ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡುರಂಗ ಗರಗ್‌ ಅಮಾನತಿಗೆ ಹಿಂದೇಟು?: 20 ದಿನಗಳಾದರೂ ಹೊರಬೀಳದ ಆದೇಶ

ಎಸಿಬಿ ಶಿಫಾರಸು ಮಾಡಿ 20 ದಿನಗಳಾದರೂ ಹೊರಬೀಳದ ಆದೇಶ
Last Updated 19 ಮಾರ್ಚ್ 2021, 16:29 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಸಹಕಾರ ಸಂಘಗಳ ಇಲಾಖೆಯ ಜಂಟಿ ರಿಜಿಸ್ಟ್ರಾರ್‌ ಪಾಂಡುರಂಗ ಡಿ. ಗರಗ್‌ ಅವರನ್ನು ಅಮಾನತು ಮಾಡುವಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಿಫಾರಸು ಮಾಡಿ 20 ದಿನ ಕಳೆದರೂ ಸಹಕಾರ ಇಲಾಖೆ ಆದೇಶ ಹೊರಡಿಸಿಲ್ಲ.

ಪಾಂಡುರಂಗ ಗರಗ್‌ ವಿರುದ್ಧ ಫೆಬ್ರುವರಿ 1ರಂದು ಎಫ್‌ಐಆರ್‌ ದಾಖಲಿಸಿದ್ದ ಎಸಿಬಿ, ಫೆ. 2ರಂದು ಮನೆ ಮೇಲೆ ದಾಳಿಮಾಡಿ ಶೋಧ ನಡೆಸಿತ್ತು. ₹ 4.20 ಕೋಟಿ ಮೊತ್ತದ ಅಕ್ರಮ ಆಸ್ತಿ ಆರೋಪಿತ ಅಧಿಕಾರಿ ಬಳಿ ಪತ್ತೆಯಾಗಿದೆ ಎಂದು ಎಸಿಬಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್‌ ಕುಮಾರ್‌ ಸಿಂಗ್, ಫೆ.26ರಂದು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

‘ಆರೋಪಿ ಅಧಿಕಾರಿಯು ಪ್ರಸ್ತುತ ಮಲ್ಲೇಶ್ವರದ ಪ್ರಾಂತ್ಯ ಸಹಕಾರ ಸೌಧದಲ್ಲಿ ಸಹಕಾರ ಸಂಘಗಳ ಜಂಟಿ ನಿಬಂಧಕರ ಹುದ್ದೆಯಲ್ಲಿದ್ದಾರೆ. ಪಾಂಡುರಂಗ ಗರಗ್‌ ಅಕ್ರಮ ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅದೇ ಹುದ್ದೆಯಲ್ಲಿ ಮುಂದುವರಿದರೆ ಪ್ರಭಾವ ಬಳಸಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ, ಸಾಕ್ಷ್ಯಾಧಾರ ನಾಶಮಾಡುವ ಅಥವಾ ತಿರುಚುವ ಸಾಧ್ಯತೆಗಳಿವೆ. ಆದ್ದರಿಂದ ಆರೋಪಿತ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿ, ಲೀನ್‌ ಬದಲಾವಣೆ ಮಾಡಿ, ಇಲಾಖಾ ವಿಚಾರಣೆ ನಡೆಸಬೇಕು’ ಎಂದು ಸಿಂಗ್‌ ಶಿಫಾರಸು ಮಾಡಿದ್ದರು.

ಎಫ್‌ಐಆರ್‌, ಶೋಧ ಕಾರ್ಯಾಚರಣೆಯ ಮಹಜರು ವರದಿ, ಎಸಿಬಿ ಬೆಂಗಳೂರು ನಗರ ಘಟಕದ ಎಸ್‌ಪಿ ಸಲ್ಲಿಸಿದ್ದ ತನಿಖಾ ವರದಿಗಳ ಪ್ರತಿಗಳನ್ನೂ ಪತ್ರದೊಂದಿಗೆ ಕಳುಹಿಸಲಾಗಿತ್ತು. ಕರ್ನಾಟಕ ನಾಗರಿಕ ಸೇವಾ ನಿಯಮ–1957ರ ಸೆಕ್ಷನ್‌ 10(1)(ಎಎ) ಮತ್ತು ಈ ಸಂಬಂಧ 2008ರ ಆಗಸ್ಟ್‌ 26ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿದ್ದ ಅಧಿಸೂಚನೆಯನ್ನೂ ಪತ್ರದೊಂದಿಗೆ ಕಳುಹಿಸಿದ್ದರು.

‘ಆರೋಪಿ ಅಧಿಕಾರಿಯ ಅಮಾನತು, ಲೀನ್‌ ಬದಲಾವಣೆ ಹಾಗೂ ಇಲಾಖೆ ವಿಚಾರಣೆ ಆರಂಭಿಸಿ ವರದಿ ನೀಡುವಂತೆ ಸಹಕಾರ ಇಲಾಖೆಯನ್ನು ಕೋರಲಾಗಿತ್ತು. ಆದರೆ, ಕ್ರಮ ಕೈಗೊಂಡಿರುವ ಕುರಿತು ಈವರೆಗೆ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಈ ಕುರಿತು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರ ಪ್ರತಿಕ್ರಿಯೆಗೆ ಪ್ರಯತ್ನಿಸಲಾಯಿತು. ಊಟಿಯಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿರುವ ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT