ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ‘ಕಿಟೆಲ್‌’ ಲಿಪಿ: ಡಿಜಿಟಲ್ ಮರುಸೃಷ್ಟಿ, ಇದೇ 13ರಂದು ಬಳಕೆಗೆ ಲಭ್ಯ

Last Updated 8 ನವೆಂಬರ್ 2022, 19:38 IST
ಅಕ್ಷರ ಗಾತ್ರ

ಬೆಂಗಳೂರು: ರೆವರೆಂಡ್‌ ಫರ್ಡಿನಾಂಡ್‌ ಕಿಟೆಲ್‌ ಬಳಸಿದ್ದ ಹಳೆಯ ಕನ್ನಡ ಲಿಪಿಯನ್ನು ಡಿಜಿಟಲ್‌ ರೂಪದಲ್ಲಿ ಪ್ರಶಾಂತ್‌ ಪಂಡಿತ್‌ ಮರುಸೃಷ್ಟಿಸಿದ್ದು, ಆ ಲಿಪಿ ವಿನ್ಯಾಸವು ಇದೇ 13ರಂದು ಬಳಕೆಗೆ ಲಭ್ಯವಾಗಲಿದೆ.

1860ರಿಂದ ಮುದ್ರಣ ಯಂತ್ರ ಬಳಸಿ ವಿವಿಧ ಕೃತಿಗಳಲ್ಲಿ ಕಿಟೆಲ್‌ ಬಳಸಿದ್ದ ಕನ್ನಡದ ಹಳೆಯ ಲಿಪಿ ಪ್ರಶಾಂತ್ ಅವರಿಗೆ ಆಕರ್ಷಕವಾಗಿ ಕಂಡಿತು. ಅದನ್ನು ಹೊಸಕಾಲದಲ್ಲಿಯೂ ಮುಕ್ತ ಬಳಕೆಗೆ ಒದಗಿಸಬೇಕೆಂಬ ಉಮೇದಿನಿಂದ ಎರಡು ವರ್ಷಗಳ ಸುದೀರ್ಘಾವಧಿ ಪ್ರಯತ್ನದಿಂದ ಲಿಪಿ ವಿನ್ಯಾಸ ಮಾಡಿದ್ದಾರೆ. ಒಬ್ಬರು ಎಂಜಿನಿಯರ್ ಹಾಗೂ ಮತ್ತೊಬ್ಬರು ಲಿಪಿ ವಿನ್ಯಾಸಕಾರರು ಈ ಕೆಲಸಕ್ಕೆ ನೆರವಾಗಿದ್ದಾರೆ. ಈ ಲಿಪಿ ವಿನ್ಯಾಸಕ್ಕೆ ‘ಕಿಟೆಲ್’ ಎಂದೇ ಹೆಸರಿಟ್ಟಿದ್ದಾರೆ.

‘ನೀಲಿ ಹಕ್ಕಿ’ ಎಂಬ ಚಲನಚಿತ್ರಕ್ಕೆ ಸಂಕಲನ ಮಾಡಿದ ಮೇಲೆ ಕಿಟೆಲ್ ಅವರನ್ನು ಕುರಿತು ಒಂದು ಸಾಕ್ಷ್ಯಚಿತ್ರ ತಯಾರಿಸಲು ಪ್ರಶಾಂತ್ ನಿರ್ಧರಿಸಿದರು. ಅದಕ್ಕೆ ಹಣಕಾಸಿನ ನೆರವನ್ನು ನಗರದಲ್ಲಿ ಇರುವ ಜರ್ಮನ್ ಕಾನ್ಸುಲೇಟ್ ಒದಗಿಸಬಹುದೇನೊ ಎಂದು ಅಲ್ಲಿಗೆ ಎಡತಾಕಿದರು. ಆದರೆ, ಅಲ್ಲಿ ಸಾಕ್ಷ್ಯಚಿತ್ರ ಅಥವಾ ಕಿರುಚಿತ್ರಕ್ಕೆ ಅಗತ್ಯವಿದ್ದ ಬಜೆಟ್ ದೊರೆಯಲಿಲ್ಲ. ಬದಲಿಗೆ, ಕಿಟೆಲ್ ಲಿಪಿ ವಿನ್ಯಾಸವನ್ನು ಡಿಜಿಟಲ್‌ ರೂಪದಲ್ಲಿ ದಕ್ಕಿಸಿಕೊಡುವ ಯೋಜನೆಗೆ ಬೆಂಬಲ ದೊರೆಯಿತು.

ಕೋವಿಡ್‌ ವ್ಯಾಪಕವಾಗಿದ್ದ ಕಾಲಘಟ್ಟದಲ್ಲಿನ ಸಮಯವನ್ನೇ ಬಳಸಿಕೊಂಡು, ಮಂಗಳೂರಿನ ಬಲ್ಮಠ ಇನ್‌ಸ್ಟಿಟ್ಯೂಟ್‌ ಆಫ್‌ ಪ್ರಿಂಟಿಂಗ್‌ ಟೆಕ್ನಾಲಜಿಯಲ್ಲಿ ಇದ್ದ ಹಳೆಯ ಕಾಲದ ಅಕ್ಷರ ವಿನ್ಯಾಸದ ಮೊಳೆಗಳನ್ನೆಲ್ಲ ಪ್ರಶಾಂತ್ ಗಮನಿಸಿದರು. ಅಲ್ಲಿದ್ದ ಕಿಟೆಲ್‌ ಅವರ ಹಳೆಯ ಕೃತಿಗಳನ್ನು ಪರಾಮರ್ಶಿಸಿ, ಒಂದೊಂದೇ ಲಿಪಿ ವಿನ್ಯಾಸವನ್ನು ದಾಖಲಿಸಿಕೊಂಡರು. ಅದನ್ನು ಡಿಜಿಟಲೀಕರಿಸಿ ಮರುಸೃಷ್ಟಿಸಿದ್ದಾರೆ.

‘ಲಿಪಿ ವಿನ್ಯಾಸದ ಕುರಿತು ಯಾವುದೇ ದಾಖಲೆಗಳು ಇರಲಿಲ್ಲ. ನಮ್ಮ ಆಯ್ಕೆಯ ದಾರಿ ಸರಿಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಯುಕೆಯಲ್ಲಿ ಮುದ್ರಣ ಲಿಪಿಯ ಕುರಿತೇ ಪಿಎಚ್.ಡಿ ಮಾಡಿದ್ದ ಪ್ರಿಯಾ ಅವರ ನೆರವು ಸಿಕ್ಕಿತು. ಜರ್ಮನ್ ಕಾನ್ಸುಲೇಟ್‌ನವರ ಅನುಮತಿ ಪಡೆದ ನಂತರ ಇದನ್ನು ಮುಕ್ತ ಬಳಕೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆವು’ ಎಂದು ಪ್ರಶಾಂತ್ ಪ್ರತಿಕ್ರಿಯಿಸಿದರು.

ಇದೇ 13ರಂದು ಬನಶಂಕರಿಯ ‘ಸುಚಿತ್ರ’ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಲಿಪಿ ಬಿಡುಗಡೆ ನಡೆಯಲಿದ್ದು, ಕಿಟೆಲ್ ವಂಶಸ್ಥರಾದ ಆಲ್ಮುತ್ ಮೇಯರ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಚಿ ಫೌಂಡೇಷನ್ ಈ ಕಾರ್ಯಕ್ರಮ ಆಯೋಜಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಫಾಂಟ್‌ಗಳನ್ನು ಬಿಡುಗಡೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT