ಮಂಗಳವಾರ, ಮಾರ್ಚ್ 9, 2021
29 °C
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಆಗಮನ, ತಿಮ್ಮಯ್ಯ ಯಶೋಗಾಥೆ ಬಿಂಬಿಸುವ ಪ್ರಯತ್ನ

ಲೋಕಾರ್ಪಣೆಗೆ ಜನರಲ್ ಕೆ.ಎಸ್. ತಿಮ್ಮಯ್ಯ ಮ್ಯೂಸಿಯಂ ಸಜ್ಜು

ಅದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯು ‘ಯೋಧರ ನಾಡು’ ಎಂದು ಕರೆಯಲ್ಪಡುತ್ತಿದ್ದು, ಈ ಖ್ಯಾತಿಗೆ ಮತ್ತೊಂದು ವಿಶೇಷ ಸೇರುತ್ತಿದೆ. ಅಪ್ರತಿಮ ಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಜನಿಸಿದ್ದ ಮಡಿಕೇರಿಯ ‘ಸನ್ನಿಸೈಡ್’ ನಿವಾಸವು ‘ಜನರಲ್ ತಿಮ್ಮಯ್ಯ ಸ್ಮಾರಕ ಭವನ’ವಾಗಿ ರೂಪುಗೊಂಡಿದೆ. ಜಾಗದ ಕೊರತೆ, ಅನುದಾನ ಸಮಸ್ಯೆಯಿಂದ ಕುಂಟುತ್ತಾ ಸಾಗಿದ್ದ ಕಾಮಗಾರಿಯು ಕೊನೆಗೂ ಪೂರ್ಣಗೊಂಡಿದ್ದು ಫೆ.6ರಂದು ಲೋಕಾರ್ಪಣೆ ಆಗುತ್ತಿದೆ.

ಮ್ಯೂಸಿಯಂ ಉದ್ಘಾಟನೆಗೆ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರೂ ಆಗಿರುವ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೇ ಮಡಿಕೇರಿಗೆ ಆಗಮಿಸುತ್ತಿದ್ದಾರೆ. ಅಂದು ಮಧ್ಯಾಹ್ನ 3.15ಕ್ಕೆ ಮ್ಯೂಸಿಯಂ ಉದ್ಘಾಟನೆಗೊಳ್ಳಲಿದೆ.

ಜನರಲ್‌ ತಿಮ್ಮಯ್ಯ ಅವರ ಬದುಕು, ಸಾಧನೆ, ದೇಶ ಸೇವೆಯು ಮ್ಯೂಸಿಯಂನಲ್ಲಿ ಅನಾವರಣಗೊಂಡಿದೆ. ‘ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ, ಜನರಲ್‌ ತಿಮ್ಮಯ್ಯ ಫೋರಂ’ ಸದಸ್ಯರ ಅವಿರತ ಪ್ರಯತ್ನದಿಂದ ಮ್ಯೂಸಿಯಂ ತಲೆಯೆತ್ತಿದೆ.

ರಾಜ್ಯ ಸರ್ಕಾರವು 2006ರಲ್ಲಿ ತಿಮ್ಮಯ್ಯ ಅವರ ನಿವಾಸವನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸುವ ಯೋಜನೆ ಪ್ರಕಟಿಸಿತ್ತು. ಆದರೆ, ತಿಮ್ಮಯ್ಯ ಅವರ ನಿವಾಸ ‍ಪಕ್ಕದಲ್ಲಿಯೇ ಆರ್‌ಟಿಒ ವಸತಿ ಗೃಹವಿತ್ತು. ಆ ಜಾಗ ಪಡೆದುಕೊಳ್ಳಲು ಸಾಕಷ್ಟು ಕಸರತ್ತು ನಡೆಸಬೇಕಾಯಿತು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆರ್‌ಟಿಒಗೆ ಸೇರಿದ ಜಾಗವನ್ನು ಸ್ಮಾರಕಕ್ಕೆ ಬಿಟ್ಟು ಕೊಡಲಾಯಿತು. ಒಟ್ಟು 15 ವರ್ಷಗಳ ಹಿಂದೆ ಪ್ರಕಟಿಸಿದ್ದ ಯೋಜನೆಯು ಈಗ ಸಾಕಾರಗೊಂಡಿದೆ.

ಯುದ್ಧ ಟ್ಯಾಂಕ್‌ ಆಕರ್ಷಣೆ:
‘ಸನ್ನಿಸೈಡ್‌’ನಲ್ಲಿ ಯುದ್ಧ ಟ್ಯಾಂಕ್‌ ಆಕರ್ಷಣೆಯಲ್ಲಿ ಒಂದಾಗಿದೆ. ಪ್ರವೇಶ ದ್ವಾರದಲ್ಲಿಯೇ ಟ್ಯಾಂಕ್‌ ಇಡಲಾಗಿದೆ. ಮಹಾರಾಷ್ಟ್ರದ ಪುಣೆಯ ಕೀರ್ಕಿ ಸೇನಾ ಕೇಂದ್ರದಿಂದ ಸನ್ನಿಸೈಡ್‌ಗೆ ಎರಡು ವರ್ಷಗಳ ಹಿಂದೆ ತರಲಾಗಿತ್ತು. ಈ ಟ್ಯಾಂಕ್‌ 1971ರಲ್ಲಿ ಭಾರತ–ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ‘ಹಿಮತ್‌’ ಹೆಸರಿನಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಗೋಣಿಕೊಪ್ಪಲಿನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸೇನಾಧಿಕಾರಿಗಳು ಸ್ಮಾರಕಕ್ಕೆ ಯುದ್ಧ ಟ್ಯಾಂಕ್‌ ಕಳುಹಿಸುವ ಭರವಸೆ ನೀಡಿದ್ದರು. ಅದರಂತೆ ಯುದ್ಧ ಟ್ಯಾಂಕ್‌ ಬಂದಿತ್ತು.

ಹಳೆಯ ಮನೆಯನ್ನೇ ಯಥಾಸ್ಥಿತಿ ಕಾಪಾಡಿಕೊಂಡು, ಮ್ಯೂಸಿಯಂ ಅಭಿವೃದ್ಧಿ ‍ಪಡಿಸಲಾಗಿದೆ. ತಿಮ್ಮಯ್ಯ ಅವರ ಹುಟ್ಟಿನಿಂದ ಅವರ ಬದುಕು-ಸಾಹಸ ಸಾಧನೆಗಳ ಯಶೋಗಾಥೆ ಬಿಂಬಿಸುವ ಪ್ರಯತ್ನ ಮಾಡಲಾಗಿದೆ ಎಂದು ಫೋರಂನ ಸದಸ್ಯರು ಮಾಹಿತಿ ನೀಡುತ್ತಾರೆ.

ಮನೆ ಒಳಭಾಗದ ವಿನ್ಯಾಸ ವಿವಿಧ ಬಗೆಯ ಆಯುಧಗಳು, ಭಾವಚಿತ್ರಗಳು ಗಮನ ಸೆಳೆಯಲಿದೆ. ಆಡಿಯೊ, ವಿಡಿಯೊ ಮೂಲಕದ ಮಾಹಿತಿಗಳೂ ಇಲ್ಲಿ ಲಭ್ಯವಾಗಲಿವೆ. ಸನ್ನಿಸೈಡ್‌ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ.

ಮಿಗ್‌ 21...
ಮತ್ತೊಂದು ಆಕರ್ಷಣೆಯೆಂದರೆ ‘ಮಿಗ್ 21’ ಯುದ್ಧ ವಿಮಾನ. ಅದು ಸಹ ಸನ್ನಿಸೈಡ್‌ನಲ್ಲಿದೆ. ಈ ಯುದ್ಧ ವಿಮಾನವು 1971ರ ಭಾರತ –ಪಾಕ್‌ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 15 ವರ್ಷಗಳ ಹಿಂದೆಯೇ ಈ ವಿಮಾನವನ್ನು ಸೇವೆಯಿಂದ ಹೊರಗಿಡಲಾಗಿತ್ತು. ಈಗಿನ ಲೆಕ್ಕದಲ್ಲಿ ಅದಕ್ಕೆ ಅಂದಾಜು ₹ 40ರಿಂದ 45 ಲಕ್ಷ ಬೆಲೆಯಿದೆ. ಭಾರತೀಯ ಸೇನೆಯ ಯೋಧರು ಬಳಸಿದ 24 ಶಸ್ತ್ರಾಸ್ತ್ರಗಳ ಮ್ಯೂಸಿಯಂನಲ್ಲಿವೆ. ಫೆ.6ರ ಬಳಿಕ ಇವುಗಳನ್ನು ಸ್ಥಳೀಯರು, ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.

50ರಿಂದ 60 ವರ್ಷಗಳ ಹಿಂದಿನ ಲೈಟ್‌ ಮಿಷನ್‌ ಗನ್‌, ಮೀಡಿಯಂ ಮಿಷನ್ ಗನ್‌, ಸೆಲ್ಫ್ ಲೋಡಿಂಗ್ ರೈಫಲ್‌ಗಳು, 7.62 ಮತ್ತು 303 ಬ್ಯಾರಲ್‌ ರೈಫಲ್‌ಗಳು, ರಾಕೆಟ್ ಲಾಂಚರ್‌, 32 ಎಂ.ಎಂ ರೈಫಲ್, ಪಾಯಿಂಟ್ 38 ರೈಫಲ್‌ಗಳು ಮ್ಯೂಸಿಯಂನಲ್ಲಿವೆ. ಇವುಗಳನ್ನೂ ಹತ್ತಿರದಿಂದಲೇ ನೋಡಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು