ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂದಲ್‌ಪಟ್ಟಿ-ಕುರುಂಜಿ ಹೂವು 7 ವರ್ಷದ ಪ್ರಭೇದ

Last Updated 29 ಆಗಸ್ಟ್ 2021, 12:18 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡಗು ಜಿಲ್ಲೆಯ ಮಾಂದಲ್‌ಪಟ್ಟಿ ಹಾಗೂ ಕೋಟೆಬೆಟ್ಟದ ವ್ಯಾಪ್ತಿಯಲ್ಲಿ ಕಂಗೊಳಿಸುತ್ತಿರುವ ನೀಲಕುರುಂಜಿ ಹೂವು 7 ವರ್ಷಕ್ಕೊಮ್ಮೆ ಅರಳುವ ಪ್ರಭೇದಕ್ಕೆ ಸೇರಿದ್ದು’ ಎಂದು ಸಸ್ಯತಜ್ಞರು ಸ್ಪಷ್ಟಪಡಿಸಿದ್ದಾರೆ.

ಸಸ್ಯತಜ್ಞ ಡಾ.ಜೋಮಿ ಅಗಸ್ಟಿನ್‌ ಹಾಗೂ ಪರಿಸರ ಸಂಸ್ಥೆಯ ಅಧ್ಯಕ್ಷ ಈಶ್ವರ್‌ ಪ್ರಸಾದ್‌ ನೇತೃತ್ವದಲ್ಲಿ ಐವರ ತಂಡವು ಈಚೆಗೆ ಈ ಬೆಟ್ಟಗಳಲ್ಲಿ ಅಧ್ಯಯನ ನಡೆಸಿತ್ತು.

ಅರಣ್ಯ ಇಲಾಖೆ ಅಧಿಕಾರಿಗಳು, ‘ಇದು 12 ವರ್ಷಗಳಿಗೊಮ್ಮೆ ಅರಳುವ ನೀಲಕುರುಂಜಿ (ಸ್ಟ್ರೊಬಿಲಾಂತಸ್‌ ಕುಂತಿಯಾನ)’ ಎಂದು ಹೇಳಿದ್ದರು. ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲೂ ಇದೇ ಮಾಹಿತಿ ಪ್ರಕಟಿಸಿತ್ತು. ಆದರೆ, ಈ ಮಾಹಿತಿಯನ್ನು ಸಸ್ಯ ತಜ್ಞರು ಅಲ್ಲಗಳೆದಿದ್ದಾರೆ.

ನೀಲಹೂವಿನ ಸಸ್ಯವರ್ಗವಾದ ಕುರುಂಜಿಯಲ್ಲಿ ಅಂದಾಜು 70 ಪ್ರಭೇದಗಳಿವೆ. ಈಗ ಹೂವು ಬಿಟ್ಟಿರುವುದು 7 ವರ್ಷದ ಪ್ರಭೇದ (ಸ್ಟ್ರೊಬಿಲಾಂತಸ್‌ ಸೆಸ್ಸೈಲಿಸ್). 12 ವರ್ಷಕ್ಕೆ ಅರಳುವ ಕುಂತಿಯಾನ ಅಲ್ಲ ಎಂದು ತಜ್ಞರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಕುಂತಿಯಾನ ಸಸ್ಯಗಳ ಹೂವುಗಳು ತಿಳಿನೀಲಿ ಬಣ್ಣದಿಂದ ಕೂಡಿರುತ್ತವೆ. ಎಲೆಗಳು ತೊಟ್ಟುಗಳನ್ನು ಹೊಂದಿರುತ್ತವೆ. ಏಳು ವರ್ಷದ ಪ್ರಭೇದದ ಹೂವುಗಳು ನೇರಳೆ ಬಣ್ಣದಿಂದ ಕೂಡಿದ್ದು, ಎಲೆಗಳು ತೊಟ್ಟುಗಳಿಲ್ಲದೆ ನೇರವಾಗಿ ಕಾಂಡಕ್ಕೆ ಅಂಟಿಕೊಂಡಂತೆ ಬೆಳೆಯುತ್ತವೆ ಎಂದಿದ್ದಾರೆ.

‘ಕೊಡಗಿನ ಬೆಟ್ಟಗಳಲ್ಲಿ ಈ ಸಸ್ಯಗಳು ಹಬ್ಬಿಕೊಂಡಿವೆ. ಇನ್ನೂ ಕೆಲವು ಭಾಗದಲ್ಲಿ ಹೂವು ಅರಳಬೇಕಿದ್ದು, ಅಧ್ಯಯನ ಆಸಕ್ತಿ ಮೂಡಿಸುತ್ತಿದೆ’ ಎಂದು ಈಶ್ವರ್‌ ಪ್ರಸಾದ್‌ ತಿಳಿಸಿದ್ದಾರೆ.

ತಂಡದಲ್ಲಿ ಮಂಗಳೂರಿನ ಚೇತನಾ ಬಡೇಕರ್, ಕಾಸರಗೋಡಿನ ಬಿಜು, ಕೇರಳದ ಉನ್ನಿಕೃಷ್ಣ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT