ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಕೇಜ್‌ ಹೆಸರಿನಲ್ಲಿ ಜನರಿಗೆ ಟೋಪಿ: ಎಚ್‌.ಡಿ. ಕುಮಾರಸ್ವಾಮಿ ಟೀಕೆ

Last Updated 19 ಮೇ 2021, 8:52 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ರಾಜ್ಯ ಸರ್ಕಾರದ ಘೋಷಿಸಿರುವ ಪ್ಯಾಕೇಜ್‌ಸಮರ್ಪಕವಾಗಿಲ್ಲ. ಪ್ಯಾಕೇಜ್‌ ಹೆಸರಿನಲ್ಲಿ ಜನರಿಗೆ ಟೋಪಿ ಹಾಕುವ ಕೆಲಸ ನಡೆಯುತ್ತಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬುಧವಾರ ಘೋಷಿಸಿರುವ ಪ್ಯಾಕೇಜ್‌ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ‘ಕಳೆದ ವರ್ಷವೂ ರಾಜ್ಯ ಸರ್ಕಾರ ಇದೇ ರೀತಿ ಪ್ಯಾಕೇಜ್‌ ಘೋಷಿಸಿ ವಂಚಿಸಿತ್ತು. ಈಗ ಮತ್ತೊಮ್ಮೆ ನಾಟಕೀಯ ಪ್ಯಾಕೇಜ್‌ ಘೋಷಿಸುವ ಮೂಲಕ ಜನರಿಗೆ ಟೋಪಿ ಹಾಕಿದೆ’ ಎಂದಿದ್ದಾರೆ.

ಕಳೆದ ವರ್ಷವೂ ₹ 1,200 ಕೋಟಿ ಪ್ಯಾಕೇಜ್‌ ಘೋಷಿಸಲಾಗಿತ್ತು. ಆದರೆ, ಸರಿಯಾಗಿ ಅನುಷ್ಠಾನಕ್ಕೆ ತಂದಿರಲಿಲ್ಲ. ಈ ಬಾರಿಯೂ ₹ 1,200 ಕೋಟಿ ಮೊತ್ತದ ಪ್ಯಾಕೇಜ್‌ ಘೋಷಿಸಲಾಗಿದೆ. ರಾಜ್ಯದಲ್ಲಿ 55 ಲಕ್ಷ ಶ್ರಮಿಕ ಕುಟುಂಬಗಳಿವೆ. ಆದರೆ, ಅತ್ಯಲ್ಪ ಪ್ರಮಾಣದ ಜನರಿಗೆ ನೆರವು ಘೋಷಿಸಲಾಗಿದೆ. ಯಾವ ಆಧಾರದಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕಳೆದ ವರ್ಷ 7.5 ಲಕ್ಷ ಆಟೊ ಚಾಲಕರಿಗೆ ನೆರವು ಘೋಷಿಸಲಾಗಿತ್ತು. ಈ ಬಾರಿ 2.10 ಲಕ್ಷ ಚಾಲಕರಿಗೆ ಮಾತ್ರ ನೆರವು ಪ್ರಕಟಿಸಲಾಗಿದೆ. ನೆರವಿನ ಮೊತ್ತವನ್ನು ₹ 5,000ದಿಂದ ₹ 3,000ಕ್ಕೆ ಇಳಿಕೆ ಮಾಡಲಾಗಿದೆ. ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ನೀಡುತ್ತಿದ್ದ ಪರಿಹಾರವನ್ನು ₹ 25,000ದಿಂದ ₹ 10,000ಕ್ಕೆ ತಗ್ಗಿಸಲಾಗಿದೆ. ಈ ಪ್ಯಾಕೇಜ್‌ನಿಂದ ಯಾರಿಗೂ ಒಳಿತಾಗುವುದಿಲ್ಲ ಎಂದು ಟೀಕಿಸಿದ್ದಾರೆ.

ಬಿಜೆಪಿಯ ನಾಯಕರ ಮನೆಯ ಹಣ ತಂದು ಪರಿಹಾರ ನೀಡುವುದಿಲ್ಲ. ರಾಜ್ಯದ 6.5 ಕೋಟಿ ಜನರ ತೆರಿಗೆ ಹಣವನ್ನು ನೀಡಲಾಗುತ್ತದೆ. ಎಲ್ಲ ಕುಟುಂಬಗಳಿಗೂ ತಲಾ ₹ 10,000 ಪರಿಹಾರ ನೀಡಬೇಕು. ನಿಗಮ, ಮಂಡಳಿಗಳ ನೇಮಕಾತಿ ರದ್ದುಗೊಳಿಸಿ ಆ ಹಣವನ್ನೂ ಪ್ಯಾಕೇಜ್‌ಗೆ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT