ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಮೌಲ್ಯಮಾಪನದ ನಂತರ ದ್ವಿತೀಯ ಪಿಯುಸಿಯ ಹಲವು ವಿದ್ಯಾರ್ಥಿಗಳು ಅನುತ್ತೀರ್ಣ!

ಮೊದಲಿನ ಅಂಕಗಳನ್ನೇ ನೀಡಲು ಅಥವಾ ಪೂರಕ ಪರೀಕ್ಷೆಗೆ ಅವಕಾಶ ನೀಡಲು ಒತ್ತಾಯ
Last Updated 31 ಆಗಸ್ಟ್ 2020, 15:07 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಮಾರ್ಚ್‌ನಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪೈಕಿ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ ಹಲವರು ಅನುತ್ತೀರ್ಣರಾಗಿದ್ದಾರೆ. ಹೆಚ್ಚು ಅಂಕಗಳು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅನೇಕ ವಿದ್ಯಾರ್ಥಿಗಳು ಮೊದಲು ಪಡೆದಿದ್ದ ಅಂಕಗಳಿಗಿಂತ ಕಡಿಮೆ ಅಂಕಗಳನ್ನು ಪಡೆದಿದ್ದಾರೆ.

‘ನನ್ನ ಮಗನಿಗೆ ಇಂಗ್ಲಿಷ್‌ ಪತ್ರಿಕೆಯಲ್ಲಿ 35 ಅಂಕಗಳು ಬಂದಿದ್ದವು. ಉತ್ತೀರ್ಣನಾಗಿದ್ದ. ಅಂಕಗಳು ಕಡಿಮೆ ಬಂದಿದ್ದರಿಂದ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದೆವು. ಈಗ ಫಲಿತಾಂಶ ಪ್ರಕಟಿಸಲಾಗಿದ್ದು, 28 ಅಂಕಗಳನ್ನು ಮಾತ್ರ ನೀಡಿದ್ದಾರೆ. ಈಗ ಅನುತ್ತೀರ್ಣನಾಗಿದ್ದಾನೆ’ ಎಂದು ವಿದ್ಯಾರ್ಥಿಯ ತಾಯಿ ಸ್ನೇಹಾ ಶರ್ಮಾ ‘ಪ್ರಜಾವಾಣಿ’ಗೆ ಹೇಳಿದರು.

‘ಉತ್ತೀರ್ಣನಾಗಿದ್ದರಿಂದ ಪೂರಕ ಪರೀಕ್ಷೆ ತೆಗೆದುಕೊಳ್ಳುವ ಪ್ರಮೇಯವೇ ಇರಲಿಲ್ಲ. ಈಗ ಮರುಮೌಲ್ಯಮಾಪನದ ನಂತರ ಅನುತ್ತೀರ್ಣಗೊಂಡಿದ್ದಾನೆ. ಪೂರಕ ಪರೀಕ್ಷೆಗೆ ಶುಲ್ಕ ತುಂಬುವ ದಿನಾಂಕವೂ ಮುಕ್ತಾಯಗೊಂಡಿದ್ದು, ಸೆ.8ರಿಂದ ಪರೀಕ್ಷೆ ಪ್ರಾರಂಭವಾಗಲಿದೆ’ ಎಂದು ಅವರು ಹೇಳಿದರು.

‘ಒಂದೆರಡು ದಿನಗಳಲ್ಲಿ ಪ್ರವೇಶ ಪತ್ರಗಳನ್ನು ವಿತರಿಸುತ್ತಾರೆ. ಮಗ ಪದವಿ ಪ್ರವೇಶದಿಂದ ವಂಚಿತನಾಗಬೇಕಾಗುತ್ತದೆ. ಪೂರಕ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕು, ಇಲ್ಲದಿದ್ದರೆ ಮೊದಲು ನೀಡಿದ್ದ ಅಂಕಗಳನ್ನೇ ಕೊಟ್ಟು ಉತ್ತೀರ್ಣ ಮಾಡಬೇಕು. ಇಂತಹ ಅನೇಕ ವಿದ್ಯಾರ್ಥಿಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಇಲಾಖೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ಯಾವುದೇ ವಿಷಯದಲ್ಲಿ ಉತ್ತೀರ್ಣರಾಗಲು ನಿಗದಿ ಪಡಿಸಿರುವ ಅಂಕಗಳಿಗಿಂತ ಐದಾರು ಅಂಕಗಳು ಕಡಿಮೆ ಇದ್ದರೆ, ಎರಡು–ಮೂರು ಬಾರಿ ಅಂತಹ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿರುತ್ತೇವೆ. ಕೊನೆಗೆ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಿಗದಿತ ಅಂಕಗಳನ್ನು ನೀಡಿ ಉತ್ತೀರ್ಣ ಮಾಡಿರುತ್ತೇವೆ. ಆದರೂ ವಿದ್ಯಾರ್ಥಿಗಳು ಹೀಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಾಗ, ಅವರು ಮೊದಲು ಪಡೆದಿದ್ದ ಅಂಕಗಳನ್ನೇ ನೀಡುತ್ತಾರೆ. ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮೌಲ್ಯಮಾಪಕರೊಬ್ಬರು ಹೇಳಿದರು.

ಅನುತ್ತೀರ್ಣರಾದ ವಿದ್ಯಾರ್ಥಿಗಳ ಕುರಿತು ಪ್ರತಿಕ್ರಿಯೆ ಪಡೆಯಲು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಕರೆ ಮಾಡಲಾಯಿತು. ಅವರು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT