ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ತಂದೆಯಿಂದಲೇ ಪುತ್ರನ ಕೊಲೆಗೆ ಸುಪಾರಿ

Last Updated 6 ಡಿಸೆಂಬರ್ 2022, 7:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಗರದ ಕೇಶ್ವಾಪುರದ ಅರಿಹಂತ ನಗರದ ಉದ್ಯಮಿ ಅಖಿಲ್ ಮಹಾಜನ ಶೇಟ್ (26) ನಾಪತ್ತೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ತಂದೆಯೇ ಸುಪಾರಿ ಕೊಟ್ಟು ಪುತ್ರನನ್ನು ಅವರನ್ನು ಕೊಲೆ ಮಾಡಿಸಿರುವುದು ಗೊತ್ತಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಕೇಶ್ವಾಪುರ ಠಾಣೆ ಪೊಲೀಸರು ಮತ ಅಖಿಲ್ ಅವರ ತಂದೆ ಹಾಗೂ ಚಿನ್ನಾಭರಣ ಅಂಗಡಿ ಮಾಲೀಕ ಭರತ ಮಹಾಜನ ಶೇಟ್, ವೀರಾಪುರ ಓಣಿಯ ಮಹಾದೇವ ನಾಲವಾಡ, ನೂರಾನಿ ಪ್ಲಾಟ್ ನ ಸಲೀಂ ಸಲಾವುದ್ದೀನ್ ಮೌಲ್ವಿ, ರೆಹಮಾನ್ ವಿರುದ್ಧ ಕೊಲೆ ಆರೋಪದಡಿ‌ ಪ್ರಕರಣ ದಾಖಲಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ.

ತಂದೆಗೆ ಕೊಲೆ ಬೆದರಿಕೆ ಹಾಕಿದ್ದ:

ದುಶ್ಚಟಗಳ ದಾಸನಾಗಿದ್ದ ಅಖಿಲ್, ನಿತ್ಯ ಮದ್ಯ ಕುಡಿದುಕೊಂಡು ತಡರಾತ್ರಿ ಮನೆಗೆ ಬರುತ್ತಿದ್ದ. ತಂದೆ ಮತ್ತು ತಾಯಿ ಜೊತೆ ಜಗಳವಾಡಿ ಹಲ್ಲೆ ನಡೆಸುತ್ತಿದ್ದ. ಕೊಲೆ ಮಾಡುವುದಾಗಿ ತಂದೆಯನ್ನು ಬೆದರಿಸಿದ್ದ. ಇದರಿಂದಾಗಿ, ಪುತ್ರನ ಕೊಲೆಗೆ ಭರತ ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಎರಡನೇ ಆರೋಪಿ‌ ಮಹಾದೇವ ನಾಲವಾಡ ಮೂಲಕ, ಸಲೀಂ ಪರಿಚಯ ಮಾಡಿಕೊಂಡು ₹10 ಲಕ್ಷಕ್ಕೆ ಕೊಲೆ ಮಾಡುವಂತೆ ಸುಪಾರಿ‌ ಕೊಟ್ಟಿದ್ದ. ಹಂತಕರು‌ ರೂಪಿಸಿದ ಸಂಚಿನಂತೆ, ಡಿ. 1ರಂದು ಭರತ ಅವರು ಕೆಲಸವಿದೆ ಎಂದು ಹೇಳಿ ಪುತ್ರನನ್ನು ಕಾರಿನಲ್ಲಿ ಕಲಘಟಗಿಯ ದೇವರ ಗುಡಿಹಾಳಕ್ಕೆ ಕರೆದೊಯ್ದಿದ್ದರು‌ ಎಂದು ಪೊಲೀಸರು ಹೇಳಿದ್ದಾರೆ.

ಅಲ್ಲಿ ಕಾದು ಕುಳಿತಿದ್ದ ಹಂತಕರು, ಅಖಿಲ್ ಅವರನ್ನು ಕೊಲೆ ಮಾಡಿ, ಶವವನ್ನು ಬೇರೆ ಕಡೆಗೆ ಎಸೆಯಲು ತೆಗೆದುಕೊಂಡು ಹೋಗಿದ್ದರು.‌ ಮ‌ನೆಗೆ ಒಬ್ಬರೇ ವಾಪಸ್ಸಾಗಿದ್ದ ಭರತ ಅವರು, ಮಗ ಸ್ನೇಹಿತರ ಭೇಟಿ ಮಾಡಿಕೊಂಡು ಬರುವುದಾಗಿ ಅಲ್ಲೇ ಉಳಿದಿದ್ದಾನೆ ಎಂದು ಮನೆಯವರಿಗೆ ಸುಳ್ಳು ಹೇಳಿದ್ದರು. ಮೂರು ದಿನಗಳ ಬಳಿಕ ಮಗ ಕಾಣೆಯಾಗಿದ್ದಾನೆ ಎಂದು ಸಹೋದರ ಮನೋಜ‌ ಮಹಾಜನ ಶೇಟ್ ಅವರಿಂದ ಠಾಣೆಗೆ ದೂರು ಕೊಡಿಸಿದ್ದರು ಎಂದು ತಿಳಿಸಿದ್ದಾರೆ.

ಡಿ. 3ರಂದು ರಾತ್ರಿ 7.45ರ ಸುಮಾರಿಗೆ ನನಗೆ ವಿಡಿಯೊ ಕರೆ ಮಾಡಿ 6 ಸೆಕೆಂಡ್ ಹಿಂದಿಯಲ್ಲಿ ಮಾತನಾಡಿದ್ದ ಅಖಿಲ, ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ. ಕರೆ ಸಂದರ್ಭದಲ್ಲಿ ಆತ ಎತ್ತರವಾದ ಜಾಗದಿಂದ ಜಿಗಿಯುವಂತೆ ಕಂಡುಬಂದಿತ್ತು. ಕೂಡಲೇ ಆತನ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ, ಸ್ವಿಚ್ ಆಫ್ ಆಗಿತ್ತು. ಅಂದಿನಿಂದ ಇದುವರೆಗೆ ಮೊಬೈಲ್ ಸ್ವಿಚ್ ಆನ್ ಆಗಿಲ್ಲ ಎಂದು ದೂರಿನಲ್ಲಿ ದಾಖಲಿಸಿ, ಮಗನ ಕೊಲೆಗೆ ಆತ್ಮಹತ್ಯೆ ಬಣ್ಣ ಕಟ್ಟಲು ಯತ್ನಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ‌

ಪತ್ತೆಯಾಗದ ಶವ:

ಪ್ರಕರಣ ದಾಖಲಾದ ಬಳಿಕ, ತಂದೆ ಮೇಲೆ ಅನುಮಾನಗೊಂಡು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದನ್ನು ಬಾಯ್ಬಿಟ್ಟಿದ್ದರು. ಅವರು ನೀಡಿದ ಮಾಹಿತಿ ಮೇರೆಗೆ, ಮೂರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಅವರ ಹೇಳಿಕೆ ಆಧರಿಸಿ ಪೊಲೀಸರ ಐದು ತಂಡಗಳು ಶವಕ್ಕಾಗಿ ಕಲಘಟಗಿ ಸೇರಿದಂತೆ ವಿವಿಧೆಡೆ ಹುಡುಕಾಡಿದ್ದರು. ಆದರೂ, ಶವ ಸಿಕ್ಕಿರಲಿಲ್ಲ.

ಶವದ ಹುಡುಕಾಟದ ಜೊತೆಗೆ, ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇನ್ನೂ ಕೆಲವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಅವರೇ ಶವವನ್ನು ಸಾಗಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT