ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ವಿದ್ಯಾವರ್ಧಕ ಸಂಘ, ಬಿ.ಪುರುಷೋತ್ತಮ ಮಾಸ್ತರ್‌ಗೆ ಗಡಿನಾಡ ಚೇತನ ಪ್ರಶಸ್ತಿ

ಮಕ್ಕಳ ಸಾಹಿತ್ಯಕ್ಕೆ ಬಜೆಟ್‌ನಲ್ಲಿ ಆದ್ಯತೆ: ಸಿ.ಎಂ.
Last Updated 10 ಫೆಬ್ರುವರಿ 2022, 20:23 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡದ ಕಾರ್ಯಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ರಚನೆಗೆ ಮತ್ತು ಬೇರೆ ಭಾಷೆಯ ಮಕ್ಕಳು ಕನ್ನಡದಲ್ಲಿ ಸಾಹಿತ್ಯ ರಚಿಸಿದರೆ ಪ್ರಶಸ್ತಿ ಹಾಗೂ ಮಕ್ಕಳ ಸಾಹಿತ್ಯ ಜಿಲ್ಲಾ ಸಮ್ಮೇಳನಗಳನ್ನು ಆಯೋಜಿಸಲು ಬಜೆಟ್‌ನಲ್ಲಿ ಆದ್ಯತೆ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ಏಕೀಕರಣದ ಧೀಮಂತ ಹೋರಾಟಗಾರರಾದ ಡಾ. ಜಯದೇವಿ ತಾಯಿ ಲಿಗಾಡೆ ಹಾಗೂ ಕಯ್ಯಾರ ಕಿಂಞ್ಞಣ್ಣ ರೈ ಹೆಸರಿನಲ್ಲಿ ಸ್ಥಾಪಿಸಿರುವ ಗಡಿನಾಡ ಚೇತನ ಪ್ರಶಸ್ತಿಯನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಗಡಿನಾಡ ಸಂತ ಬಿ. ಪುರುಷೋತ್ತಮ ಮಾಸ್ತರ್ ಕಾಸರಗೋಡು ಅವರಿಗೆ ಗುರುವಾರ ಪ್ರದಾನ ಮಾಡಿ ಮಾತನಾಡಿದ ಅವರು, ಕನ್ನಡ ಭಾಷೆಯನ್ನು ವಿಶ್ವಮಟ್ಟಕ್ಕೇರಿಸಬೇಕಾದ ಅಗತ್ಯವನ್ನುಪ್ರತಿಪಾದಿಸಿದರು.

‘ಬಾಲಕರಿಂದ ಹಿರಿಯರವರೆಗಿನ ಸಾಧಕರನ್ನು ಕನ್ನಡದರಾಯಭಾರಿಗಳನ್ನು ನೇಮಿಸಲಾಗುವುದು. ಜತೆಗೆ, ಧಾರವಾಡದ ವಿದ್ಯಾವರ್ಧಕ ಸಂಘದಂತಹ ಕನ್ನಡದ ಸಂಸ್ಥೆಗಳಿಗೆ ಶಕ್ತಿ ತುಂಬಲಾಗುವುದು ಮತ್ತು ಗಡಿಭಾಗದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲು ಪ್ರಾಮುಖ್ಯತೆ ನೀಡಲಾಗುವುದು’ ಎಂದು ಹೇಳಿದರು.

‘ಕನ್ನಡ ವಿಚಾರಗಳನ್ನು ಗಟ್ಟಿಯಾಗಿ ಹೇಳುವ ಕಾರ್ಯಗಳು ನಡೆಯಬೇಕು. ಕನ್ನಡದ ಚಿಂತನೆಗಳು ವಿಶ್ವಕ್ಕೆ ಪರಿಚಯವಾಗಬೇಕು. ಕನ್ನಡಕ್ಕೆ 21ನೇ ಶತಮಾನದಲ್ಲಿ ಮೇರು ಸ್ಥಾನ ದೊರೆಯಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿಗೆ ಬಜೆಟ್‌ನಲ್ಲಿ ಆದ್ಯತೆ ನೀಡುವ ಬಗ್ಗೆ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಗಡಿ ನಾಡು ಪ್ರದೇಶದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಯೋಜನೆಗಳನ್ನು ರೂಪಿಸಲಾಗುವುದು’ ಎಂದು ಹೇಳಿದರು.

‘ಕನ್ನಡದ ಸಾಹಿತ್ಯ, ಸಂಸ್ಕೃತಿ, ಇತಿಹಾಸ ರೋಚಕವಾಗಿದೆ. ತಮಿಳರು ಅಚ್ಚುಕಟ್ಟಾಗಿ ತಮ್ಮ ಇತಿಹಾಸವನ್ನು ಹೇಳುವುದರಿಂದ ಆ ಭಾಷೆಗೆ ಆದ್ಯತೆ ದೊರೆಯುತ್ತಿದೆ. ಅವರಿಗಿಂತಲೂ ಕನ್ನಡದ ಇತಿಹಾಸ ಪುರಾತನವಾಗಿದೆ. ಹೀಗಾಗಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುನ್ನುಗ್ಗಿ ಹೇಳಿದರೆ ಮಾತ್ರ ನಮ್ಮ ವಿಚಾರಗಳನ್ನು ಕೇಳುತ್ತಾರೆ’ ಎಂದು ಹೇಳಿದರು.

‘ಗಡಿಯಿಂದಾಚೆಗೆ ಹೋದರೆ ಮಾತ್ರ ನಿಜವಾದ ಕನ್ನಡ ಅಭಿಮಾನ ಗೊತ್ತಾಗುತ್ತದೆ. ಕಾಸರಗೋಡಿಗೆ ನಾನು ಭೇಟಿ ನೀಡಿದಾಗ ಅಲ್ಲಿನ ಸ್ಥಳೀಯರೂ ಮಲೆಯಾಳಿ ಮಾತನಾಡಲಿಲ್ಲ. ಅಲ್ಲಿನವರು ಶುದ್ಧ ಕನ್ನಡದಲ್ಲಿ ಮಾತನಾಡುತ್ತಾರೆ. ಸೊಲ್ಲಾಪುರ, ಜತ್ತದಲ್ಲೂ ಅತ್ಯಂತ ಆತ್ಮೀಯವಾಗಿ ಕನ್ನಡದಲ್ಲಿ ಮಾತನಾಡುತ್ತಾರೆ. ಇವರ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT