ಶನಿವಾರ, ಫೆಬ್ರವರಿ 4, 2023
18 °C

ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ಸರ್ಕಾರ ವಿಫಲ: ಹೋರಾಟಗಾರರ ವೇದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH Photo

ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ದೂರಿದೆ.

ಅರಣ್ಯ ಹಕ್ಕು ಕಾಯ್ದೆ ಅರಣ್ಯ ವಾಸಿಗಳ ಪರವಾಗಿದ್ದರೂ, ಕಾನೂನಿಗೆ ವ್ಯತಿರಿಕ್ತವಾದ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ, ಕಾಯ್ದೆ ಬಗ್ಗೆ ಸರ್ಕಾರ ದೃಢ ನಿಲುವು ಪ್ರಕಟಿಸಬೇಕು ಎಂದು ವೇದಿಕೆ ಅಧ್ಯಕ್ಷ ಏ. ರವೀಂದ್ರ ನಾಯ್ಕ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಕಾಯ್ದೆ ಜಾರಿಯಾಗಿ 15 ವರ್ಷಗಳಾದರೂ ಸಾಗುವಳಿ ಹಕ್ಕು ಪತ್ರಗಳಿಗೆ ಗ್ರಹಣ ಹಿಡಿದಿದೆ. ಇದರಿಂದ, ಅರಣ್ಯ ವಾಸಿಗಳ ಭೂಮಿ ಹಕ್ಕಿನ ಸಮಸ್ಯೆ ಅರಣ್ಯರೋದನವಾಗಿದೆ. ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಕಾರಣ 2,95,018 ಸಾಗುವಳಿಗಾಗಿ ಸಲ್ಲಿಸಿದ್ದ ಅರ್ಜಿಗಳಲ್ಲಿ ಶೇಕಡ 62.49ರಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಇದುವರೆಗೆ ಕೇವಲ 15,798 ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಇವುಗಳಲ್ಲಿ ಬುಡಕಟ್ಟು ಜನಾಂಗಕ್ಕೆ 12,481 ಹಾಗೂ ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ 1,976 ನೀಡಲಾಗಿದೆ. ಒಟ್ಟಾರೆಯಾಗಿ ಶೇಕಡ 5.35 ಸಾಗುವಳಿ ಅರ್ಜಿದಾರರಿಗೆ ಮಾತ್ರ ಹಕ್ಕು ಪತ್ರ ದೊರೆತಿದೆ ಎಂದು ವಿವರಿಸಿದರು.

ಸಾಗುವಳಿ ಹಕ್ಕಿಗಾಗಿ ಮೊದಲು ಗ್ರಾಮ ಅರಣ್ಯ ಸಮಿತಿಗೆ ಅರ್ಜಿ ಸಲ್ಲಿಸಬೇಕು. ನಂತರ, ಉಪವಿಭಾಗ ಸಮಿತಿಗೆ ಸಲ್ಲಿಸಬೇಕು. ಆದರೆ, ಉಪವಿಭಾಗ ಸಮಿತಿಗಳು ಕಾನೂನುಗಳನ್ನು ಪಾಲಿಸದೆಯೇ ಅರ್ಜಿಗಳನ್ನು ತಿರಸ್ಕರಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಉಪವಿಭಾಗದ ಅರಣ್ಯ ಹಕ್ಕು ಸಮಿತಿಯು ಒಂದೇ ದಿನದಲ್ಲಿ 15 ಸಾವಿರ ಅರ್ಜಿಗಳನ್ನು ತಿರಸ್ಕರಿಸಿದೆ ಎಂದು ಉದಾಹರಣೆ ನೀಡಿದರು.

ಪಾರಂಪರಿಕ ಅರಣ್ಯ ವಾಸಿಗಳಿಗೆ ಮೂರು ತಲೆಮಾರುಗಳ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗುತ್ತಿದೆ. ಆದರೆ, ಜನವಸತಿ ಪ್ರದೇಶದಲ್ಲಿ ಮೂರು ತಲೆಮಾರು ವಾಸವಿದ್ದ ಬಗ್ಗೆ ದಾಖಲೆಗಳನ್ನು ಕೊಟ್ಟರೆ ಸಾಕು ಎಂದು ಕೇಂದ್ರ ಸರ್ಕಾರದ ಬುಡಕಟ್ಟು ಸಚಿವಾಲಯ ನಿರ್ದೇಶನ ನೀಡಿದೆ. ಈ ನಿರ್ದೇಶನವನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರಣ್ಯ ವಾಸಿಗಳ ಹಕ್ಕುಗಳ ಬಗ್ಗೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣೆ ಮುಗಿಯುವವರೆಗೂ ಒಕ್ಕಲೆಬ್ಬಿಸಬಾರದು ಎಂದು ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ ಎಂದು ತಿಳಿಸಿದರು.

ಅತಿ ಹೆಚ್ಚು ಹಕ್ಕುಪತ್ರ ಪಡೆದ ಜಿಲ್ಲೆಗಳು
ಉತ್ತರ ಕನ್ನಡ; 2885
ಶಿವಮೊಗ್ಗ; 2444
ಚಾಮರಾಜನಗರ; 2136
ಕೊಡಗು;2018
ಚಿಕ್ಕಮಗಳೂರು; 1911

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು