ಮಂಗಳವಾರ, ಅಕ್ಟೋಬರ್ 27, 2020
27 °C

ಮೀನುಗಾರಿಕೆಯನ್ನೇ ನೆಚ್ಚಿಕೊಂಡಿದ್ದ ಕಾರ್ಮಿಕರ ಬದುಕು ಅಕ್ಷರಶಃ ಬೀದಿಗೆ

ಜೋಮನ್ ವರ್ಗೀಸ್ Updated:

ಅಕ್ಷರ ಗಾತ್ರ : | |

ಮಂಗಳೂರು: ಕೊರೊನಾ ಕಾಲದಲ್ಲಿ ಕರಾವಳಿಯಲ್ಲಿ ದೊಡ್ಡ ಪೆಟ್ಟು ಬಿದ್ದದ್ದು ಮತ್ಸ್ಯೋದ್ಯಮಕ್ಕೆ. ಮೀನುಗಾರಿಕೆಯನ್ನೇ ನೆಚ್ಚಿಕೊಂಡಿದ್ದ ಸಾವಿರಾರು ಕುಟುಂಬಗಳ ಬದುಕು ಅಕ್ಷರಶಃ ಬೀದಿಗೆ ಬಂತು. ಸರಿಸುಮಾರು ಅರ್ಧ ವರ್ಷ ತೀರದಲ್ಲೇ ನಿಂತಿದ್ದ ಬೋಟ್‌ಗಳನ್ನು ಲಾಕ್‌ಡೌನ್‌ ನಂತರ ಮತ್ತೆ ಸಮುದ್ರಕ್ಕೆ ಇಳಿಸಲು ಬೋಟ್‌ ಮಾಲೀಕರ ಬಳಿ ಬಿಡಿಗಾಸೂ ಇರಲಿಲ್ಲ.

‘ಹಂಗಾಮಿನ ಆರಂಭದಲ್ಲಿ ಒಂದು ಪರ್ಸಿನ್‌ ಬೋಟ್‌ ಸಮುದ್ರಕ್ಕೆ ಇಳಿಸಬೇಕಾದರೆ ಕನಿಷ್ಠ ₹ 5 ಲಕ್ಷದಿಂದ ₹ 6 ಲಕ್ಷ ಬೇಕಾಗುತ್ತದೆ. ಲಕ್ಷ ಇರಲಿ, ನಮ್ಮ ಬಳಿ ₹ 500ರ ಒಂದು ನೋಟು ಸಹ ಇರಲಿಲ್ಲ. ತವರಿಗೆ ಮರಳಿದ್ದ ಒಡಿಶಾ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದ ಕಾರ್ಮಿಕರನ್ನು ಈಗ ಸಾಲ ಮಾಡಿ ವಾಪಸ್‌ ಕರೆಯಿಸಿಕೊಂಡಿದ್ದೇವೆ. ಜನರು ಮಾರುಕಟ್ಟೆಯಲ್ಲಿ ಮೀನು ದುಬಾರಿ ಎನ್ನುತ್ತಾರೆ. ಆದರೆ, ಬೋಟ್‌ ಮಾಲೀಕರು ಕಾರ್ಮಿಕರಿಗೆ ವೇತನ ನೀಡಲೂ ಪರದಾಡುವ ಸ್ಥಿತಿ ಇದೆ’ ಎನ್ನುತ್ತಾರೆ ಮೀನುಗಾರಿಕಾ ಮುಖಂಡ ಮೋಹನ್ ಬೆಂಗ್ರೆ.

‘ಈಗಿನ ಸಂದರ್ಭದಲ್ಲಿ ಯಾರ ಬಳಿಯೂ ಮೂಲ ಬಂಡವಾಳ ಇಲ್ಲ. ಮೂಲ ಬಂಡವಾಳ ಹೂಡಿಕೆ ಹೆಚ್ಚಿದಾಗ ಮಾತ್ರ ಆರ್ಥಿಕತೆ ಸ್ಥಿರತೆಯ ಹಾದಿಗೆ ಮರಳುತ್ತದೆ. ಇದಕ್ಕೆ ಸ್ವಲ್ಪ ಸಮಯ ಬೇಕು’ ಎನ್ನುತ್ತಾರೆ ಕೆನರಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಐಸಾಕ್‌ ವಾಸ್‌.

‘ಮೀನುಗಾರಿಕೆ ಮಾತ್ರವಲ್ಲ, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಹೆಂಚಿನ ಕಾರ್ಮಿಕರ ಸ್ಥಿತಿಯೂ ದಾರುಣವಾಗಿದೆ. ಜಿಲ್ಲೆಯಲ್ಲಿ ಈ ಕ್ಷೇತ್ರದಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈಗ ಅರ್ಧದಷ್ಟು ಜನರಿಗೆ ಕೆಲಸ ಇಲ್ಲ. ಪಿಂಚಣಿಯೂ ಸಿಗುತ್ತಿಲ್ಲ. ಕೋವಿಡ್‌ ಹೊಡೆತದಿಂದ ಮಂಗಳೂರಿನ ಪ್ರಸಿದ್ಧ ಹೆಂಚಿನ ಕಾರ್ಖಾನೆ ಸೊವರಿನ್‌ ಟೈಲ್ಸ್‌ ಬಾಗಿಲು ಮುಚ್ಚುವ ಹಂತಕ್ಕೆ ಬಂದಿದೆ’ ಎಂದು ದಕ್ಷಿಣ ಕನ್ನಡ ಹೆಂಚು ಕಾರ್ಮಿಕರ ಸಂಘದ ಖಜಾಂಚಿ ವಿ.ಎಸ್‌. ಗರೀಂಜ ಪರಿಸ್ಥಿತಿ ತೆರೆದಿಟ್ಟರು.

ಕೇರಳದ ಕಾಸರಗೋಡು, ಕಣ್ಣೂರು ಜಿಲ್ಲೆಯ ಜನರು ಆರೋಗ್ಯ ಸೇವೆಗಾಗಿ ಹೆಚ್ಚಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದರು. ಕೋವಿಡ್‌ನಿಂದ ಗಡಿ ಬಂದ್‌ ಆದ ನಂತರ ಅಲ್ಲಿಂದ ಬರುವ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಈ ನಷ್ಟವನ್ನು ಖಾಸಗಿ ಆಸ್ಪತ್ರೆಗಳು ಸ್ಥಳೀಯ ರೋಗಿಗಳ ಮೇಲೆ ವರ್ಗಾಯಿಸುತ್ತಿವೆ. ಹೀಗಾಗಿ ಜಿಲ್ಲೆಯಲ್ಲಿ ಆರೋಗ್ಯ ಸೇವೆ ದುಬಾರಿಯಾಗಿದೆ.

ನಿರ್ವಹಣೆ: ವಿಜಯ್‌ ಜೋಷಿ, ಮಾಹಿತಿ: ಜೋಮನ್ ವರ್ಗೀಸ್ (ಮಂಗಳೂರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು