ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ವೈದ್ಯರ ’ಅಸಹಕಾರ’: ವೇತನ ಪರಿಷ್ಕರಣೆಗೆ ಒತ್ತಾಯ

ಸಿಜಿಎಚ್‌ಸಿ ಮಾದರಿ ವೇತನ ಪರಿಷ್ಕರಣೆಗೆ ಸರ್ಕಾರಕ್ಕೆ ಒತ್ತಾಯ
Last Updated 12 ಸೆಪ್ಟೆಂಬರ್ 2020, 19:25 IST
ಅಕ್ಷರ ಗಾತ್ರ

ಬೆಂಗಳೂರು: ವೇತನ ಪರಿಷ್ಕರಣೆಗೆ ಸರ್ಕಾರ ಕ್ರಮಕೈಗೊಂಡಿಲ್ಲ ಎಂಬಕಾರಣಕ್ಕೆ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 4,968 ವೈದ್ಯರು ಮಂಗಳವಾರದಿಂದ (ಸೆ.15) ಎಲ್ಲ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ.

ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್‌) ಮಾದರಿಯಲ್ಲಿ ವೇತನವನ್ನು ಪರಿಷ್ಕರಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿತ್ತಲ್ಲದೇ, ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿತ್ತು.

;ಸರ್ಕಾರವು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಂಘದ ಅಧ್ಯಕ್ಷ ಡಾ.ಜಿ.ಎ. ಶ್ರೀನಿವಾಸ್ ನೇತೃತ್ವದಲ್ಲಿ ಶನಿವಾರ ಸಭೆ ನಡೆಸಿ ವೈದ್ಯರು, ಆನ್‌ಲೈನ್‌ ಸಹಿತ ಎಲ್ಲ ಸರ್ಕಾರಿ ಸಭೆಗಳಿಂದ ದೂರ ಉಳಿಯುವ ತೀರ್ಮಾನಕ್ಕೆ ಬಂದಿದ್ದಾರೆ. ಅದೇ ರೀತಿ, ವೈದ್ಯಕೀಯ ಚಿಕಿತ್ಸೆಗಳ ವರದಿ ಸೇರಿದಂತೆ ಯಾವುದೇ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸದಿರಲು ನಿರ್ಧರಿಸಿದ್ದಾರೆ. ಕರ್ತವ್ಯಕ್ಕೆ ಹಾಜರಾಗಿ, ಎಲ್ಲ ರೀತಿಯ ವೈದ್ಯಕೀಯ ಸೇವೆಯನ್ನು ಮುಂದುವರೆಸಲಿದ್ದೇವೆ’ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

‘ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ನಿಗದಿತ ಅವಧಿಯೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಹಂತ, ಹಂತವಾಗಿ ಸೇವೆ ಸ್ಥಗಿತ ಮಾಡುವುದಾಗಿಯೂ ತಿಳಿಸಿದ್ದೆವು. ಅಷ್ಟಾಗಿಯೂ ನಮ್ಮ ಬೇಡಿಕೆಗಳು ಕಾರ್ಯಗತಗೊಂಡಿಲ್ಲ. ಆದ್ದರಿಂದ ಮೊದಲ ಹಂತದಲ್ಲಿ ಸಭೆಗಳನ್ನು ಬಹಿಷ್ಕರಿಸಲು ಮುಂದಾಗಿದ್ದೇವೆ. ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ವಿವಿಧ ಯೋಜನೆಗಳು ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಯಾವುದೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಿಲ್ಲ. ಇದೇ 21ಕ್ಕೆ ಬೆಂಗಳೂರು ಚಲೋ ಜಾಥಾ ನಡೆಸಲಿದ್ದೇವೆ’ ಎಂದು ಡಾ.ಜಿ.ಎ.ಶ್ರೀನಿವಾಸ್ ತಿಳಿಸಿದರು.

ಆಸ್ಪತ್ರೆಗಳನ್ನು ಹಸ್ತಾಂತರಿಸಿ:‘ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಏಳನೇ ವೇತನ ಆಯೋಗದ ವೇತನ ಶ್ರೇಣಿ ನೀಡಲಾಗಿದೆ. ನಮ್ಮ ವೈದ್ಯರು ವಿವಿಧೆಡೆ ಸೇವೆ ಸಲ್ಲಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಇಂಥವರಿಗೆ ಕೇಂದ್ರ ಸರ್ಕಾರದ ಸಿಜಿಎಚ್‌ಸಿ ಮಾದರಿ ವೇತನ ಪರಿಷ್ಕರಣೆ ಮಾಡುವ ಮೂಲಕ ಅವರ ನೆರವಿಗೆ ಸರ್ಕಾರ ಧಾವಿಸಬೇಕು. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಗೆ ನೀಡಿರುವ 48 ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲು ಕೂಡ ಕ್ರಮಕೈಗೊಳ್ಳಬೇಕು. ಕೋವಿಡ್ ಚಿಕಿತ್ಸೆಯ ವೇಳೆ ಸೋಂಕಿತರಾದ ವೈದ್ಯರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಹಾಸಿಗೆ, ವೆಂಟಿಲೇಟರ್ ಮೀಸಲಿಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT