ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೃದ್ಧ ಮಳೆಗೆ ಅಂತರ್ಜಲ ಮಟ್ಟ ವೃದ್ಧಿ: 211 ತಾಲ್ಲೂಕುಗಳಲ್ಲಿ ತೀವ್ರ ಏರಿಕೆ

Last Updated 11 ಜನವರಿ 2023, 19:32 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯದಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಆದರೂ ಅಂತರ್ಜಲ ಮಟ್ಟವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಅಂತರ್ಜಲ ನಿರ್ದೇಶನಾಲಯ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ, 2022ರ ಮೇ–ನವೆಂಬರ್ ತಿಂಗಳ ಅವಧಿಯಲ್ಲಿ ರಾಜ್ಯದ 233 ಪೈಕಿ 211 ತಾಲ್ಲೂಕುಗಳ ಅಂತರ್ಜಲ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ.

‘ಕೆರೆ ತುಂಬಿಸುವ ಯೋಜನೆಗಳು ಸಹ ಅಂತರ್ಜಲ ಮಟ್ಟ ವೃದ್ಧಿಗೆ ನೆರವಾಗಿವೆ’ ಎನ್ನುತ್ತಾರೆ ಪ್ರಾಧಿಕಾರದ ಅಧಿಕಾರಿಗಳು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ದಾಖಲೆಯ 32.44 ಮೀಟರ್‌ ಏರಿಕೆ ಕಂಡಿದೆ. ಮೇ ತಿಂಗಳಲ್ಲಿ 50.38 ಮೀಟರ್ ಇದ್ದ ನೀರಿನ ಮಟ್ಟ ನವೆಂಬರ್‌ ವೇಳೆಗೆ 17.94 ಮೀಟರ್‌ಗೆ ತಲುಪಿದೆ.

ಹೊಸಕೋಟೆ, ದೇವನಹಳ್ಳಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಮಾಲೂರು, ಜಮಖಂಡಿ ಮತ್ತು ಬಾದಾಮಿ ಸೇರಿ 24 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕನಿಷ್ಠ 10 ಮೀಟರ್‌ಗಿಂತ ಹೆಚ್ಚು ಏರಿಕೆ ಆಗಿದೆ. ಪ್ರಸ್ತುತ, ರಾಜ್ಯದ 186 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ 10 ಮೀಟರ್‌ವರೆಗೆ ಇದೆ. ಮುಂಗಾರು ಆರಂಭಕ್ಕೂ ಮುನ್ನ 94 ತಾಲ್ಲೂಕುಗಳಲ್ಲಿ ಮಾತ್ರ ಇತ್ತು.

‘ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿನ 1,300ಕ್ಕೂ ಹೆಚ್ಚು ವೀಕ್ಷಣಾ ಕೊಳವೆ ಬಾವಿಗಳು ಮೂಲಕ ಅಂತರ್ಜಲ ಮಟ್ಟ ಸಂಬಂಧ ಮುಂಗಾರು ಪೂರ್ವ ಮತ್ತು ನಂತರದ ದತ್ತಾಂಶ ಸಂಗ್ರಹಿಸಿದ್ದೇವೆ. ಪ್ರಸಕ್ತ ವರ್ಷದ ಅತಿವೃಷ್ಟಿ ಮತ್ತು ಪ್ರವಾಹದಿಂದ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದ್ದು ದೃಢಪಟ್ಟಿದೆ’ ಎಂದು ಅಂತರ್ಜಲ ಇಲಾಖೆಯ ನಿರ್ದೇಶಕ ರಾಮಚಂದ್ರಯ್ಯ ತಿಳಿಸಿದರು.

ಬಳ್ಳಾರಿ, ವಿಜಯನಗರ, ದಾವಣಗೆರೆ, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಗರಿಷ್ಠ 5 ಮೀಟರ್‌ ತಲುಪಿದೆ. 22 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟವು 3 ಮೀಟರ್‌ವರೆಗೆ ಅಲ್ಪ ಕುಸಿದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿ 25.11 ಮೀಟರ್‌ ಮತ್ತು ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ 10 ಮೀಟರ್‌ಗಳಷ್ಟು ಅತಿ ಹೆಚ್ಚು ಕುಸಿದಿದೆ.

‘ರಾಜ್ಯದಲ್ಲಿ ಎರಡು ವರ್ಷದಲ್ಲಿ ಸರಾಸರಿಗಿಂತ 3 ಪಟ್ಟು ಹೆಚ್ಚು ಮಳೆ ಆಗಿದೆ. ಸಸ್ಯವರ್ಗ ಸುಧಾರಿಸಿದರೆ ಸೂರ್ಯನ
ಶಾಖ ಮತ್ತು ಗಾಳಿಯಿಂದ ನೀರು ಆವಿ ಆಗುವ ಪ್ರಮಾಣ ತಗ್ಗಿಸಬಹುದು’ ಎಂದು ಜಲ ಭೂವಿಜ್ಞಾನಿ ಡಾ.ದೇವರಾಜ್ ರೆಡ್ಡಿ ಎನ್.ಜೆ ತಿಳಿಸಿದ್ದಾರೆ.

*
ನೀರಿಲ್ಲದೆ ಸ್ಥಗಿತವಾಗಿದ್ದ 20 ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿವೆ. ಮಳೆಯಿಂದ ಕೆರೆಗಳಲ್ಲಿ ಸಾಕಷ್ಟು ನೀರು ನಿಂತಿದೆ. ಕೃಷಿ ಜಮೀನಿನಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಿದೆ.
-ಮಲ್ಲಿಕಾರ್ಜುನ ಅವಂಟಿ, ರೈತ, ಕೊಡ್ಲಿ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT