ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಸಲಹೆಯಂತೆ ಸರ್ಕಾರ ಲಾಕ್ ಡೌನ್ ಮಾಡಿಲ್ಲ: ಡಿ.ಕೆ. ಶಿವಕುಮಾರ್‌

Last Updated 21 ಏಪ್ರಿಲ್ 2021, 8:28 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ನಿಯಂತ್ರಣ ವಿಚಾರದಲ್ಲಿ ತಜ್ಞರ ಸಮಿತಿ ನೀಡಿದ ಸಲಹೆಯಂತೆ ಹೋಗಬೇಕು ಎಂದು ರಾಜ್ಯ ಸರ್ಕಾರಕ್ಕೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಲಾಕ್‌ಡೌನ್ ಮಾಡಲು ಅವರ (ಸರ್ಕಾರ) ಚಿಂತನೆ ಇತ್ತು ಎಂದು ಕಾಣುತ್ತೆ. ಪ್ರಧಾನಿ ಕೊಟ್ಟ ಸಲಹೆಯಂತೆ ಅವರು ಲಾಕ್ ಡೌನ್ ಮಾಡಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸದಾಶಿವನಗರದಲ್ಲಿರುವ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‌‘ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಜನ ಪಾಲಿಸಬೇಕು’ ಎಂದರು.

‘ಒಬ್ಬ‌ ಸಚಿವರು ಜಿಲ್ಲೆಗಳಿಗೆ ಹೋಗಿ ಕೋವಿಡ್ ಬಗ್ಗೆ ಸಭೆ ಮಾಡಿಲ್ಲ. ಆಸ್ಪತ್ರೆಗೆ ಹೋಗಿ ಜನರ ಸಮಸ್ಯೆ ಕೇಳಿಲ್ಲ. ಅಗತ್ಯ ಸೇವೆಯ ಇಲಾಖೆಯಲ್ಲಿರುವ ಅಧಿಕಾರಿಗಳನ್ನು ಬಿಟ್ಟು ಬೇರೆ ಇಲಾಖೆ ಅಧಿಕಾರಿಗಳನ್ನು ಕೋವಿಡ್ ನಿರ್ವಹಣೆ ಬಳಸಿಕೊಳ್ಳಲು ಸರ್ಕಾರಕ್ಕೆ ಏನಾಗಿದೆ’ ಎಂದು ಪ್ರಶ್ನಿಸಿದರು.

‘ಇದು ರಾಜ್ಯಪಾಲರ ಆಡಳಿತ ಎಂದು ವಿರೋಧ ಪಕ್ಷದ ನಾಯಕ ಹೇಳಿದ್ದಾರೆ. ಪ್ರಧಾನಿ ಹೇಳಿದ ತಕ್ಷಣ ಕಾನೂನು ಬದಲಾವಣೆ ಮಾಡೋಕೆ‌ ಆಗುತ್ತಾ. ನಾವು ರಾಜಕಾರಣ ಮಾಡಬಾರದು ಅಂತ ಸುಮ್ಮನಿದ್ದೇವೆ. ಬೆಡ್‌ಗಳು, ಆಕ್ಸಿಜನ್ ಕೊರತೆ ಸಾಕಷ್ಟು ಇದೆ. ಇದು ಸರ್ಕಾರದ ಸಂಪೂರ್ಣ ವೈಫಲ್ಯ’ ಎಂದರು.

‘ಸರ್ಕಾರದ ವೈಫಲ್ಯ ಬಗ್ಗೆ ನಾನು ಸರ್ವಪಕ್ಷ ಸಭೆಯಲ್ಲಿ ರಾಜ್ಯಪಾಲರ ಮುಂದೆ ಹೇಳಿದ್ದೇನೆ. ಸರ್ಕಾರ ವಿಫಲವಾಗಿರುವುದಕ್ಕೆ ಕೊರೊನಾ ಸಂಖ್ಯೆಯೇ ಸಾಕ್ಷಿ. ನಿನ್ನೆ (ಮಂಗಳವಾರ) ಪ್ರಧಾನಿ ಮಾಡಿದ ಭಾಷಣ, ಖರ್ಗೆ ಅವರು ಹೇಳಿದ ಹಾಗೆ ಪ್ರವಚನ’ ಎಂದರು.

‘ಬೆಂಗಳೂರಿನಲ್ಲೆ ಕೋವಿಡ್‌ ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ಮೃತರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ಮಾಡಲು ಸರ್ಕಾರ ವಿಫಲವಾಗಿದೆ. ಬೆಂಗಳೂರಿನ ಹೊರಗೆ ಹತ್ತು ಎಕರೆ ಜಾಗ ಗುರುತಿಸಿ. ಅಲ್ಲಿ ಕಟ್ಟಿಗೆ ವ್ಯವಸ್ಥೆ ಮಾಡಿ, ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಬೇಕು. ಅದನ್ನು ಮಾಡಬೇಕೆಂಬ ಸಾಮಾನ್ಯ ಜ್ಞಾನವೂ ಈ ಸರ್ಕಾರಕ್ಕೆ ಇಲ್ಲ’ ಎಂದು ದೂರಿದರು.

’ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಕೋವಿಡ್‌ಗೆ ಮೃತಪಟ್ಟಾಗ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅವರ ಮನೆಯವರು ಮುಖ ನೋಡದ ಹಾಗೆ ಮಾಡಿಬಿಟ್ಟಿದ್ದರು. ರಾಜಕೀಯ ಇಷ್ಟು ದಿನ ಮಾತನಾಡುವುದು ಬೇಡ ಅಂದುಕೊಂಡಿದ್ದೆ’ ಎಂದೂ ಶಿವಕುಮಾರ್‌ ಹೇಳಿದರು.

ಗೆಲ್ಲುವ ನಿರೀಕ್ಷೆ ಇದೆ: ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ‘ಬೆಳಗಾವಿ ಲೋಕಸಭೆ ಕ್ಷೇತ್ರದ ಚುನಾವಣೆ ಬಳಿಕ ಮೊದಲ ಬಾರಿಗೆ ಭೇಟಿ ಮಾಡಿದ್ದೇನೆ. ನಾನು ಗೆಲ್ಲುವ ನಿರೀಕ್ಷೆ ಇದೆ’ ಎಂದರು.

‘ಕೋವಿಡ್‌ ನಿರ್ವಹಿಸುವ ವಿಚಾರದಲ್ಲಿ ಮೊದಲಿನಿಂದಲೂ ಸರ್ಕಾರದಲ್ಲಿ ಗೊಂದಲ ಇದೆ. ಲಾಕ್ ಡೌನ್ ಗೊಂದಲ ಇದೆ ಈಗಲೂ ಇದೆ. ಮುಖ್ಯಮಂತ್ರಿ ಒಂದು ಹೇಳಿದರೆ, ಮಂತ್ರಿ ಬೇರೆ ಹೇಳುತ್ತಾರೆ. ಈಗ ರಾಜ್ಯಪಾಲರು ಬೇರೆ ಮಧ್ಯಪ್ರವೇಶಿಸಿದ್ದಾರೆ. ಒಟ್ಟಾರೆ ತೀರ್ಮಾನ ಇಲ್ಲ’ ಎಂದರು.
‘ಕೊರೊನಾ ನಿಯಂತ್ರಣ ಆಗುವವರೆಗೂ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ಮುಂದೂಡಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT