ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆಯಲ್ಲಿ ಓಡಿದ ಗಜಪಡೆ; ಗದ್ದೆ, ತೋಟಕ್ಕೆ ನುಗ್ಗಿ ಫಸಲು ನಾಶ

Last Updated 11 ಜನವರಿ 2022, 3:40 IST
ಅಕ್ಷರ ಗಾತ್ರ

ಹುಣಸೂರು: ಇಲ್ಲಿನ ನಾಗರಹೊಳೆ ವೀರನಹೊಸಹಳ್ಳಿ ವಲಯದಿಂದ ಹೊರಬಂದ ಕಾಡಾನೆ ಹಿಂಡನ್ನು ಲಕ್ಷ್ಮಣತೀರ್ಥ ನದಿಯ ನಾಲೆ ಮೂಲಕ ಕಾಡಿಗೆ ಅಟ್ಟಲಾಗಿದೆ.

ನೀರು ಹರಿಯುತ್ತಿರುವ ನಾಲೆಯಲ್ಲಿ 6 ಕಾಡಾನೆಗಳು ಓಡುತ್ತಿರುವ ಹಾಗೂ ಗ್ರಾಮಸ್ಥರು ಜೋರಾಗಿ ಕೂಗುತ್ತಾ ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆನೆಗಳು ನಾಲೆಯ ಏರಲು ಪ್ರಯತ್ನಿಸಿದ್ದು, ಸಾಧ್ಯವಾಗಿಲ್ಲ.

ಆನೆಗಳು ಕಾಡಿನಿಂದ ಹೊರಬಾರದಂತೆ ತಡೆಯಲು ಅರಣ್ಯ ಇಲಾಖೆ ರಾತ್ರಿ ಪಾಳಿಯಲ್ಲಿ 16 ಸಿಬ್ಬಂದಿ ನಿಯೋಜಿಸಿತ್ತು. ಆದರೆ, ಭಾನುವಾರ ಇವರ ಕಣ್ತಪ್ಪಿಸಿ 6 ಕಾಡಾನೆಗಳು ಗ್ರಾಮಗಳತ್ತ ನುಸುಳಿದ್ದವು.

ಗುರುಪುರ ಟಿಬೆಟ್ ಕ್ಯಾಂಪ್‌ ಮಾರ್ಗವಾಗಿ ಕಂದಕ ದಾಟಿ ಬಂದ ಕಾಡಾನೆಗಳು ಪಾಲ, ಕೂಡ್ಲೂರು, ತಟ್ಟೆಕೆರೆ, ಚೆನ್ನಸೋಗೆ ಭಾಗಗಳ ರೈತರ ಗದ್ದೆ, ತೋಟಗಳಲ್ಲಿನ ಬೆಳೆಗಳನ್ನು ನಾಶಪಡಿಸಿವೆ. ಬಹಳಷ್ಟು ಕಡೆ ಅಡಿಕೆ ಗಿಡಗಳನ್ನು ಹೊಸಕಿ ಹಾಕಿವೆ.

‘ಸೋಮವಾರ ನಸುಕಿನಿಂದಲೇ ಆನೆ ಓಡಿಸುವ ಕಾರ್ಯಾಚರಣೆ ನಡೆಸಲಾಯಿತು. ನಲ್ಲೂರು ಪಾಲ ನಾಲೆ ಮೂಲಕ ಆನೆಯನ್ನು ಗುರುಪುರ ಟಿಬೆಟ್ ಕ್ಯಾಂಪ್ ಮಾರ್ಗ ಅರಣ್ಯಕ್ಕೆ ಅಟ್ಟಲಾಗಿದೆ’ ಎಂದು ವೀರನಹೊಸಹಳ್ಳಿಯ ವಲಯ ಅರಣ್ಯಾಧಿಕಾರಿ ನಮನ ನಾರಾಯಣ ನಾಯಕ್ ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಿಸಿಎಫ್ ಮಹೇಶ್‌ ಕುಮಾರ್, ‘ಎಲ್ಲ ಆನೆಗಳನ್ನು ಸುರಕ್ಷಿತವಾಗಿ ಕಾಡಿಗಟ್ಟಲಾಗಿದೆ. ಗುಂಪುಗೂಡಿದ್ದ ಗ್ರಾಮಸ್ಥರನ್ನು ಪೊಲೀಸರ ನೆರವಿನಿಂದ ಚದುರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT