ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಳೆ’: ಎಸ್ಸೆಸ್ಸೆಲ್ಸಿಯಲ್ಲಿ ಭರ್ಜರಿ ಬೆಳೆ

ಕೂಲಿ ಮಾಡಿ ಸಾಧನೆಗೈದ ಯಾದಗಿರಿಯ ವಿದ್ಯಾರ್ಥಿ ಮಹೇಶನಿಗೆ ₹5 ಸಾವಿರ ಪುರಸ್ಕಾರ
Last Updated 11 ಆಗಸ್ಟ್ 2020, 20:53 IST
ಅಕ್ಷರ ಗಾತ್ರ

ಬೆಂಗಳೂರು: ಪುಟ್ಟ ಗುಡಿಸಲಿನಲ್ಲಿದ್ದು, ಕಟ್ಟಡ ನಿರ್ಮಾಣದಲ್ಲಿ ಕೂಲಿ ಮಾಡುತ್ತಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು 625ಕ್ಕೆ 616 ಅಂಕ ಗಳಿಸಿದ ಜೀವನ ಬಿಮಾನಗರದ ಸರ್ಕಾರಿ ಕರ್ನಾಟಕ ಪಬ್ಲಿಕ್‌ ಶಾಲೆಯ (ಕೆಪಿಎಸ್‌) ವಿದ್ಯಾರ್ಥಿ ಮಹೇಶನ ಮನೆಗೆ ಮಂಗಳವಾರ ಭೇಟಿ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌, ₹ 5 ಸಾವಿರ ನಗದು ಪುರಸ್ಕಾರ ನೀಡಿ ಅಭಿನಂದಿಸಿದರು.

ಈ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ಸಚಿವರು, ‘ಮಹೇಶ, ಯಾದಗಿರಿ ಯಿಂದ ಬೆಂಗಳೂರಿಗೆ ಗುಳೆ ಬಂದಿರುವ ಕುಟುಂಬಕ್ಕೆ ಸೇರಿದ ಬಾಲಕ. ಬಡತನದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿ ಭೇಷ್‌ ಎನಿಸಿಕೊಂಡಿದ್ದಾನೆ. ಅವನ ತಾಯಿ ಅವರಿವರ ಮನೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದಾರೆ. ಮಹೇಶ ಕೂಡಾ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡೇ ಇದು ವರೆಗೆ ವಿದ್ಯಾಭ್ಯಾಸ ಮುಗಿಸಿದ್ದಾನೆ. ಇಂದು ಅವನ ಮನೆಯೆಂದು ಕರೆಯ ಬಹುದಾದ ಪುಟ್ಟ ಗುಡಿಸಲಿಗೆ ನಾನೇ ಹೋಗಿದ್ದೆ. ಮನೆಯಲ್ಲಿ ಕುಳಿತುಕೊಳ್ಳಲು ಜಾಗವಿಲ್ಲ. ಮಹೇಶನಿಗೆ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸಿ, ಕಾಲೇಜು ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದಾಗಿ ಧೈರ್ಯ ತುಂಬಿ ಬಂದಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.

‘ಮಹೇಶನಿಗೆ ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ಓದಬೇಕೆಂಬ ಮಹದಾಸೆಯಿದೆ. ಅವನ ಮನೆ, ಅವನ ಕುಟುಂಬ, ಅವನ ತಾಯಿಯ ಮುಗ್ಧತೆ, ಮಹೇಶನ ಸಾಧನೆ ಎಲ್ಲ ಕಂಡಾಗ ಕಣ್ತುಂಬಿ ಬಂತು. ಅದೇ ರೀತಿ ಹೃದಯ ತುಂಬಿ ಬಂತು’ ಎಂದೂ ಸಚಿವರು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT