ಭಾನುವಾರ, ನವೆಂಬರ್ 1, 2020
20 °C

ವೇತನ, ಭತ್ಯೆ ಪರಿಷ್ಕರಣೆಗೆ ಒಪ್ಪಿದ ಸರ್ಕಾರ: ಮುಷ್ಕರ ಕೈಬಿಟ್ಟ ವೈದ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Doctors

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ವೈದ್ಯರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದು,  ನಾಲ್ಕು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ವೈದ್ಯರು ಶುಕ್ರವಾರ ಕೈಬಿಟ್ಟಿದ್ದಾರೆ.

ಆರೋಗ್ಯ ಸಚಿವ ಬಿ. ಶ್ರೀರಾಮುಲು ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ  ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಗುಳೂರು ಶ್ರೀನಿವಾಸ್,‌ ಮುಷ್ಕರ ಹಿಂಪಡೆಯುವ ನಿರ್ಧಾರ ಪ್ರಕಟಿಸಿದರು. ಇದೇ 21ರಂದು ಹಮ್ಮಿಕೊಂಡಿದ್ದ ವೈದ್ಯರ ಬೆಂಗಳೂರು ಚಲೋ ರ‍್ಯಾಲಿಯನ್ನು ರದ್ದುಗೊಳಿಸಿರುವುದಾಗಿಯೂ ತಿಳಿಸಿದರು.

ವೈದ್ಯರ ವೇತನ ಪರಿಷ್ಕರಿಸಬೇಕು ಮತ್ತು ಅನ್ಯ ಕಾರ್ಯನಿಮಿತ್ತ ನಿಯೋಜನೆ, ರಜೆ ಹಾಗೂ ಉನ್ನತ ವ್ಯಾಸಂಗಕ್ಕೆ ತೆರಳಿದ ಸಮಯದಲ್ಲೂ ಭತ್ಯೆ ನೀಡಬೇಕು ಎಂಬ ಬೇಡಿಕೆಗಳನ್ನು ಸರ್ಕಾರಿ ವೈದ್ಯರು ಇರಿಸಿದ್ದರು. ಕೋವಿಡ್‌ ತಪಾಸಣೆಯ ಗುರಿ ನಿಗದಿ ಮಾಡಿ ವೈದ್ಯರ ಮೇಲೆ ಒತ್ತಡ ಹೇರದಂತೆಯೂ ಆಗ್ರಹಿಸಿದ್ದರು.

‘ವೈದ್ಯರ ವಿಶೇಷ ಭತ್ಯೆಯ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಇದಕ್ಕಾಗಿ ₹ 125 ಕೋಟಿಯಷ್ಟು ವೆಚ್ಚವಾಗಲಿದೆ. ಈ ಬೇಡಿಕೆಯನ್ನು ಈಡೇರಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸೂಚಿಸಿದ್ದಾರೆ. ವೈದ್ಯರ ವೇತನ ಪರಿಷ್ಕರಣೆಗೂ ಕ್ರಮ ಕೈಗೊಳ್ಳಲು ಒಪ್ಪಿಗೆ ನೀಡಿದ್ದಾರೆ’ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

‘ಕೊರೊನಾ  ನಿಯಂತ್ರಣದಲ್ಲಿ ವೈದ್ಯರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಜನಸಾಮಾನ್ಯರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ವೈದ್ಯರು ಮುಷ್ಕರವನ್ನು ಕೈಬಿಟ್ಟಿದ್ದು, ಕೋವಿಡ್‌ ಸಂಬಂಧಿತ ಸೇವೆಗಳು ನಿರಂತರವಾಗಿ ಮುಂದುವರಿಯಲಿವೆ’ ಎಂದರು.

ಮಾರ್ಗಸೂಚಿಯಂತೆ ಪರೀಕ್ಷೆ: ಕೋವಿಡ್‌–19 ಸೋಂಕು ಪತ್ತೆಯಾದವರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರ ಪತ್ತೆಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಾರ್ಗಸೂಚಿ ಪಾಲಿಸುವುದಾಗಿ ವೈದ್ಯರು ಒಪ್ಪಿಕೊಂಡಿದ್ದಾರೆ.

ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್‌ ಸಭೆಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು