ಬುಧವಾರ, ನವೆಂಬರ್ 25, 2020
19 °C
ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿ: ಶಿಕ್ಷಕರಿಂದಲೂ ಒತ್ತಾಯ

ದುಡಿದರೂ ವೇತನ ನೀಡದ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಐದು ತಿಂಗಳ ವೇತನವನ್ನು ಸರ್ಕಾರ ಬಿಡುಗಡೆ ಮಾಡುತ್ತಿದ್ದಂತೆಯೇ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಶಿಕ್ಷಕರೂ ವೇತನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

‘ವಿಶೇಷ ಪ್ರಕರಣ ಎಂದು ಪರಿಗಣಿಸಿ ಅತಿಥಿ ಉಪನ್ಯಾಸಕರಿಗೆ ಮಾರ್ಚ್‌ನಿಂದ ಆಗಸ್ಟ್‌ವರೆಗಿನ ವೇತನ ಪಾವತಿಸಲು ₹55.70 ಕೋಟಿ ಬಿಡುಗಡೆ ಮಾಡಿದೆ. ಉಳಿದ ₹30.22 ಕೋಟಿ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದೂ ತಿಳಿಸಿದೆ. ಆದರೆ, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ದುಡಿಯುತ್ತಿರುವ 532 ಸಿಬ್ಬಂದಿಗೆ ಏಳು ತಿಂಗಳಿನಿಂದ ವೇತನ ನೀಡಿಲ್ಲ’ ಎಂದು ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ನಾವು ಜೂನ್‌ 26ರಿಂದಲೇ ಕೆಲಸ ಮಾಡುತ್ತಿದ್ದೇವೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಮೇಲ್ವಿಚಾರಣೆ, ಮೌಲ್ಯಮಾಪನ, ಎಸ್ಸೆಸ್ಸೆಲ್ಸಿ ಅನುತ್ತೀರ್ಣರಾದ ಮಕ್ಕಳಿಗೆ ವಿಶೇಷ ತರಗತಿ ಮಾಡಿದ್ದೇವೆ. ಕೆಲಸ ಮಾಡಿದರೂ ನಮಗೆ ಮಾತ್ರ ವೇತನ ಪಾವತಿಸುತ್ತಿಲ್ಲ’ ಎಂದು ಅವರು ಹೇಳಿದರು.

ಬಿಬಿಎಂಪಿ ಶಿಕ್ಷಕರ ಒತ್ತಾಯ

‘ಕೋವಿಡ್‌ ಕರ್ತವ್ಯಕ್ಕೆ ಹಾಜರಾದ ಹೊರಗುತ್ತಿಗೆ ಶಿಕ್ಷಕರಿಗೆ ಬಿಬಿಎಂಪಿಯು ಆಗಸ್ಟ್‌ ತಿಂಗಳ ವೇತನ ಮಾತ್ರ ಪಾವತಿಸಿದೆ. ಕೋವಿಡ್‌ ಕರ್ತವ್ಯವಲ್ಲದೆ ವಿದ್ಯಾಗಮ, ಎಸ್ಸೆಸ್ಸೆಲ್ಸಿ ಮೌಲ್ಯಮಾಪನದ ಕರ್ತವ್ಯ ಮಾಡಿದ್ದರೂ ಉಳಿದ ಐದು ತಿಂಗಳ ವೇತನವನ್ನು ಬಿಬಿಎಂಪಿ ಪಾವತಿಸಿಲ್ಲ’ ಎಂದು ಹೊರಗುತ್ತಿಗೆ ಶಿಕ್ಷಕರೊಬ್ಬರು ಹೇಳಿದರು.

‘ಮೇ ಮತ್ತು ಜೂನ್‌ನಲ್ಲಿ ಲಾಕ್‌ಡೌನ್‌ ಇತ್ತು. ಸಾರಿಗೆ ವ್ಯವಸ್ಥೆ ಸರಿಯಾಗಿ ಇರದ ಕಾರಣ ಕೋವಿಡ್ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೆ, ವಿದ್ಯಾಗಮ ಸೇರಿದಂತೆ ಎಲ್ಲ ಕರ್ತವ್ಯ ನಿರ್ವಹಿಸಿದ್ದೇವೆ. ಈಗ ಕೋವಿಡ್ ಕರ್ತವ್ಯಕ್ಕೆ ಹಾಜರಾಗದವರಿಗೆ ವೇತನ ನೀಡಲಾಗದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು