ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಝಿಲ್‌ ಹತ್ಯೆ: ಪೂರ್ವ ದ್ವೇಷ ಇರಲಿಲ್ಲ; ಪೊಲೀಸ್‌ ಕಮಿಷನರ್‌

ಫಾಝಿಲ್‌ ಹತ್ಯೆ: ಮತ್ತೆ ಆರು ಆರೋಪಿಗಳ ಬಂಧನ
Last Updated 2 ಆಗಸ್ಟ್ 2022, 21:00 IST
ಅಕ್ಷರ ಗಾತ್ರ

ಮಂಗಳೂರು: ಸುರತ್ಕಲ್‌ನಲ್ಲಿ ಇತ್ತೀಚೆಗೆ ನಡೆದ ಮಹಮ್ಮದ್‌ ಫಾಝಿಲ್‌ (23) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಆರೋಪಿಗಳಿಗೂಫಾಝಿಲ್‌ಗೂ ಪೂರ್ವದ್ವೇಷಇರಲಿಲ್ಲ. ನಿರ್ದಿಷ್ಟ ಸಮುದಾಯದ ವ್ಯಕ್ತಿಯನ್ನೇ ಗುರಿಯಾ
ಗಿಸಿಕೊಂಡು ಈ ಹತ್ಯೆ ನಡೆಸಲಾಗಿದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಎನ್‌. ಶಶಿಕುಮಾರ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಜಪೆ ಕೊಂಚಾರು ನಿವಾಸಿ ಸುಹಾಸ್‌ ಶೆಟ್ಟಿ (29), ಕುಳಾಯಿ ಕಾವಿನಕಲ್ಲು ನಿವಾಸಿ ಮೋಹನ್‌ ಅಲಿಯಾಸ್‌ ಮೋಹನ್ ಸಿಂಗ್ (26), ಕುಳಾಯಿ ವಿದ್ಯಾನಗರ ನಿವಾಸಿ ಗಿರಿಧರ (23), ಕಾಟಿಪಳ್ಳದ ಅಭಿಷೇಕ್ (21), ಶ್ರೀನಿವಾಸ (23) ಮತ್ತು ದೀಕ್ಷಿತ್‌ (21) ಬಂಧಿತರು.

ಕೃತ್ಯಕ್ಕೆ ಬಳಸಿದ್ದ ಕಾರು ಮಾಲೀಕ ಅಜಿತ್‌ ಕ್ರಾಸ್ತನನ್ನು ಆಗಲೇ ಬಂಧಿಸಲಾಗಿದೆ. ಒಟ್ಟು ಏಳು ಮಂದಿಯ ಬಂಧನವಾಗಿದೆ.

‘ಆರೋಪಿಗಳು ಪರಸ್ಪರ ಪರಿಚಿತ ರಲ್ಲ. ಸಮಾನ ಸ್ನೇಹಿತರ ಮೂಲಕ ಸೇರಿಕೊಂಡು ಕೃತ್ಯ ಎಸಗಿದ್ದಾರೆ. ಪ್ರವೀಣ್ ನೆಟ್ಟಾರು ಅವರ ಕೊಲೆ ನಡೆದ ಜುಲೈ 26ರಂದು ರಾತ್ರಿಯೇ ನಿರ್ದಿಷ್ಟ ಸಮುದಾಯದ ಒಬ್ಬನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಅದ ಕ್ಕಾಗಿ ಏಳು ಜನರ ಪಟ್ಟಿ ಮಾಡಿದ್ದರು. ಸುಲಭವಾಗಿ ಸಿಕ್ಕ ಫಾಝಿಲ್‌ನನ್ನು ಕೊಲೆ ಮಾಡಿದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಎರಡು ದಿನ ಮೊದಲೇ ಸಂಚು: ‘ಸುಹಾಸ್‌ ಶೆಟ್ಟಿ ಜುಲೈ 26ರಂದು ರಾತ್ರಿ ಅಭಿಷೇಕ್‌ಗೆ ಕರೆ ಮಾಡಿ ಒಂದು ದಿನದಲ್ಲಿ ನಿರ್ದಿಷ್ಟ ಸಮುದಾಯದ ಯಾರನ್ನಾದರೂ ಕೊಲೆ ಮಾಡಬೇಕು ಎಂದು ಸೂಚಿಸಿದ್ದ. ಸುರತ್ಕಲ್‌ನ ಹೋಟೆಲ್‌ಗೆ ಗಿರಿಧರನನ್ನು ಕರೆಸಿ ಕೊಂಡು ಕೃತ್ಯಕ್ಕೆ ಸಂಚು ರೂಪಿಸಿದ್ದರು. ಬಳಿಕ ಆರೋಪಿ ಮೋಹನ್‌ ಕೂಡ ಸೇರಿಕೊಂಡಿದ್ದ. ಸ್ನೇಹಿತರಾದ ಅಭಿ ಷೇಕ್‌, ಶ್ರೀನಿವಾಸ್‌ ಮತ್ತು ದೀಕ್ಷಿತ್‌ ಅವರ ನೆರವು ಪಡೆಯುವುದಾಗಿ ಹಾಗೂ ಸ್ನೇಹಿತರಿಂದ ಕಾರು ಕೊಡಿಸು ವುದಾಗಿ ಭರವಸೆ ನೀಡಿದ್ದ. ಜುಲೈ 27ರಂದು ಅಭಿಷೇಕ್‌, ದೀಕ್ಷಿತ್‌, ಶ್ರೀನಿವಾಸ್‌ ಸೇರಿ ಅಜಿತ್‌ ಕ್ರಾಸ್ತನನ್ನು ಸಂಪರ್ಕಿಸಿ ಕಾರುಬಾಡಿಗೆಗೆ ಪಡೆ ದಿದ್ದರು’ ಎಂದು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ತಿಳಿಸಿದರು.

ಅಪರಾಧ ಚಟುವಟಿಕೆ ನಂಟು: ‘ಬಂಧಿತರಾಗಿರುವ ಆರೂ ಮಂದಿ ಹಿಂದೆಯೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರು. ಕೋಮು ಘರ್ಷಣೆ, ಕೊಲೆ ಯತ್ನ, ಅನ್ಯಧರ್ಮೀಯರ ಮೇಲೆ ಹಲ್ಲೆ ಮೊದಲಾದ ಪ್ರಕರಣಗಳು ದಾಖಲಾ ಗಿವೆ’ ಎಂದು ತಿಳಿಸಿದರು.

ಕಾರಿಗೆ 3 ದಿನಕ್ಕೆ ₹15 ಸಾವಿರ ಬಾಡಿಗೆ

‘ಹೆಚ್ಚು ಹಣ ಸಿಗುತ್ತದೆ ಎಂದು ಅಜಿತ್‌ ಕ್ರಾಸ್ತ ಕಾರನ್ನು ಆರೋಪಿಗಳಿಗೆ ನೀಡಿದ್ದ. ಸಾಮಾನ್ಯವಾಗಿ ದಿನಕ್ಕೆ ₹1 ಸಾವಿರದಿಂದ ₹ 2 ಸಾವಿರ ಬಾಡಿಗೆ ಪಡೆಯುತ್ತಿದ್ದ. ಆದರೆ, ಆರೋಪಿಗಳು, ‘ನಿರ್ದಿಷ್ಟ ಕೆಲಸಕ್ಕೆ ಕಾರಿನ ಅಗತ್ಯ ಇದೆ. ಆ ಕೆಲಸ ಯಶಸ್ವಿಯಾದರೆ ಮೂರು ದಿನಗಳಿಗೆ ₹15 ಸಾವಿರ ನೀಡುತ್ತೇವೆ ಎಂದು ಹೇಳಿದ್ದರು. ₹1 ಸಾವಿರ ಮುಂಗಡವನ್ನೂ ನೀಡಿದ್ದರು’ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದರು.

‘ಆರೋಪಿಗಳು ಯಾವುದೋ ಕೃತ್ಯಕ್ಕೆ ಕಾರು ಬಳ‌ಸುವ ಬಗ್ಗೆ ಅದರ ಮಾಲೀಕನಿಗೆ ಅರಿವಿತ್ತು. ಆದರೂ ಆತ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಹಾಗಾಗಿ ಆತನನ್ನೂ ಆರೋಪಿ ಎಂದು ಪರಿಗಣಿಸಬೇಕಾಗಿದೆ’ ಎಂದರು.

ನಿರ್ಬಂಧ ಮತ್ತೆರಡು ದಿನ ವಿಸ್ತರಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಸಂಜೆ 6ರಿಂದ ಬೆಳಿಗ್ಗೆ 6 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಹಾಗೂ ಅನಗತ್ಯ ವಾಹನ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಗುರುವಾರದವರೆಗೆ ವಿಸ್ತರಿಸಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT