ಶನಿವಾರ, ಅಕ್ಟೋಬರ್ 23, 2021
21 °C

2011ರ ಗೆಜೆಟೆಡ್‌ ಪ್ರೊಬೇಷನರಿ ಅಭ್ಯರ್ಥಿಗಳ ರಕ್ಷಣೆಗೆ ಯತ್ನ: ಜೆ.ಸಿ.ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಎಲ್ಲ ಅಭ್ಯರ್ಥಿಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಕಾನೂನು ತಜ್ಞರ ಸಲಹೆ ಆಧರಿಸಿ ಈ ವಿಚಾರದಲ್ಲಿ ಮುಂದಡಿ ಇಡಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ಅವರು ನಿಯಮ 330ರ ಅಡಿಯಲ್ಲಿ ನಡೆಸಿದ ಚರ್ಚೆಗೆ ಉತ್ತರಿಸಿದ ಸಚಿವರು, ‘2011ನೇ ಸಾಲಿನ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಆಯ್ಕೆಯಾದ ಯಾರಿಗೂ ಅನ್ಯಾಯ ಆಗಬಾರದು ಎಂಬುದು ಸರ್ಕಾರದ ನಿಲುವು. ವಿರೋಧ ಪಕ್ಷಗಳು, ಸಾರ್ವಜನಿಕರು ಎಲ್ಲರೂ ಈ ಅಭ್ಯರ್ಥಿಗಳ ಪರವಾಗಿ ಇದ್ದಾರೆ. ಹೀಗಾಗಿ ಸರ್ಕಾರ ಕೂಡ ಅವರ ಪರವಾಗಿಯೇ ನಿಂತಿದೆ’ ಎಂದರು.

ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಹೇಗೆ ರಕ್ಷಿಸಬಹುದು ಎಂಬುದರ ಕುರಿತು ಸರ್ಕಾರ ಯೋಚಿಸುತ್ತಿದೆ. ಕಾರ್ಯಕಾರಿ ಆದೇಶ ಅಥವಾ ಮಸೂದೆ ಮಂಡಿಸಿ ಈ ಎಲ್ಲರ ನೇಮಕಾತಿಯನ್ನೂ ಊರ್ಜಿತಗೊಳಿಸುವ ಸಾಧ್ಯತೆಯ ಕುರಿತು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಹಾಲಿ ಅಡ್ವೊಕೇಟ್‌ ಜನರಲ್‌ ಮತ್ತು ಮಾಜಿ ಅಡ್ವೊಕೇಟ್‌ ಜನರಲ್‌ಗಳ ಅಭಿಪ್ರಾಯ ಕೋರಲಾಗಿದೆ. ಅವರ ಸಲಹೆ ಆಧರಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು.

ಪ್ರಕ್ರಿಯೆಯಲ್ಲಿ ಲೋಪ: ಕೆಪಿಎಸ್‌ಸಿಯ ಆಗಿನ ಅಧ್ಯಕ್ಷರು ಮತ್ತು ಸದಸ್ಯರು ನಿವೃತ್ತರಾಗಿರುವುದರಿಂದ ಅವರ ವಿರುದ್ಧದ ಕ್ರಿಮಿನಲ್‌ ಪ್ರಕರಣದ ವಿಚಾರಣೆಗೆ ಅವಕಾಶವಿಲ್ಲ ಎಂಬ ತೀರ್ಮಾನ ಕೈಗೊಳ್ಳಲಾಗಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ವಿಚಾರಣೆ ನಡೆಸಲು ರಾಷ್ಟ್ರಪತಿಯವರು ಅನುಮತಿ ನೀಡಿಲ್ಲ. ನೇಮಕಾತಿ ಅಧಿಸೂಚನೆಯನ್ನು ರದ್ದುಪಡಿಸುವ ತೀರ್ಮಾನವನ್ನು ವಿಧಾನಮಂಡಲದಲ್ಲಿ ಮಂಡಿಸಿ, ಒಪ್ಪಿಗೆ ಪಡೆಯದೇ ಇರುವುದರಿಂದ ಇಡೀ ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ ಎಂದು ಮಾಧುಸ್ವಾಮಿ ಹೇಳಿದರು.

ವಿಷಯ ಪ್ರಸ್ತಾಪಿಸಿ ಮಾತನಾಡಿದ ಪಿ.ಆರ್‌. ರಮೇಶ್‌, ‘ನೇಮಕಾತಿ ಪ್ರಕ್ರಿಯೆ ನಡೆಸಲು ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಈ ವಿಷಯದಲ್ಲಿ ಸರ್ಕಾರದಿಂದ ತಪ್ಪಾಗಿದೆ. ಲೋಪ ಮುಚ್ಚಿಕೊಳ್ಳಲು 362 ಮಂದಿ ಅಭ್ಯರ್ಥಿಗಳನ್ನು ಬಲಿಪಶು ಮಾಡಬಾರದು. ತಕ್ಷಣವೇ ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿ ಆದೇಶ ನೀಡಬೇಕು. ಸೇವಾ ಜೇಷ್ಠತೆಯನ್ನೂ ನೀಡುವ ಮೂಲಕ ಅವರಿಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಒಕ್ಕೊರಲ ಬೆಂಬಲ

2011ರ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ವಿತರಿಸಬೇಕೆಂಬ ಬೇಡಿಕೆಯನ್ನು ಎಲ್ಲ ಪಕ್ಷಗಳ ಸದಸ್ಯರೂ ಬೆಂಬಲ ಸೂಚಿಸಿದರು.

‘ನೇಮಕಾತಿ ಅಧಿಸೂಚನೆಯನ್ನು ರದ್ದುಪಡಿಸುವ ಸಂದರ್ಭದಲ್ಲಿ ನಾನು ಸಚಿವನಾಗಿದ್ದೆ. ಆದರೆ, ವೈಯಕ್ತಿಕವಾಗಿ ನನ್ನ ಅಭಿಪ್ರಾಯ ಅದಕ್ಕೆ ವಿರುದ್ಧವಾಗಿತ್ತು’ ಎಂದು ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಹೇಳಿದರು.

ಬಿಜೆಪಿಯ ರುದ್ರೇಗೌಡ ಮತ್ತು ಎನ್‌. ರವಿಕುಮಾರ್‌ ಕೂಡ ರಮೇಶ್‌ ಅವರ ಆಗ್ರಹವನ್ನು ಬೆಂಬಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು