ಗುರುವಾರ , ಅಕ್ಟೋಬರ್ 21, 2021
29 °C
‘ವರ್ಕ್‌ ಫ್ರಮ್ ಹೋಮ್’ನಲ್ಲಿದ್ದ ಹಲವು ನಿವಾಸಿಗಳು l ಸ್ಫೋಟದ ಸದ್ದು ಕೇಳಿ ದಿಕ್ಕಾಪಾಲಾಗಿ ಓಡಿದರು

ಬೆಂಗಳೂರು: ʼಬೆಂಕಿ ಅವಘಡದಲ್ಲಿ ಮೃತಪಟ್ಟ ಮಹಿಳೆ ಅಮೆರಿಕದಿಂದ ಸೋಮವಾರ ಬಂದಿದ್ದರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ಫೋಟದ ಸದ್ದು. ಧಗ ಧಗ ಉರಿವ ಬೆಂಕಿ. ದಾರಿಯೂ ಗೋಚರಿಸದಂತೆ ಆವರಿಸಿದ್ದ ಕಪ್ಪು ಹೊಗೆ. ಇದರ ನಡುವೆ ಪ್ರಾಣ ಉಳಿಸಿಕೊಳ್ಳಲು ಓಡಿದ ನಿವಾಸಿಗಳು. ಮಹಿಳೆ ಜೀವಂತವಾಗಿ ಬೆಂಕಿಗೆ ಆಹುತಿಯಾಗುತ್ತಿದ್ದ ದೃಶ್ಯ ನೋಡಿ ಬದುಕಿಸಲಾಗದೇ ಅಸಹಾಯಕತೆಯಿಂದ ಕಣ್ಣೀರಿಟ್ಟ ಜನ.. . 

ಬೊಮ್ಮನಹಳ್ಳಿ ಬಳಿಯ ದೇವರಚಿಕ್ಕನಹಳ್ಳಿ ಆಶ್ರಿತ್ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಕಂಡುಬಂದ ಹೃದಯವಿದ್ರಾವಕ ದೃಶ್ಯಗಳಿವು.

ಮೂರು ಅಂತಸ್ತಿನ ಅಪಾರ್ಟ್‌ ಮೆಂಟ್‌ ಸಮುಚ್ಚಯದಲ್ಲಿ 70 ಫ್ಲ್ಯಾಟ್‌ಗಳಿವೆ. ಖಾಸಗಿ ಕಂಪನಿ ನೌಕರರು, ನಿವೃತ್ತ ಉದ್ಯೋಗಿಗಳ ಕುಟುಂಬದವರು ಎಂಟು ವರ್ಷದಿಂದ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಕೋವಿಡ್ ಬಂದ ನಂತರ ವಾತಾವರಣ ಬದಲಾಗಿತ್ತು. ಫ್ಲ್ಯಾಟ್‌ನಲ್ಲಿ ಇದ್ದುಕೊಂಡು ಬಹುತೇಕರು, ಕಚೇರಿ ಕೆಲಸವನ್ನು ಮನೆಯಿಂದಲೇ (ವರ್ಕ್‌ ಫ್ರಮ್ ಹೋಮ್) ನಿರ್ವಹಿಸುತ್ತಿದ್ದರು.

ಇದನ್ನೂ ಓದಿ... ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ತಾಯಿ–ಮಗಳು ಸಜೀವ ದಹನ

ಮಂಗಳವಾರ ಮಧ್ಯಾಹ್ನ ಬಹುತೇಕರು ಮನೆಯಿಂದಲೇ ಕಚೇರಿ ಕೆಲಸ ಆರಂಭಿಸಿದ್ದರು. ಕೆಲವರು ವಿಶ್ರಾಂತಿ ಪಡೆದಿದ್ದರು. ಇನ್ನು ಕೆಲವರು, ದಿನನಿತ್ಯದ ಕೆಲಸಗಳಲ್ಲಿ ತೊಡಗಿದ್ದರು. ಮಧ್ಯಾಹ್ನ 4.30ರ ಸುಮಾರಿಗೆ ಫ್ಲ್ಯಾಟ್‌ ನಂ. 210ರಲ್ಲಿ ಜೋರು ಸದ್ದು ಕೇಳಿಸಿತು. ಏನಾದರೂ ಇರಬಹುದೆಂದು ನಿವಾಸಿಗಳು ಸುಮ್ಮನಾಗಿದ್ದರು. ಅದಾದ ನಂತರ, ಪುನಃ ಮೂರ್ನಾಲ್ಕು ಬಾರಿ ಸದ್ದು ಕೇಳಿಸಿತು.

ಅನುಮಾನಗೊಂಡ ಕೆಲವರು, ಫ್ಲ್ಯಾಟ್‌ನಿಂದ ಹೊರಬಂದು ನೋಡಿದಾಗ ದಟ್ಟ ಹೊಗೆ ಕ್ರಮೇಣ ಹೆಚ್ಚಾಗುತ್ತಿತ್ತು. ಗಾಬರಿಗೊಂಡ ಅವರೆಲ್ಲ, ತಮ್ಮ ಕುಟುಂಬದವರನ್ನು ಕರೆದುಕೊಂಡು ಹೊರಗೆ ಓಡಿಬಂದು ರಸ್ತೆಯಲ್ಲಿ ನಿಂತುಕೊಂಡರು. ಬೆಂಕಿ ಕಾಣಿಸಿಕೊಂಡಿದ್ದ ಫ್ಲ್ಯಾಟ್‌–210 ಸಂಪೂರ್ಣ ಸುಟ್ಟಿತು. ಅಲ್ಲಿಯೇ ಲಕ್ಷ್ಮಿದೇವಿ ಹಾಗೂ ಅವರ ಮಗಳು ಭಾಗ್ಯರೇಖಾ ಮೃತಪಟ್ಟರು.

ಅಮೆರಿಕದಿಂದ ಬಂದಿದ್ದರು: ‘ಭಾಗ್ಯರೇಖಾ, ಪತಿ ಹಾಗೂ ಕುಟುಂಬದ ಜೊತೆಯಲ್ಲಿ ಅಮೆರಿಕದಲ್ಲಿರುವ ಮಗಳು ಸ್ವಾತಿ ಮನೆಗೆ 6 ತಿಂಗಳ ಹಿಂದಷ್ಟೇ ಹೋಗಿದ್ದರು. ಸೋಮವಾರ ವಾಪಸು ಬಂದು ಫ್ಲ್ಯಾಟ್‌ನಲ್ಲಿ ಉಳಿದುಕೊಂಡಿದ್ದರು’ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.

‘ಅಕ್ಕ–ಪಕ್ಕದವರ ಜೊತೆ ಚೆನ್ನಾಗಿ ಮಾತನಾಡುತ್ತಿದ್ದ ಭಾಗ್ಯರೇಖಾ, ಮಂಗಳವಾರ ಬೆಳಿಗ್ಗೆಯೂ ಪಕ್ಕದ ಮನೆಯ ಮಹಿಳೆ ಜೊತೆ ಮಾತನಾಡಿದ್ದರು. ‘ಅಮೆರಿಕದಲ್ಲಿ ಮಗಳು –ಅಳಿಯ ಚೆನ್ನಾಗಿದ್ದಾರೆ. ನೋಡಿಕೊಂಡು ಬಂದು ಖುಷಿಯಾಗಿದೆ. ಅಲ್ಲಿಯ ನೆನಪುಗಳು ಇನ್ನು ಉಳಿದಿವೆ’ ಎಂದಿದ್ದರು. ಸದ್ಯದಲ್ಲೇ ಮಗಳು–ಅಳಿಯ ಭಾರತಕ್ಕೆ ಬರುತ್ತಾರೆಂದು ತಿಳಿಸಿ ಫ್ಲ್ಯಾಟ್‌ನೊಳಗೆ ಹೋಗಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಮನೆಯಲ್ಲಿ ಸ್ಫೋಟ ಸಂಭವಿಸಿ, ಭಾಗ್ಯರೇಖಾ ಹಾಗೂ ಅವರ ತಾಯಿ ಲಕ್ಷ್ಮಿದೇವಿ ಪ್ರಾಣ ಕಳೆದುಕೊಂಡಿದ್ದಾರೆ’ ಎಂದೂ ತಿಳಿಸಿದರು.

ಪೊಲೀಸ್ ಅಧಿಕಾರಿಯೊಬ್ಬರು, ‘ಭಾಗ್ಯರೇಖಾ, ಭೀಮಸೇನ್ ಅವರ ಪತ್ನಿ. ಇದೇ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಭೀಮಸೇನ್ ಎರಡು ಫ್ಲ್ಯಾಟ್‌ ಖರೀದಿಸಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬ ಮಗಳು ಸ್ವಾತಿ, ಅಮೆರಿಕದಲ್ಲಿದ್ದಾರೆ. ಇನ್ನೊಬ್ಬ ಮಗಳು ಪ್ರೀತಿ’ ಎಂದರು.


ಅಗ್ನಿ ಅನಾಹುತ ನಡೆದ ಬೊಮ್ಮನಹಳ್ಳಿ ಬಳಿಯ ದೇವರಚಿಕ್ಕನಹಳ್ಳಿ ಆಶ್ರಿತ್ ಅಪಾರ್ಟ್‌ಮೆಂಟ್‌ ಇರುವ ಪ್ರದೇಶದ ನೋಟ

‘ಪತ್ನಿ ಹಾಗೂ ಅತ್ತೆ ಜೊತೆಯಲ್ಲಿ ಒಂದು ಫ್ಲ್ಯಾಟ್‌ನಲ್ಲಿ ಭೀಮಸೇನ್ ಉಳಿದುಕೊಂಡಿದ್ದರು. ಇನ್ನೊಂದು ಫ್ಲ್ಯಾಟ್‌ನ್ನು ಮಗಳು ಪ್ರೀತಿಗೆ ಕೊಟ್ಟಿದ್ದರು’ ಎಂದೂ ಹೇಳಿದರು.

‘ಬೆಂಕಿ ಅವಘಡದ ವೇಳೆ ಪತ್ನಿ ಹಾಗೂ ಅತ್ತೆಯನ್ನು ಉಳಿಸಿಕೊಳ್ಳಲು ಭೀಮಸೇನ್ ಸಾಕಷ್ಟು ಯತ್ನಿಸಿದ್ದರು. ಕೊನೆಯಲ್ಲಿ ಅವರೇ ಅಪಾಯಕ್ಕೆ ಸಿಲುಕಿದ್ದರು. ಪಕ್ಕದ ಮನೆಯವರು ಅವರನ್ನು ಕರೆದುಕೊಂಡು ಹೊರಗೆ ಬಂದು ಪ್ರಾಣ ಉಳಿಸಿದ್ದಾರೆ. ಅವರ ತಲೆ, ಕೈ ಹಾಗೂ ಕಾಲಿಗೆ ಸುಟ್ಟ ಗಾಯಗಳಾಗಿವೆ’ ಎಂದೂ ತಿಳಿಸಿದರು.

ಪ್ರಾಣ ಉಳಿಸಿದ ವಾಟ್ಸ್‌ಆ್ಯಪ್ ಗ್ರೂಪ್: ‘ಬಹುತೇಕರು ಫ್ಲ್ಯಾಟ್‌ಗಳ ಒಳಗೆ ಇದ್ದರು. ಅವರಿಗೆ ಬೆಂಕಿ ತಗುಲಿದ್ದೇ ಗೊತ್ತಿರಲಿಲ್ಲ. ಹೊರಗೆ ಬಂದಿದ್ದ ಕೆಲವರು, ‘ಬೆಂಕಿ ಹೊತ್ತಿಕೊಂಡಿದೆ. ಹೊರಗೆ ಬನ್ನಿ’ ಎಂದು ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಸಂದೇಶ ಕಳುಹಿಸಿದ್ದರು’ ಎಂದು ನಿವಾಸಿಯೊಬ್ಬರು ಹೇಳಿದರು.

‘ಸಂದೇಶ ನೋಡಿದ ಬಹುತೇಕರು, ಫ್ಲ್ಯಾಟ್‌ನಿಂದ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡರು’ ಎಂದೂ ತಿಳಿಸಿದರು.

ಮಹಿಳೆಯೊಬ್ಬರು, ‘ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದೆ. ಜೋರು ಶಬ್ದ ಕೇಳಿದೆ. ಕೆಲಸ ಹೆಚ್ಚಿದ್ದರಿಂದ ಹೆಚ್ಚು ಗಮನ ಹರಿಸಲಿಲ್ಲ. ಕೆಲ ನಿಮಿಷಗಳಲ್ಲೇ ಕೊಠಡಿಗೆ ತಂದೆ ಓಡಿಬಂದರು. ಬೆಂಕಿ ಬಿದ್ದಿರುವುದಾಗಿ ಹೇಳಿ ಮನೆಯಲ್ಲಿದ್ದವರನ್ನೆಲ್ಲ ಹೊರಗೆ ಕರೆದುಕೊಂಡು ಬಂದರು’ ಎಂದರು.  

ನಿವಾಸಿ ಲಕ್ಷ್ಮಣ, ‘ಫ್ಲ್ಯಾಟ್‌–210ರ ಬಳಿಯೇ ನಮ್ಮ ಫ್ಲ್ಯಾಟ್ ಇದೆ. ಬೆಂಕಿ ಕಂಡೊಡನೆ ಹೊರಗೆ ಬಂದೆವು. ನಮ್ಮ ಫ್ಲ್ಯಾಟ್‌ಗೆ ಏನಾಗಿದೆ ಎಂಬುದು ಗೊತ್ತಾಗಿಲ್ಲ. ಬುಧವಾರ ಬೆಳಿಗ್ಗೆ ಫ್ಲ್ಯಾಟ್‌ಗೆ ಹೋಗಿ ನೋಡಿ ಎಂದು ಅಗ್ನಿಶಾಮಕದಳದ ಸಿಬ್ಬಂದಿ ಹೇಳಿದ್ದಾರೆ’ ಎಂದರು.

ವಾಹನ ಹೋಗಲು ಜಾಗವಿರಲಿಲ್ಲ: ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರು. ಆದರೆ, ಘಟನಾ ಸ್ಥಳದ ಬಳಿ ವಾಹನ ಹೋಗಲು ಜಾಗವಿರಲಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಕಟ್ಟಡ ನಿರ್ಮಾಣ ಮಾಡಿದ್ದ ಆರೋಪವೂ ಕೇಳಿಬರುತ್ತಿದೆ.

‘ಕಾರಣ ಪತ್ತೆಗಾಗಿ ತನಿಖೆ’
‘ಅಡುಗೆ ಅನಿಲ ಸೋರಿಕೆಯಿಂದ ಅಥವಾ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಅವಘಡ ಸಂಭವಿಸಿರುವ ಅನುಮಾನವಿದೆ. ನಿಖರ ಕಾರಣವೇನು ಎಂಬುದನ್ನು ಪತ್ತೆ ಮಾಡಲು ತನಿಖೆ ಆರಂಭಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬೆಂಕಿ ನಿಯಂತ್ರಣಕ್ಕೆ ಬಂದ ನಂತರ, ಫ್ಲ್ಯಾಟ್‌ನಲ್ಲಿ ಪರಿಶೀಲನೆ ನಡೆಸಲಾಗುವುದು. ಅಲ್ಲಿ ಸಿಗುವ ಅವಶೇಷ ಮಾದರಿ ಸಂಗ್ರಹಿಸಿ, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಅದರ ವರದಿಯಿಂದ ಮಾಹಿತಿ ಸಿಗಲಿದೆ’ ಎಂದೂ ತಿಳಿಸಿದರು.

ಒಳನುಗ್ಗಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು: ಅಪಾರ್ಟ್‌ಮೆಂಟ್ ಸಮುಚ್ಚಯದ ಹಲವೆಡೆ ಹೊಗೆ ಆವರಿಸಿತ್ತು. ಬೆಂಕಿ ಧಗ ಧಗ ಉರಿಯುತ್ತಿತ್ತು. ಇಂಥ ಸ್ಥಿತಿಯಲ್ಲೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು, ಮೆಟ್ಟಿಲು ಹಾಗೂ ಕಿಟಕಿ ಮೂಲಕ ಒಳ ನುಗ್ಗಿದರು. ಫ್ಲ್ಯಾಟ್‌ನಲ್ಲಿ ಯಾರಾದರೂ ಸಿಲುಕಿದ್ದಾರಾ? ಎಂಬುದನ್ನು ಹುಡುಕಾಡಿದರು. ಫ್ಲ್ಯಾಟ್‌ 210ರಲ್ಲಿ ಮಾತ್ರ ಮೃತದೇಹಗಳು ಪತ್ತೆಯಾದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು