ಸೋಮವಾರ, ಅಕ್ಟೋಬರ್ 3, 2022
24 °C
ಸಹಜ ಸ್ಥಿತಿಯತ್ತ ಶಿವಮೊಗ್ಗ; ಮುಖ್ಯ ಆರೋಪಿ ಕಾಲಿಗೆ ಗುಂಡೇಟು

ಶಿವಮೊಗ್ಗದ ಬಟ್ಟೆ ಅಂಗಡಿ ನೌಕರ ಪ್ರೇಮ್‌ಸಿಂಗ್‌ಗೆ ಚೂರಿ ಇರಿತ: ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸ್ವಾತಂತ್ರ್ಯೋತ್ಸವ ದಿನ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಉಂಟಾದ ವಿವಾದದಿಂದ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ನಗರ ಮಂಗಳವಾರ ಬಹುತೇಕ ಸಹಜ ಸ್ಥಿತಿಯತ್ತ ಮರಳಿತು. ಸೋಮವಾರ ಗಲಾಟೆ ನಡೆದ ಬೆನ್ನಿಗೆ ಬಟ್ಟೆ ಅಂಗಡಿ ನೌಕರ ಪ್ರೇಮ್‌ಸಿಂಗ್‌ಗೆ ಚೂರಿ ಇರಿಯಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಲಿಗೆ ಗುಂಡೇಟು: ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಆರೋಪದ ಮೇಲೆ ಪ್ರಮುಖ ಆರೋಪಿ ಮಾರ್ನಬೈಲಿನ ಚರ್ಬಿ ಅಲಿಯಾಸ್ ಜಬೀವುಲ್ಲಾ (30) ಎಂಬುವವನ ಕಾಲಿಗೆ ಗುಂಡು ಹಾರಿಸಲಾಗಿದೆ.

ಎನ್‌.ಟಿ. ರಸ್ತೆಯ ಫಲಕ್ ಪ್ಯಾಲೇಸ್ ಬಳಿ ಜಬೀವುಲ್ಲಾ ಇರುವ ಮಾಹಿತಿ ಅರಿತ ಪೊಲೀಸರು ಮಂಗಳವಾರ ನಸುಕಿನಲ್ಲಿ ಬಂಧಿಸಲು ತೆರಳಿದ್ದರು. ಈ ವೇಳೆ ವಿನೋಬ ನಗರ ಠಾಣೆ ಸಬ್‌ ಇನ್‌ಸ್ಪೆಕ್ಟರ್ ಮಂಜುನಾಥ ಕುರಿ ಅವರ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆಗ ಆತನ ಕಾಲಿಗೆ ಮಂಜುನಾಥ ಕುರಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗಾಯಗೊಂಡಿರುವ ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಬೀವುಲ್ಲಾ ಈ ಹಿಂದೆ ಮನೆ ಕಳವು ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದನು ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜೆ.ಸಿ. ನಗರ ಎರಡನೇ ಕ್ರಾಸ್ ನಿವಾಸಿ ನದೀಮ್ ಅಲಿಯಾಸ್ ನೌಶಾದ್ ಅಲಿ (25), ಬುದ್ಧ ನಗರದ ನಿವಾಸಿ ಅಬ್ದುಲ್ ರೆಹಮಾನ್ (25) ಹಾಗೂ ಆರ್‌ಎಂಎಲ್ ನಗರದ ತನ್ವೀರ್ ಅಹಮದ್ (22) ಎಂಬುವವರನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸರ ವಶಕ್ಕೆ ಪಡೆಯಲಾಗಿದೆ.

ಚೂರಿ ಇರಿತದಿಂದ ಗಾಯಗೊಂಡಿದ್ದ ರಾಜಸ್ತಾನ ಮೂಲದ ಪ್ರೇಮ್‌ ಸಿಂಗ್ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಂತೋಷ್‌ ಗುರೂಜಿ ಭೇಟಿ ನೀಡಿ ಆರೊಗ್ಯ ವಿಚಾರಿಸಿದರು.

ನಾಳೆ ರಾತ್ರಿವರೆಗೆ ನಿಷೇಧಾಜ್ಞೆ 
ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಿವಮೊಗ್ಗ, ಭದ್ರಾವತಿ ವ್ಯಾಪ್ತಿಯಲ್ಲಿ ಆಗಸ್ಟ್ 18ರ ರಾತ್ರಿ 10 ಗಂಟೆಯವರೆಗೆ ನಿಷೇಧಾಜ್ಞೆ ವಿಸ್ತರಿಸಲಾಗಿದೆ.

ಈ ಅವಧಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ 40 ವರ್ಷದೊಳಗಿನವರು (ಮಹಿಳೆಯರು, ಮಕ್ಕಳನ್ನು ಹೊರತುಪಡಿಸಿ) ಹಿಂಬದಿ ಸವಾರರಾಗುವುದನ್ನು ಹಾಗೂ ರಾತ್ರಿ 9ರಿಂದ ಬೆಳಿಗ್ಗೆ 5 ಗಂಟೆಯವರೆಗೆ ದ್ವಿಚಕ್ರ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡಿರುವ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್‌ ಕುಮಾರ್, ಪೂರ್ವ ವಲಯ ಐಜಿಪಿ ತ್ಯಾಗರಾಜನ್ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿಯು ಹಳೆಯ ಶಿವಮೊಗ್ಗದ ಸೂಕ್ಷ್ಮ ಪ್ರದೇಶದಲ್ಲಿ ಮಂಗಳವಾರ ಪಥ ಸಂಚಲನ ನಡೆಸಿದರು.

*

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಸುಮ್ಮನೇ ಬಿಡುವುದಿಲ್ಲ. ಅವರಿಗೆ ಯಾವ ಸಂಘಟನೆ ನಂಟು ಇದೆ ಎಂಬುದರ ಬಗ್ಗೆ ತನಿಖೆ ನಡೆಸಿ, ತಾರ್ಕಿಕ ಅಂತ್ಯ ಕಂಡುಕೊಳ್ಳಲಾಗುವುದು.
–ಆರಗ ಜ್ಞಾನೇಂದ್ರ, ಗೃಹ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು