ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿದ್ದ ಅರ್ಜಿ ವರ್ಗಾವಣೆ

Last Updated 18 ಫೆಬ್ರುವರಿ 2021, 20:47 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಹಾಗೂ ಆಸ್ತಿಯ ಮಾಹಿತಿ ಮುಚ್ಚಿಟ್ಟ ಆರೋಪದಡಿ ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಕೆ.ಸಿ. ನಾರಾಯಣ ಗೌಡ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ಮುಂದಿನ ಕ್ರಮಕ್ಕಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರ್ಗಾಯಿಸಿದ್ದಾರೆ.

ಜನವರಿ 13ರಂದು ಹಲವು ದಾಖಲೆಗಳೊಂದಿಗೆ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದ ದಿನೇಶ್, ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವರ ವಿರುದ್ಧ ವಿಚಾರಣೆ ಆರಂಭಿಸಲು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಅಡಿಯಲ್ಲಿ ಅನುಮತಿ ನೀಡುವಂತೆ ಕೋರಿದ್ದರು. ಈ ಅರ್ಜಿಯನ್ನು ಫೆಬ್ರುವರಿ 15ರಂದು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅವರಿಗೆ ವರ್ಗಾಯಿಸಿರುವ ರಾಜ್ಯಪಾಲರು, ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

‘2013, 2014 ಮತ್ತು 2015ರಲ್ಲಿ ನಾರಾಯಣ ಗೌಡ ಅವರು ಲೋಕಾಯುಕ್ತ, ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಗಳಿಗೆ ಸಲ್ಲಿಸಿದ್ದ ಮಾಹಿತಿಯನ್ನು ಕಲೆಹಾಕಲಾಗಿದೆ. ನಂತರದಲ್ಲಿ ಅವರು ಸಲ್ಲಿಸಿರುವ ಆಸ್ತಿ ಮತ್ತು ಆದಾಯದ ವಿವರಗಳನ್ನೂ ಸಂಗ್ರಹಿಸಿ ತಾಳೆ ಮಾಡಲಾಗಿದೆ. 2013ರಲ್ಲಿ ವಾರ್ಷಿಕ ₹ 5 ಲಕ್ಷ ಆದಾಯ ಘೋಷಿಸಿಕೊಂಡಿದ್ದರು. 2017ರಲ್ಲಿ ವಾರ್ಷಿಕ ಆದಾಯದ ಮೊತ್ತ ₹ 5 ಕೋಟಿಗೆ ಏರಿಕೆಯಾಗಿದೆ. ಕೆಲವು ಆಸ್ತಿಗಳ ವಿವರಗಳನ್ನು ಚುನಾವಣಾ ಆಯೋಗ, ಲೋಕಾಯುಕ್ತರಿಗೆ ಸಲ್ಲಿಸದೇ ಗೋಪ್ಯವಾಗಿ ಇಟ್ಟಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಚಿವರು ಮತ್ತು ಅವರ ಕುಟುಂಬದವರು ಮುಂಬೈನಲ್ಲಿ ಹೆಚ್ಚಿನ ಸಂಖ್ಯೆಯ ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದಾರೆ. ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದು, ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ದಿನೇಶ್ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT