ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.20ರಿಂದ ರಾಜ್ಯದಲ್ಲಿ ರೈತ ಸಮಾವೇಶ: ಚುಕ್ಕಿ ನಂಜುಂಡಸ್ವಾಮಿ

Last Updated 19 ಫೆಬ್ರುವರಿ 2021, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ದೆಹಲಿಯಲ್ಲಿನ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಹಾಗೂ ರಾಜ್ಯದಲ್ಲಿ ರೈತ ಚಳವಳಿ ಸಜ್ಜುಗೊಳಿಸಲುರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಮಾರ್ಚ್‌ 20ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮಾ.20ರಂದು ಶಿವಮೊಗ್ಗದಲ್ಲಿ ಮೊದಲ ಸಮಾವೇಶ ನಡೆಯಲಿದೆ. 21ರಂದು ಹಾವೇರಿ, 22ರಂದು ಬೆಳಗಾವಿಯಲ್ಲಿ ನಡೆಯಲಿದೆ. ಸಮಾವೇಶಗಳಲ್ಲಿ ಭಾರತೀಯ ಕಿಸಾನ್ ಯೂನಿಯನ್‌ನ ವಕ್ತಾರ ರಾಕೇಶ್ ಟಿಕಾಯತ್ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಯುದ್ಧವೀರ್‌ ಸಿಂಗ್ ಭಾಗಿಯಾಗಲಿದ್ದಾರೆ’ ಎಂದರು.

‘ರಾಜ್ಯದ ವಿವಿಧ ಜಿಲ್ಲೆಗಳಿಗೂ ಸಮಾವೇಶಗಳನ್ನು ವಿಸ್ತರಿಸಲು ಯೋಜನೆ ಹಾಕಿಕೊಂಡಿದ್ದೇವೆ. ರೈತ ಚಳವಳಿ ಕಟ್ಟಲು ಇದು ಸುಸಂದರ್ಭ. ಎಲ್ಲರನ್ನೂ ಒಗ್ಗೂಡಿಸುವ ಸಮಯ ಬಂದಿದೆ. ಎಲ್ಲ ಅಡೆತಡೆಗಳನ್ನು ಮೀರಿ ರೈತರು ಹಾಗೂ ರೈತ ಮಹಿಳೆಯರುದೆಹಲಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಅವರಿಗೆ ರೈತರ ಪ್ರತೀಕವಾದ ಹಸಿರು ಶಾಲುಗಳನ್ನು ರಾಜ್ಯದಿಂದ ರವಾನಿಸಲಾಗುವುದು. ಈ ಮೂಲಕ ರೈತರು ಒಬ್ಬಂಟಿಯಲ್ಲ ಎಂಬ ಸಂದೇಶದೊಂದಿಗೆ ಅವರ ಪರ ನಿಲ್ಲಲಿದ್ದೇವೆ’ ಎಂದೂ ಹೇಳಿದರು.

ದಿಶಾ ರವಿ ಸುಸಂಸ್ಕೃತ ಕುಟುಂಬದವರು: ‘ಪರಿಸರ ಕಾರ್ಯಕರ್ತೆ ದಿಶಾ ರವಿ ಸುಸಂಸ್ಕೃತ ಮನೆತನಕ್ಕೆ ಸೇರಿದವರು. ಆದರೆ, ಅವರನ್ನು ಈ ವ್ಯವಸ್ಥೆ ನಡೆಸಿಕೊಂಡಿರುವ ರೀತಿ ಸರಿಯಲ್ಲ. ದೆಹಲಿ ಪೊಲೀಸರು ಯಾವುದೇ ಸೂಚನೆ ನೀಡದೆ, ಮನೆಗೆ ನುಗ್ಗಿ ದಾಖಲೆಗಳನ್ನು ಕೇಳಿದ್ದಾರೆ. ಒತ್ತಾಯದಿಂದ ದಿಶಾರ ಸಹಿ ಪಡೆದಿದ್ದಾರೆ. ಆದರೆ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸರು ಕಾನೂನು ಪಾಲಿಸಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ’ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಬೇಸರ ವ್ಯಕ್ತಪಡಿಸಿದರು.

‘ದಿಶಾ ಬಗ್ಗೆ ತಿಳಿದುಕೊಳ್ಳದೆ, ಆಕೆಯ ಹಾಗೂ ಕುಟುಂಬದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ರಾಜ್ಯದ ಹೆಮ್ಮೆಯ ಪುತ್ರಿಯನ್ನು ಈ ರೀತಿ ನಡೆಸಿಕೊಂಡಿರುವುದು ಖಂಡನೀಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT