ಬುಧವಾರ, ಡಿಸೆಂಬರ್ 8, 2021
18 °C
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನಿರ್ಧಾರ

ಮೈ ಶುಗರ್ಸ್‌ ಎರಡು ವರ್ಷ ಸರ್ಕಾರದಿಂದ ನಿರ್ವಹಣೆ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಷ್ಟದಲ್ಲಿರುವ ಮಂಡ್ಯದ ಮೈ ಶುಗರ್ಸ್‌ ಸಕ್ಕರೆ ಕಾರ್ಖಾನೆಯನ್ನು 2022ರ ಕಬ್ಬು ಕಟಾವು ಹಂಗಾಮಿನಿಂದ ಎರಡು ವರ್ಷಗಳ ಕಾಲ ರಾಜ್ಯ ಸರ್ಕಾರದಿಂದಲೇ ನಿರ್ವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಉನ್ನತಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ಪ್ರಸ್ತಾವವನ್ನು ಕೈಬಿಡಲಾಗಿದೆ.

ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆ ವ್ಯಾಪ್ತಿಯ ರೈತರ ಕಬ್ಬನ್ನು ಖರೀದಿಸಿ, ಬೇರೆ ಸಕ್ಕರೆ ಕಾರ್ಖಾನೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಕಬ್ಬು ಅರೆಯುವುದಕ್ಕೆ ಪೂರಕವಾಗಿ ಕಾರ್ಖಾನೆಯ ಯಂತ್ರೋಪಕರಣಗಳ ದುರಸ್ತಿಗೆ ತಕ್ಷಣದಿಂದಲೇ ಕೆಲಸ ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಕೇವಲ ಒಂದು ವರ್ಷ ಸರ್ಕಾರದಿಂದ ಕಾರ್ಖಾನೆಯನ್ನು ನಿರ್ವಹಿಸುವ ಪ್ರಸ್ತಾವವನ್ನು ಮುಖ್ಯಮಂತ್ರಿಯವರು ಸಭೆಯ ಮುಂದಿಟ್ಟಿದ್ದರು. ಆದರೆ, ಕನಿಷ್ಠ ಎರಡು ವರ್ಷಗಳಾದರೂ ಸರ್ಕಾರದಿಂದ ಕಾರ್ಖಾನೆ ನಡೆಸಬೇಕು ಎಂಬ ಮಂಡ್ಯ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಮತ್ತು ರೈತ ಮುಖಂಡರ ಬೇಡಿಕೆಯನ್ನು ಒಪ್ಪಿಕೊಂಡರು.

ತಜ್ಞರ ಸಮಿತಿ ನೇಮಕ: ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ‘ಸುದೀರ್ಘವಾದ ಸಭೆ ನಡೆಸಿ, ಮೈ ಶುಗರ್ಸ್‌ ಕಾರ್ಖಾನೆಯ ಸದ್ಯದ ಸ್ಥಿತಿಗತಿ, ಆರ್ಥಿಕ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದೇನೆ. ಮುಂದಿನ ಹಂಗಾಮಿನಿಂದ ಕಬ್ಬು ಅರೆಯುವ ನಿಶ್ಚಿತವಾದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡಲಾಗುವುದು’ ಎಂದರು.

ಯಂತ್ರೋಪಕರಣಗಳ ಸದ್ಯದ ಸ್ಥಿತಿ, ದುರಸ್ತಿಗೆ ಬೇಕಿರುವ ಹಣ, ದುಡಿಯುವ ಬಂಡವಾಳ ಹೊಂದಿಸುವುದಕ್ಕೆ ಬ್ಯಾಂಕ್‌ಗಳ ಜತೆ ಚರ್ಚೆ, ಆಡಳಿತದಲ್ಲಿನ ಬದಲಾವಣೆ ಕುರಿತು ಪರಿಶೀಲಿಸಿ, ವರದಿ ನೀಡಲು ತಜ್ಞರ ಸಮಿತಿಯೊಂದನ್ನು ನೇಮಿಸಲಾಗುವುದು. ಕೇವಲ ಸಕ್ಕರೆ ಉತ್ಪಾದನೆಯಿಂದ ಲಾಭ ಸಾಧ್ಯವಿಲ್ಲ. ಮದ್ಯ ತಯಾರಿಕಾ ಘಟಕ ಮುಂದುವರಿಸುವುದು, ಎಥೆನಾಲ್‌ ಉತ್ಪಾದನೆ ಸೇರಿದಂತೆ ಮೌಲ್ಯವರ್ಧನೆ ಕುರಿತೂ ಸಮಿತಿ ವರದಿ ನೀಡಲಿದೆ ಎಂದು ತಿಳಿಸಿದರು.

ಸಮಿತಿ ನೀಡುವ ವರದಿಯನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಅಗತ್ಯ ತೀರ್ಮಾನ ಕೈಗೊಳ್ಳಲಾಗುವುದು. ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡಲು ಈ ಹಿಂದೆ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ರೈತರ ಬೇಡಿಕೆಯಂತೆ ಅದನ್ನು ಕೈಬಿಡಲಾಗಿದೆ. ಈಗ ಮತ್ತೆ ಸಂಪುಟ ಸಭೆಯಲ್ಲೇ ಪ್ರಸ್ತಾವ ಮಂಡಿಸಿ, ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.

ಕಾರ್ಖಾನೆ ನಿರ್ವಹಣೆಗೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕಿದೆ. ವ್ಯವಸ್ಥಾಪಕ ನಿರ್ದೇಶಕ, ಕೈಗಾರಿಕಾ ತಜ್ಞ ಮತ್ತು ಲೆಕ್ಕಪರಿಶೋಧಕರನ್ನು ತಕ್ಷಣವೇ ನೇಮಿಸಲಾಗುವುದು ಎಂದರು.

ಸಚಿವರಾದ ಜೆ.ಸಿ.ಮಾಧುಸ್ವಾಮಿ, ಶಂಕರ ಪಾಟೀಲ ಮುನೇನಕೊಪ್ಪ, ಕೆ.ಸಿ. ನಾರಾಯಣ ಗೌಡ, ಎಸ್‌.ಟಿ. ಸೋಮಶೇಖರ್‌, ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌, ಶಾಸಕರಾದ ಪುಟ್ಟರಾಜು, ಡಿ.ಸಿ. ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ವಿಧಾನ ಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಸಭೆಯಲ್ಲಿದ್ದರು.

‘₹369 ಕೋಟಿ ನೆರವಿನ ಭರವಸೆ’

‘ಮೈ ಶುಗರ್ಸ್ ಸಕ್ಕರೆ ಕಾರ್ಖಾನೆಯನ್ನು ಎರಡು ವರ್ಷಗಳ ಅವಧಿಗೆ ನಡೆಸಲು ₹369 ಕೋಟಿ ಅಗತ್ಯವಿದೆ. ಈ ಮೊತ್ತದ ನೆರವು ಒದಗಿಸುವುದಾಗಿ ಮುಖ್ಯಮಂತ್ರಿಯವರು ಸಭೆಯಲ್ಲಿ ಭರವಸೆ ನೀಡಿದ್ದಾರೆ’ ಎಂದು ಮೈ ಶುಗರ್ಸ್‌ ಅಧ್ಯಕ್ಷ ಶಿವಲಿಂಗೇಗೌಡ ತಿಳಿಸಿದರು.

‘ಪ್ರಾಮಾಣಿಕತೆಯಿಂದ ಕಾರ್ಖಾನೆಯನ್ನು ನಡೆಸಿದರೆ ಲಾಭ ಗಳಿಸಲು ಸಾಧ್ಯವಿದೆ. ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತೇವೆ. ಎರಡು ವರ್ಷಗಳ ಬಳಿಕವೂ ಕಾರ್ಖಾನೆ ಲಾಭದಾಯಕ ಸ್ಥಿತಿ ಬಾರದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಅಂತಹ ಪರಿಸ್ಥಿತಿ ಉದ್ಭವಿಸದಂತೆ ಕೆಲಸ ಮಾಡಬೇಕಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು