ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

15 ಸಾಧಕರಿಗೆ ಪ್ರಶಸ್ತಿ

ಅಂಗವಿಕಲರ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಮನಗರದ ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತದ ಅಂಗವಿಕಲರ ಸಂಘ ಹಾಗೂ ಬೆಳಗಾವಿಯ ಜೀಜಾಮಾತಾ ವಿಶ್ವಚೇತನಾಭಿವೃದ್ಧಿ ಸಂಸ್ಥೆಗೆ ವಿಶೇಷ ಸಾಧನೆಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯು ₹ 50 ಸಾವಿರ ಬಹುಮಾನ ಒಳಗೊಂಡಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬೆಂಗಳೂರಿನ ರಾಘವೇಂದ್ರ ಪಿ., ಸಿ. ರಾಧಾಕೃಷ್ಣ ಶಾಸ್ತ್ರಿ, ಡಾ. ಕಿರಣ್ ಎಸ್. ಮೂರ್ತಿ, ಹಾವೇರಿಯ ಎಂ. ವಿಜಯಲಕ್ಷ್ಮಿ, ಚಾಮರಾಜನಗರದ ರಾಮಣ್ಣ, ದಕ್ಷಿಣ ಕನ್ನಡದ ಡಾ. ಅಶೋಕ್ ಶೆಟ್ಟಿ, ಉಡುಪಿಯ ಮಂಜುನಾಥ್ ಹೆಬ್ಬಾರ್, ಬೆಳಗಾವಿಯ ಸಂಜೀವ್ ಗುಂಡಪ್ಪ ಹಮ್ಮಣ್ಣವರ, ಮನಿಷಾ, ಬಸವರಾಜ್ ಶಂಕರ ಉಮ್ರಾಣಿ, ಬಾಗಲಕೋಟೆಯ ರಹಮಾನ ದಾದೇಸಾಬ, ಬೀದರ್‌ನ ವಿದ್ಯಾವತಿ ಎಸ್. ಹಿರೇಮಠ, ಕೊಪ್ಪಳದ ಬಸವನಗೌಡ ವೀರನಗೌಡ ಭನಪ್ಪಗೌಡ್ರ, ಯಾದಗಿರಿಯ ಸಂಗನಗೌಡ ಬ. ಧನರೆಡ್ಡಿ ಹಾಗೂ ರಾಯಚೂರಿನ ಅಮರೇಶ್ ಅವರಿಗೆ ವಿಶೇಷ ಸಾಧಕರು ಪ್ರಶಸ್ತಿ ನೀಡಲಾಯಿತು. ಇದು ತಲಾ ₹ 15 ಸಾವಿರ ಬಹುಮಾನ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT