ಮಂಗಳವಾರ, ಜೂನ್ 22, 2021
28 °C
ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ

ಸರ್ಕಾರದಿಂದ ಜನರ ಕೊಲೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಜ್ಞರ ವರದಿಯನ್ನು ರಾಜ್ಯದ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದ ಪರಿಣಾಮವಾಗಿ ಜನರು ಕೋವಿಡ್‌ನಿಂದ ಬೀದಿಯ ಮೇಲೆ ಸಾಯುತ್ತಿದ್ದಾರೆ. ಈ ಸಾವುಗಳು ಕೋವಿಡ್‌ನಿಂದ ಆಗುತ್ತಿವೆ ಎನ್ನುವುದಕ್ಕಿಂತ ಬಿಜೆಪಿ ಸರ್ಕಾರದ ಅದಕ್ಷತೆ ಮತ್ತು ಉಡಾಫೆಯಿಂದ ಆದ ಕೊಲೆಗಳು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೋವಿಡ್‌ ಎರಡನೇ ಅಲೆ ಸ್ಫೋಟಗೊಂಡಿರುವ ಸಂದರ್ಭದಲ್ಲಿ ಸೋಂಕಿತರ ಚಿಕಿತ್ಸೆಗೆ ನೆರವಾಗುವಂತೆ ಕಾಂಗ್ರೆಸ್‌ನ ಎಲ್ಲ ಶಾಸಕರಿಗೂ ಶುಕ್ರವಾರ ಬರೆದಿರುವ ಪತ್ರದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಅವರು, ‘ಎರಡನೇ ಅಲೆ ಸ್ಫೋಟಗೊಳ್ಳಲಿದೆ ಎಂದು ತಜ್ಞರು ಸಾಕಷ್ಟು ಮುಂಚೆ ಎಚ್ಚರಿಕೆ ನೀಡಿದ್ದರು. ಅಗತ್ಯ ಪ್ರಮಾಣದ ಪ್ರಯೋಗಾಲಯ, ಆಸ್ಪತ್ರೆಗಳನ್ನು ಸಜ್ಜುಗೊಳಿಸಿ ಹಾಸಿಗೆ, ಆಮ್ಲಜನಕ, ಐಸಿಯು, ವೆಂಟಿಲೇಟರ್‌, ಔಷಧಿಯ ವ್ಯವಸ್ಥೆ ಮಾಡಿದ್ದರೆ ಈ ಪ್ರಮಾಣದ ಸಾವುಗಳು ಸಂಭವಿಸುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಮಾಡಿದ್ದ ಅರಾಜಕ ಮತ್ತು ತುಘಲಕ್‌ ಶಾಹಿ ಆಡಳಿತವನ್ನೇ ಬಿಜೆಪಿ ಸರ್ಕಾರ ಈಗಲೂ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಕೋವಿಡ್‌ನಿಂದ ಮೃತಪಟ್ಟವರ ಗೌರವಯುತ ಅಂತ್ಯಸಂಸ್ಕಾರ ನಡೆಸಲೂ ಆಗದಂತಹ ಅರಾಜಕ ಪರಿಸ್ಥಿತಿ ನಿರ್ಮಿಸಿವೆ. ಯಾವುದೇ ಮುನ್ಸೂಚನೆ ನೀಡದೆ ಬಾಗಿಲು ಮುಚ್ಚಿಸುವುದು, ಸಚಿವರು, ಅಧಿಕಾರಿಗಳು ಬಾಯಿಗೆ ಬಂದಂತೆ ಮಾತನಾಡಿ ಗೊಂದಲ ಹುಟ್ಟಿಸುವ ಕೆಲಸವನ್ನು ಈಗಲೂ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

‘ಕೋವಿಡ್ ಸಂಕಷ್ಟದ ಕಾಲದಲ್ಲಿ ಜನರ ಕೈಯಲ್ಲಿ ಹಣ ಇಲ್ಲದಿರುವಾಗ ಸರ್ಕಾರ ಪಡಿತರ ಧಾನ್ಯದ ಪ್ರಮಾಣವನ್ನೂ ಕಡಿತ ಮಾಡಿದೆ. ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಅನ್ನ, ಆಹಾರ, ಔಷಧಿ ನೀಡಿ ನೆರವಾದಂತೆ ಈ ಬಾರಿಯೂ ಮಾಡಬೇಕು’ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಶಾಸಕರಿಗೆ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು