ಭಾನುವಾರ, ಜನವರಿ 24, 2021
18 °C
ಕೊಚ್ಚಿನ್‌–ಮಂಗಳೂರು ಅನಿಲ ಪೈಪ್‌ಲೈನ್‌ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಆತ್ಮನಿರ್ಭರ ಭಾರತಕ್ಕೆ ಅನಿಲ, ನೀಲಿ ಆರ್ಥಿಕತೆ: ಪ್ರಧಾನಿ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೊಚ್ಚಿನ್‌ನಿಂದ ಮಂಗಳೂರಿಗೆ ನೈಸರ್ಗಿಕ ಅನಿಲ ಪೂರೈಸುವ 450 ಕಿ.ಮೀ. ಉದ್ದದ ಪೈಪ್‌ಲೈನ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವರ್ಚ್ಯುವಲ್‌ ಕಾರ್ಯಕ್ರಮದ ಮೂಲಕ ಲೋಕಾರ್ಪಣೆ ಮಾಡಿದರು.

‘ಒಂದು ರಾಷ್ಟ್ರ ಒಂದು ಅನಿಲ ಸ್ಥಾವರ’ ಯೋಜನೆಯಡಿ ಈ ಪೈಪ್‌ಲೈನ್‌ ನಿರ್ಮಿಸಲಾಗಿದ್ದು, ನಿತ್ಯ 1.2 ಕೋಟಿ ಮೆಟ್ರಿಕ್ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್ ಅನಿಲ ಸಾಗಿಸುವ ಸಾಮರ್ಥ್ಯ ಹೊಂದಿದೆ. ಕೇರಳದ ಕೊಚ್ಚಿನ್‌ನ ದ್ರವೀಕೃತ ನೈಸರ್ಗಿಕ ಅನಿಲ ಟರ್ಮಿನಲ್‌ನಿಂದ ಮಂಗಳೂರಿಗೆ ಸಾಗಿಸಲಾಗುತ್ತದೆ.

₹3 ಸಾವಿರ ಕೋಟಿ ವೆಚ್ಚದಲ್ಲಿ ಪೈಪ್‌ಲೈನ್‌ ಪೂರ್ಣಗೊಂಡಿದ್ದು, ಸದ್ಯಕ್ಕೆ ಮಂಗಳೂರಿನ ಎಂಸಿಎಫ್‌ಗೆ ನಿತ್ಯ 8 ಲಕ್ಷ ಸ್ಟಾಂಡರ್ಡ್‌ ಕ್ಯುಬಿಕ್‌ ಮೀಟರ್‌ ನೈಸರ್ಗಿಕ ಅನಿಲ ಪೂರೈಸ ಲಾಗುತ್ತಿದೆ. ಬರುವ ದಿನಗಳಲ್ಲಿ ಒಎಂಪಿಎಲ್‌, ಎಂಆರ್‌ಪಿಎಲ್‌ಗೂ ಅನಿಲ ಪೂರೈಕೆಯಾಗಲಿದೆ. ಸಿಎನ್‌ಜಿ ಕೇಂದ್ರಗಳ ಮೂಲಕ ವಾಹನ ಹಾಗೂ ಗೃಹಬಳಕೆಗೆ ಅನಿಲ ಪೂರೈಕೆ ಆರಂಭಿಸ ಲಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಆತ್ಮನಿರ್ಭರ ಭಾರತಕ್ಕೆ ಅನಿಲ ಆರ್ಥಿಕತೆ ಹಾಗೂ ನೀಲಿ ಆರ್ಥಿಕತೆಗಳು ಪೂರಕವಾಗಿವೆ’ ಎಂದು ಅಭಿಪ್ರಾಯಪಟ್ಟರು.

ಒಂದು ದೇಶದ ಒಂದು ಅನಿಲ ಸ್ಥಾವರ ಯೋಜನೆಯಡಿ ಪೈಪ್‌ಲೈನ್‌ ವಿಸ್ತರಣೆಗೆ ಆದ್ಯತೆ ನೀಡಲಾಗಿದೆ. ಅಗ್ಗದ ದರದಲ್ಲಿ ಪರಿಸರ ಸ್ನೇಹಿ ನೈಸರ್ಗಿಕ ಅನಿಲ ದೊರೆಯಲಿದ್ದು, ಕೈಗಾರಿಕೆ, ಗೃಹ ಬಳಕೆ, ಸಾರಿಗೆ ವ್ಯವಸ್ಥೆಯಲ್ಲಿ ಸ್ವಚ್ಛ ಇಂಧನ ಉಪಯೋಗ ಆಗಲಿದೆ. ಇದ ರಿಂದ ಪರಿಸರ ಮಾಲಿನ್ಯ ನಿಯಂತ್ರಣ ವಾಗಲಿದೆ. ಜನರ ಆರೋಗ್ಯವೂ ಸುಧಾರಿಸಲಿದ್ದು, ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ. ದೇಶದ ಕರಾವಳಿಯಲ್ಲಿ ನೀಲಿ ಆರ್ಥಿಕ ತೆಗೆ ಉತ್ತೇಜನ ನೀಡುವ ಮೂಲಕ ಕಡಲ ತೀರದಲ್ಲಿ ವಾಸಿಸುವ ಮೀನು ಗಾರರ ಅಭಿವೃದ್ಧಿಗೂ ಯೋಜನೆ ರೂಪಿಸಲಾಗಿದೆ. ಮತ್ಸ್ಯ ಸಂಪತ್ತಿನ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಗುಣಮಟ್ಟದ ಸಂಸ್ಕರಿತ ಮತ್ಸ್ಯಾಹಾರದ ಹಬ್‌ ಆಗಿ ಭಾರತವನ್ನು ಅಭಿವೃದ್ಧಿಪಡಿಸಲು ರೂಪುರೇಷೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

‘ಸಮನ್ವಯಕ್ಕೆ ಉತ್ತಮ ಉದಾಹರಣೆ’

ಪೈಪ್‌ಲೈನ್‌ನಿಂದ ಕೇರಳ ಮತ್ತು ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ. ಅಭಿವೃದ್ಧಿ ಆದ್ಯತೆ ನೀಡಿ, ಎಲ್ಲರೂ ಕೈಜೋಡಿಸಿದಲ್ಲಿ ಯೋಜನೆ ಕಾರ್ಯಗತವಾಗಲಿದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಒತ್ತು ನೀಡಲಾಗುತ್ತಿದೆ. ಗಾಳಿ, ಸೌರ ವಿದ್ಯುತ್ ಜೊತೆಗೆ, ಎಥೆನಾಲ್‌ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ. ದೇಶದಲ್ಲಿ 16 ಸಾವಿರ ಕಿ.ಮೀ. ಹೊಸ ಪೈಪ್‌ಲೈನ್ ಮೂಲಕ ನೈಸರ್ಗಿಕ ಅನಿಲ ಬಳಕೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು