ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಬತ್ತು ಜಿಲ್ಲೆಗಳ 37 ಕಡೆ ಲೋಕಾಯುಕ್ತ ಶೋಧ

ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ಜಿಎಸ್‌ಟಿ ವಂಚನೆ– ಸ್ವಯಂಪ್ರೇರಿತ ಪ್ರಕರಣ ದಾಖಲು
Last Updated 27 ಡಿಸೆಂಬರ್ 2022, 15:51 IST
ಅಕ್ಷರ ಗಾತ್ರ

ಬೆಂಗಳೂರು: ಪಾನ್‌ ಮಸಾಲ, ಗುಟ್ಕಾ ಸೇರಿದಂತೆ ಜಗಿಯುವ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ಬೃಹತ್‌ ಪ್ರಮಾಣದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ನಡೆಯುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತರು, ವಿಚಾರಣೆ ಆರಂಭಿಸಿದ್ದಾರೆ. ಅದರ ಭಾಗವಾಗಿ ಲೋಕಾಯುಕ್ತ ಪೊಲೀಸರು ರಾಜ್ಯದ ಒಂಬತ್ತು ಜಿಲ್ಲೆಗಳ 37 ಸ್ಥಳಗಳಲ್ಲಿ ಮಂಗಳವಾರ ಶೋಧ ನಡೆಸಿದರು.

ಜಗಿಯುವ ತಂಬಾಕು ಉತ್ಪನ್ನಗಳ ಮೇಲೆ ಶೇಕಡ 28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಈ ಉತ್ಪನ್ನಗಳ ಉತ್ಪಾದಕರು, ಸಾಗಣೆದಾರರು ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ತೆರಿಗೆ ವಂಚಿಸುತ್ತಿರುವ ಆರೋಪವಿದೆ. ಬಿಲ್‌ಗಳನ್ನು ಸೃಜಿಸಿ, ತೆರಿಗೆ ಪಾವತಿಸದೇ ಅಕ್ರಮವಾಗಿ ಈ ಉತ್ಪನ್ನಗಳ ಸಾಗಣೆ ಮತ್ತು ಮಾರಾಟ ಮಾಡುತ್ತಿರುವ ಆರೋಪದ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅವರು ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೆರಿಗೆ ವಂಚನೆ ನಡೆಯುತ್ತಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿ ಆಧರಿಸಿ ಲೋಕಾಯುಕ್ತ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದ್ದರು. ಉತ್ಪಾದಕರು, ಸಾಗಣೆದಾರರು, ಮಾರಾಟಗಾರರು ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳು ಶಾಮೀಲಾಗಿ ತೆರಿಗೆ ವಂಚಿಸುತ್ತಿರುವ ಕುರಿತು ತನಿಖಾ ತಂಡ ಲೋಕಾಯುಕ್ತರಿಗೆ ವರದಿ ಸಲ್ಲಿಸಿತ್ತು.

ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್‌ ಕುಮಾರ್‌ ಠಾಕೂರ್‌ ನೇತೃತ್ವದಲ್ಲಿ ಬೆಂಗಳೂರು, ತುಮಕೂರು, ಧಾರವಾಡ, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ಬೀದರ್‌ ಮತ್ತು ಮೈಸೂರು ಜಿಲ್ಲೆಗಳ 37 ಸ್ಥಳಗಳ ಮೇಲೆ ಮಂಗಳವಾರ ಏಕಕಾಲಕ್ಕೆ ದಾಳಿಮಾಡಿ, ಶೋಧ ನಡೆಸಲಾಗಿದೆ. 150 ಪೊಲೀಸ್‌ ಅಧಿಕಾರಿಗಳನ್ನು ಒಳಗೊಂಡ 37 ತಂಡಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.

ಈ ಒಂಬತ್ತು ಜಿಲ್ಲೆಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಜಂಟಿ ಆಯುಕ್ತರು, ಉಪ ಆಯುಕ್ತರು ಸಹಾಯಕ ಆಯುಕ್ತರು ಮತ್ತು ವಾಣಿಜ್ಯ ತೆರಿಗೆ ಇನ್‌ಸ್ಪೆಕ್ಟರ್‌ಗಳ ಕಚೇರಿಗಳಲ್ಲಿ ಶೋಧ ನಡೆಯುತ್ತಿದೆ. ಈ ಜಿಲ್ಲೆಗಳಲ್ಲಿ ತಲಾ ಒಂದು ಕಚೇರಿಯಲ್ಲಿ ಶೋಧ ನಡೆಸಿದ್ದು, ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.

ಚಿತ್ರದುರ್ಗದ ಸಿದ್ದು ಪ್ಯಾಕೇಜಿಂಗ್‌ ಇಂಡಸ್ಟ್ರೀಸ್‌ (ಸಿದ್ದು ಪಾನ್‌ ಮಸಾಲ), ಬಳ್ಳಾರಿಯ ಮಂಜುನಾಥ ಏಜೆನ್ಸೀಸ್‌, ಬಾಗಲಕೋಟೆಯ ವಿ.ಎಂ. ಟ್ರೇಡರ್ಸ್‌ ಸೇರಿದಂತೆ 25 ಖಾಸಗಿ ಉದ್ಯಮಗಳ ಕಚೇರಿಗಳು, ಗೋದಾಮುಗಳು, ವಿತರಣಾ ಕೇಂದ್ರಗಳ ಮೇಲೆ ದಾಳಿ ಮಾಡಿ, ಶೋಧ ನಡೆಸಲಾಗಿದೆ. ಈ ಸಂಸ್ಥೆಗಳು ನಡೆಸಿರುವ ವಹಿವಾಟು, ತೆರಿಗೆ ಪಾವತಿ ವಿವರ, ಬ್ಯಾಂಕ್‌ನಲ್ಲಿ ನಡೆಸಿರುವ ಹಣಕಾಸು ವಹಿವಾಟು ಹಾಗೂ ದಾಸ್ತಾನು ಇರಿಸಿಕೊಂಡಿರುವ ತಂಬಾಕು ಉತ್ಪನ್ನಗಳ ಪ್ರಮಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದೆ.

ತೆರಿಗೆರಹಿತ ವಹಿವಾಟು ಪತ್ತೆ

‘ಗೋದಾಮುಗಳಲ್ಲಿ ಬೃಹತ್‌ ಪ್ರಮಾಣದ ದಾಸ್ತಾನನ್ನು ಲೆಕ್ಕಪತ್ರ ಇಲ್ಲದೇ ಇರಿಸಿಕೊಂಡಿರುವುದು ಪತ್ತೆಯಾಗಿದೆ. ಖರೀದಿ ಮತ್ತು ಮಾರಾಟದ ಇನ್‌ವಾಯ್ಸ್‌, ದಾಸ್ತಾನು ರಿಜಿಸ್ಟರ್‌ ಇಲ್ಲದೇ ತಂಬಾಕು ಉತ್ಪನ್ನಗಳನ್ನು ಸಂಗ್ರಹಿಸಿರುವುದು ಕಂಡುಬಂದಿದೆ. ಜಿಎಸ್‌ಟಿ ವಂಚಿಸಿ ಮಾರಾಟ ಮಾಡುವುದಕ್ಕಾಗಿ ಈ ಮಾರ್ಗ ಅನುಸರಿಸಲಾಗುತ್ತಿದೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಮೀಲಾಗದೇ ಈ ವಂಚನೆ ನಡೆಯಲು ಸಾಧ್ಯವಿಲ್ಲ’ ಎಂದು ಲೋಕಾಯುಕ್ತದ ತನಿಖಾ ತಂಡ ತಿಳಿಸಿದೆ.

ಕೆಲವು ವರ್ತಕರು ಜಿಎಸ್‌ಟಿ ನೋಂದಣಿ ಸಂಖ್ಯೆಯನ್ನೇ ಹೊಂದಿರಲಿಲ್ಲ. ಕೆಲವೆಡೆ ದಾಸ್ತಾನು ಮತ್ತು ರಿಜಿಸ್ಟರ್‌ನಲ್ಲಿ ಲೆಕ್ಕ ಹೊಂದಿಕೆಯಾಗುತ್ತಿಲ್ಲ. ತೆರಿಗೆ ವಂಚನೆಯನ್ನು ಖಚಿತಪಡಿಸಬಲ್ಲ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ತಂಡ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT