ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40% ಕಮಿಷನ್‌ಗೆ ಮಾಡಾಳ್ ಮಗನ ಪ್ರಕರಣಕ್ಕಿಂತ ಸಾಕ್ಷಿ ಬೇಕಾ?: ಶಾಗೆ ಎಚ್‌ಡಿಕೆ

Last Updated 3 ಮಾರ್ಚ್ 2023, 11:06 IST
ಅಕ್ಷರ ಗಾತ್ರ

ಬೆಂಗಳೂರು: ಲಂಚ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗನ ವಿಷಯ ಪ್ರಸ್ತಾಪಿಸಿ ಇಂದು ರಾಜ್ಯಕ್ಕ ಆಗಮಿಸಿರುವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯಕ್ಕೆ ಮತ್ತೆ ಇಂದು ಹಾರಿ ಬಂದ ಅಮಿತ್ ಶಾ ಅವರಿಗೆ ಹಾರ್ದಿಕ ಸ್ವಾಗತ.. ಸುಸ್ವಾಗತ. ನಿಮ್ಮ ಡಬಲ್ ಎಂಜಿನ್ ಸರಕಾರ ಭರ್ತಿ 40% ಕಮೀಷನ್ ಉಡಾಯಿಸುತ್ತಿದೆ ಎನ್ನುವುದಕ್ಕೆ ನಿಮ್ಮ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಕಂತೆ ಕಂತೆಗಳ ಪುರಾಣವೇ ದೊಡ್ಡ ಪುರಾವೆ. #ಕಮೀಷನ್‌ರಾಜ್ಯವಲ್ಲಕರ್ನಾಟಕ ಎಂದು ಹ್ಯಾಷ್ ಟ್ಯಾಗ್ ಕೊಟ್ಟು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಹಾಗೂ ಸರ್‌ ಎಂ.ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಸಾಬೂನು ಕಾರ್ಖಾನೆಯನ್ನು ಸ್ವಚ್ಚಗೊಳಿಸುವುದು ಎಂದರೆ ಇದೇನಾ? ನಿಮ್ಮ ʼಸ್ವಚ್ಚ ಭಾರತ್‌ʼ ಪರಿಕಲ್ಪನೆಯೇ ಅದ್ಭುತ!! ವಾರೆವ್ಹಾ.. ಅಮಿತ್‌ ಶಾ ಅವರೇ!! ಈಗ ಹೇಳಿ.. ಕರ್ನಾಟಕ ಯಾರ ಎಟಿಎಂ? ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದು ನೀವು ಹೇಳಿದ್ದು ಈ ಅರ್ಥದಲ್ಲಿಯಾ? ಭ್ರಷ್ಟಾಚಾರ ಮುಕ್ತ ಮಾಡುವುದು ಎಂದರೆ ಅಪ್ಪನ ಪರವಾಗಿ ಪುತ್ರರತ್ನ ಕಂತೆಕಂತೆ ಕಟ್ಟುಗಳನ್ನು ಸ್ವಂತ ಎಟಿಎಂಗೆ ಇಳಿಸುವುದಾ? ಸಾಬೂನು ಕಾರ್ಖಾನೆಯನ್ನು ಸಖತ್ತಾಗಿ ಸಾರಿಸಿ ಗಂಡಾಂತರ ಮಾಡುವುದಾ? ಎಂದು ಕುಟುಕಿದ್ದಾರೆ

ನಿಮ್ಮ ಡಬಲ್ ಎಂಜಿನ್ ಸರಕಾರ 40% ಕೊಚ್ಚೆಯಲ್ಲಿ ಉರುಳಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಬೇಕಾ? ಕನ್ನಡಿಗರ ಹೆಮ್ಮೆಯ ಪ್ರತೀಕ ಸಾಬೂನು ಕಾರ್ಖಾನೆಯನ್ನು 40% ಕಮೀಷನ್ ಸೋಪಿನಿಂದ ಭರ್ಜರಿಯಾಗಿ ತೊಳೆಯುತ್ತಿರುವ ಬಿಜೆಪಿ ಪಕ್ಷದ ಶಾಸಕರ ಬೆನ್ನು ತಟ್ಟುವಿರೋ ಅಥವಾ ಪಕ್ಷದಿಂದ ಹೊರಗಟ್ಟುವಿರೋ? ಶಾಸಕರ ಪುತ್ರರತ್ನ ಪಸಂದಾಗಿರಿಸಿದ್ದ ಕಂತೆಗಳು ಯಾರ ಹುಂಡಿಗೆ? ಶಾಸಕರ ಮನೆಯಲ್ಲೇ 6 ಕೋಟಿ ಸಿಕ್ಕರೆ, ಇನ್ನು 40% ಪರ್ಸಂಟ್‌ ಚರಂಡಿಯಲ್ಲಿ ತೆವಳುತಿರುವ ಸಚಿವರ ಮನೆಗಳಲ್ಲಿ ಇನ್ನೆಷ್ಟು ಸಿಗಬಹುದು? ರಾಮರಾಜ್ಯ ಮಾಡುತ್ತೇವೆಂದು ಹೇಳಿ ಕರ್ನಾಟಕವನ್ನು ʼಕಮಿಷನ್‌ ರಾಜ್ಯʼ ಮಾಡಿದ್ದೀರಿ. ಹೌದಲ್ಲವೇ ಅಮಿತ್ ಶಾ ಅವರೇ? ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ನಿನ್ನೆ ನಾನು ಹೇಳಿದ್ದೆ; ಈ ರೀತಿ ಪರ್ಸಂಟೇಜ್ ವ್ಯವಹಾರ ಮುಂದುವರಿದರೆ ಮುಂದೆ 10 ಪರಪ್ಪನ ಅಗ್ರಹಾರ ಜೈಲುಗಳಾನ್ನಾದರೂ ಕಟ್ಟಿಸಬೇಕಾಗುತ್ತದೆ ಎಂದು. ಕಳೆದ ಮೂರೂವರೆ ವರ್ಷದಿಂದ ಕಮೀಷನ್ ಕೊಚ್ಚೆಯಲ್ಲಿ ಉರುಳಾಡಿದ್ದ ಬಿಜೆಪಿ ಸರಕಾರ, ಈಗ ನೋಟಿನ ಕಂತೆಗಳೊಂದಿಗೆ ಆ ಅಸಹ್ಯದ ಪರಾಕಾಷ್ಠೆಯನ್ನು ದರ್ಶನ ಮಾಡಿಸಿದೆ. ಕಾಂಗ್ರೆಸ್‌ 20%, ಬಿಜೆಪಿ 40%.
ಕರ್ನಾಟಕವನ್ನು 'ಕಮಿಷನ್‌ ರಾಜ್ಯ' ಮಾಡಿದ ಪಾಪ ಈ ರಾಷ್ಟ್ರೀಯ ಪಕ್ಷಗಳದ್ದು, ಇಂಥ ಪಾಪದ ದುಡ್ಡಿನಿಂದಲೇ ಚುನಾವಣೆ ನಡೆಸುವ ಕಮೀಷನ್‌ʼಗೇಡಿ ಪಕ್ಷಗಳ ಅಸಲಿ ಮುಖವನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಕರ್ನಾಟಕಕ್ಕೆ ʼಕಮಿಷನ್ ರಾಜ್ಯʼ ಎಂಬ ಹಣೆಪಟ್ಟಿ ಶಾಶ್ವತವಾಗುವ ಅಪಾಯವಿದೆ ಎಂದು ಹೇಳಿದ್ದಾರೆ.

ಇಂಥ ಪ್ರಕರಣಗಳೆಲ್ಲ ಕೊನೆಗೆ ಏನಾದವು ಎನ್ನುವುದು ಜನರಿಗೆ ಚೆನ್ನಾಗಿ ಗೊತ್ತು. ಸಾಂವಿಧಾನಿಕ ಸಂಸ್ಥೆಗಳನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ, ಅವು ತನಿಖೆ ನಡೆಸುತ್ತಿರುವ ಪ್ರಕರಣಗಳು ಯಾವ ರೀತಿ ಹಳ್ಳ ಹಿಡಿದು ಹೋಗಿವೆ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿರುವ ಸತ್ಯ. ಜನತಾ ನ್ಯಾಯಾಲಯದಲ್ಲೇ ಇಂಥ ನಿರ್ಲಜ್ಜ ಪ್ರಕರಣಗಳಿಗೆ ಮುಕ್ತಿ ಕಾಣಿಸಬೇಕು. ಜನರದ್ದೇ ಅಂತಿಮ ತೀರ್ಪು ಹಾಗೂ ಜನರೇ ಪ್ರಜಾಪ್ರಭುತ್ವ ಉಳಿಸಬೇಕು ಎನ್ನುವುದು ನನ್ನ ಅಭಿಪ್ರಾಯ. 2023ಕ್ಕೆ ಆರೂವರೆ ಕೋಟಿ ಕನ್ನಡಿಗರು ನೀಡುವ ಜನಾದೇಶ ಈ ದಿಕ್ಕಿನಲ್ಲೇ ಇರುತ್ತದೆ ಎಂಬ ವಿಶ್ವಾಸ ನನ್ನದು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇವನ್ನೂ ಒದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT